

ಪಾಕಿಸ್ತಾನ: ಪ್ರೀತಿ ಮೂಡಲು ವಯಸ್ಸಿನ ಹಂಗಿಲ್ಲ ಎಂದು ಹೇಳುತ್ತಾರೆ. ಯಾರಿಗೆ ಯಾವ ಕ್ಷಣದಲ್ಲಿ, ಯಾರ ಮೇಲೆ ಪ್ರೀತಿ ಮೂಡುತ್ತದೆ ಎಂಬುವುದನ್ನು ಊಹಿಸಲೂ ಸಾಧ್ಯವಿರುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಪೋಲೆಂಡ್ ದೇಶದ ಮಹಿಳೆಯೊಬ್ಬಳ ಜತೆಗೆ ವಿವಾಹವಾಗಿದ್ದಾನೆ. ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಕಾರಣ ಇವರಿಬ್ಬರ ವಯಸ್ಸು. ಪಾಕಿಸ್ತಾನ ಯುವಕನಿಗೆ 28 ವರ್ಷವಾಗಿದ್ದರೆ, ಪೋಲೆಂಡ್ ಮಹಿಳೆಗೆ 83 ವಯಸ್ಸು.
ಕಳೆದ 6 ವರ್ಷಗಳ ಹಿಂದೆ ಇವರಿಬ್ಬರಿಗೂ ಫೇಸ್ಬುಕ್ ಮೂಲಕ ಪರಿಚಯವಾಗಿದೆ. ದಿನ ನಿತ್ಯ ಮೆಸೇಜ್ ಮೂಲಕ ಆರಂಭವಾದ ಮಾತುಕಥೆಯ ಮೂಲಕ ಸ್ನೇಹಿತರಾಗಿದ್ದಾರೆ. ಆಪ್ತವಾದ ಸ್ನೇಹ ನಿಧಾನವಾಗಿ ಪ್ರೀತಿಯೆಡೆಗೆ ತಿರುಗಿದೆ.
28 ವರ್ಷದ ಹಫೀಜ್ ಮಹಮ್ಮದ್ ನದೀಮ್ ಎಂಬಾತ, ಹಫೀಜಾಬಾದ್ನಲ್ಲಿ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡಿದ್ದ. ಈ ವೇಳೆ ಫೇಸ್ಬುಕ್ ಮೂಲಕ ಪೋಲೆಂಡ್ ದೇಶದಲ್ಲಿದ್ದ 83 ವರ್ಷದ ಬ್ರೋಮಾ ಎಂಬ ಅಜ್ಜಿಯ ಪರಿಚಯವಾಗಿದೆ. ಮದುವೆಗೂ ಮೊದಲು ಒಂದು ಬಾರಿಯೂ ಇವರಿಬ್ಬರು ಭೇಟಿಯಾಗಿಲ್ಲ ಎಂಬುವುದು ವಿಶೇಷ.
ಇವರಿಬ್ಬರ ಪ್ರೀತಿಗೆ ಯಾರೂ ಅಡ್ಡ ಬಂದಿಲ್ಲ. ಇಸ್ಲಾಮಿಕ್ ಕಾನೂನಿನಡಿಯಲ್ಲಿ ಒಪ್ಪಿಗೆ ಪಡೆದು, ಇಸ್ಲಾಂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ನಂತರ ಬ್ರೋಮಾ ತನ್ನ ಹೆಸರನ್ನು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಫಾತೀಮಾ ಎಂದು ಬದಲಾಯಿಸಿಕೊಂಡಿದ್ದಾಳೆ.(ಏಜೆನ್ಸೀಸ್)