

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಜತೆಗೆ ಅಷ್ಟೇ ಟ್ರೋಲ್ ಆಗುತ್ತದೆ. ರಶ್ಮಿಕಾ ಸಾಮಾಜಿಕ ಜಾಲತಾಣದ ಮೂಲಕ ಅನೇಕ ಟೀಕೆಗಳನ್ನೂ ಕೇಳಿಸಿಕೊಂಡಿದ್ದಾರೆ. ಇದೀಗ ರಶ್ಮಿಕಾ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
'ನನ್ನ ಕೆಲಸದ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಪರಿಶ್ರಮ ಪಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಹೆಚ್ಚು ಯೋಚಿಸುತ್ತೇನೆ. ನನ್ನ ಕೆಲಸ ಯಾವತ್ತೂ ನೀವೆಲ್ಲರೂ ಹೆಮ್ಮ ಪಡುವಂತೆ ಇರಲು ಪ್ರಯತ್ನಿಸುತ್ತೇನೆ. ಆದರೆ ನಾನಿಂದು ಹೇಳದೇ ಇರುವ ವಿಚಾರವೊಂದಕ್ಕೆ ನನ್ನನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಇದು ನನಗೆ ಅತೀವ ಬೇಸರ ತರಿಸಿದೆ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
'ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿದ್ದೆ. ಆದರೆ ನನಗೆ ತೊಂದರೆಯಾದಾಗ ಮಾತನಾಡಬೇಕಿತ್ತು. ನಾನು ಸಿನಿಮಾ ರಂಗಕ್ಕೆ ಆಗಮಿಸಿದಾಗಿನಿಂದ ನನ್ನನ್ನು ಒಂದಲ್ಲಾ ಒಂದು ಕಾರಣಕ್ಕೆ ಕೆಲವರು ದ್ವೇಷ ಮಾಡುತ್ತಲೇ ಬರುತ್ತಿದ್ದಾರೆ. ಆರಂಭದಲ್ಲಿ ನಾನು ಹಲವು ಟ್ರೋಲ್, ಟೀಕೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಈಗ ಪತ್ರಿಯೊಂದು ಟ್ರೋಲ್ಗೂ ನನ್ನನ್ನೇ ತೂಗಿ ಹಾಕಲಾಗುತ್ತಿದೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ವಿಭಿನ್ನವಾದುದು. ಇಲ್ಲಿ ನಿಮಗೆ ನಾನು ಇಷ್ಟ ಇಲ್ಲ ಎಂದ ಮಾತ್ರಕ್ಕೆ, ನನ್ನ ಬಗ್ಗೆ ಸುಳ್ಳನ್ನೇ ಹಬ್ಬಿಸಬಹುದು ಎಂಬ ಮನಸ್ಥಿತಿ ಸರಿಯಲ್ಲ.'
‘ಕೆಲವು ಸಂದರ್ಶನಗಳಲ್ಲಿನ ನನ್ನ ಹೇಳಿಕೆಯನ್ನು ಟ್ರೋಲ್ ಮಾಡಿ ತಿರುಚಲಾಗುತ್ತಿದೆ. ಇದು ನನ್ನ ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡಲು ಕಾರಣವಾಗುತ್ತಿದೆ. ಒಳ್ಳೆಯ ಟೀಕೆಯನ್ನು ನಾನು ಸ್ವಾಗತಿಸಲು ಸದಾ ಸಿದ್ದನಿದ್ದೇನೆ. ಆದರೆ ನನ್ನ ಮಾತುಗಳನ್ನು ತಿರುಚಿ, ಸುಳ್ಳುಗಳನ್ನೇ ಹಬ್ಬಿಸುವುದರಿಂದ ಏನು ಲಾಭವಿದೆ' ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ.