55,575 ಕೋಟಿ ರೂಪಾಯಿ ಜಿಎಸ್​ಟಿ ವಂಚನೆ; ಎರಡು ವರ್ಷದಲ್ಲಿ 719 ಮಂದಿ ಬಂಧನ

GST
Published on


ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 55,575 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಂಚನೆ ಪತ್ತೆ ಹಚ್ಚಲಾಗಿದ್ದು, 719 ಜನರನ್ನು ಈ ಸಂಬಂಧ ಬಂಧಿಸಲಾಗಿದೆ. ಜಿಎಸ್​ಟಿ ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಜಿಐ) ಅಧಿಕಾರಿಗಳು, 22,300ಕ್ಕೂ ಅಧಿಕ ಹುಸಿ ಜಿಎಸ್​ಟಿ ಗುರುತು ಸಂಖ್ಯೆ (ಜಿಎಸ್​ಟಿಐಎನ್) ಕೂಡ ಪತ್ತೆ ಹಚ್ಚಿದ್ದಾರೆ. ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಆರೋಪದಲ್ಲಿ 20 ಸಿಎ/ಸಿಎಸ್ ವೃತ್ತಿಪರರ ಸಹಿತ 700ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಅನ್ನು ಮೋಸದಿಂದ ಪಡೆದು ವರ್ಗಾಯಿಸುವ ವಂಚನೆ ಪ್ರವೃತ್ತಿ ವಿರುದ್ಧ ಸರ್ಕಾರ 2020 ನವೆಂಬರ್ 9ರಂದು ರಾಷ್ಟ್ರವ್ಯಾಪಿ ವಿಶೇಷ ಅಭಿಯಾನ ಆರಂಭಿಸಿತ್ತು. ಹುಸಿ ಇನ್​ವಾಯ್್ಸಳನ್ನು ನೀಡುವ ಮೂಲಕ ಜಿಎಸ್​ಟಿಯನ್ನು ಕಟ್ಟದೆ ವಂಚಿಸಲಾಗುತ್ತಿತ್ತು. ಈ ಅವಧಿಯಲ್ಲಿ ಸ್ವಯಂಪ್ರೇರಣೆಯಿಂದ 3,050 ಕೋಟಿ ರೂಪಾಯಿ ಜಿಎಸ್​ಟಿ ಠೇವಣಿ ಮಾಡಲಾಗಿದೆ.

61 ಸಾವಿರದಿಂದ ಕೆಳಗಿಳಿದ ಸೆನ್ಸೆಕ್ಸ್: ಬಾಂಬೆ ಷೇರುಪೇಟೆಯ ಗುರುವಾರ 410 ಅಂಶದಷ್ಟು ಕುಸಿತವಾಗಿ 61,000 ಪಾಯಿಂಟ್​ಗಿಂತ ಕಡಿಮೆಯಲ್ಲಿ ನಿಂತಿದೆ. ರೂಪಾಯಿ ಮೌಲ್ಯದ ಕುಸಿತ ಕೂಡ ಷೇರು ಪೇಟೆ ಬೆಲೆಗಳ ಮೇಲೆ ದುಷ್ಪರಿಣಾಮ ಬೀರಿದೆ. 30 ಷೇರುಗಳ ಬಿಎಸ್​ಇ ಸೆನ್ಸೆಕ್ಸ್ 419.85 ಪಾಯಿಂಟ್ ( ಶೇ. 0.69) ಇಳಿಕೆಯಾಗಿ 60,613.70ರಲ್ಲಿ ನಿಂತಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ 128.80 ಪಾಯಿಂಟ್ (ಶೇ. 0.71) ಕುಸಿತವಾಗಿ 18,028.20ರಲ್ಲಿ ವ್ಯವಹಾರ ಮುಗಿಸಿತು.

ಅಮೆರಿಕ ಹಣದುಬ್ಬರ ಇಳಿಕೆ

ಅಮೆರಿಕದ ಅಕ್ಟೋಬರ್ ಹಣದುಬ್ಬರ ದರ ಶೇಕಡ 7.7ಕ್ಕೆ ತುಸು ಇಳಿಕೆ ಆಗಿದೆ. ಸೆಪ್ಟೆಂಬರ್​ಗಿಂತ ಶೇ. 04ರಷ್ಟು ತಗ್ಗಿದೆ. ಇದು 12 ತಿಂಗಳಲ್ಲಿ ಅತ್ಯಂತ ಕಡಿಮೆ ಹಣ್ಣದುಬ್ಬರವಾಗಿದೆ ಎಂದು ಕಾರ್ವಿುಕ ಇಲಾಖೆ ಗುರುವಾರ ತಿಳಿಸಿದೆ. ಹಣದುಬ್ಬರ ಕಡಿಮೆ ಆಗಿರುವುದರಿಂದ ಫೆಡರಲ್ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೆ 70 ಮೂಲಾಂಶ ಬಡ್ಡಿ ದರ ಏರಿಸಲಾಗಿತ್ತು. ಗ್ರಾಹಕ ಆಧಾರಿತ ಹಣದುಬ್ಬರ (ಸಿಪಿಐ) ಶೇಕಡ 8 ಅಥವಾ ಅದಕ್ಕಿಂತ ಮೇಲೆ ಇರಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದರು. ಅಮೆರಿಕದ ಹಣದುಬ್ಬರ ಜೂನ್​ನಲ್ಲಿ ಶೇಕಡ 9.1ಕ್ಕೆ ಗರಿಷ್ಠ ಮಟ್ಟಕ್ಕೆ ಏರಿತ್ತು.

ಚಿನ್ನ ಏರಿಕೆ, ಬೆಳ್ಳಿ ಇಳಿಕೆ

ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 135 ರೂ. ಏರಿಕೆಯಾಗಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 51,898 ರೂ.ಗೆ ಮುಟ್ಟಿದೆ. ಬೆಳ್ಳಿ ಬೆಲೆ 250 ರೂ. ಇಳಿಕೆಯಾಗಿ ಕೆ.ಜಿ. ಧಾರಣೆ 61.618 ರೂ.ಗೆ ತಗ್ಗಿದೆ.

7 ಪೈಸೆ ಏರಿಕೆ 

ಗುರುವಾರ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆ ಕಂಡಿತು. ಸ್ಥಳೀಯ ಕರೆನ್ಸಿ ವಿನಿಮಯ ದರ 81.40 ರೂ. ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net