ಜಿಎಸ್​ಟಿ ಸಂಗ್ರಹ ಶೇ. 28 ಏರಿಕೆ; ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ

gst
Published on

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಸೂಲಿಯಲ್ಲಿ ಶೇಕಡ 28ರಷ್ಟು ಏರಿಕೆಯಾಗಿದ್ದು ಒಟ್ಟು 1,43,612 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ಜಿಎಸ್​ಟಿ ಸಂಗ್ರಹ ಸತತ ಆರು ತಿಂಗಳಿಂದ 1.4 ಲಕ್ಷ ಕೋಟಿ ಗಡಿಯನ್ನು ದಾಟುತ್ತಿದೆ. ನಿಯಮಗಳ ಸರಿಯಾದ ಪಾಲನೆ ಹಾಗೂ ಆರ್ಥಿಕ ಚೇತರಿಕೆ ಉತ್ತಮ ಜಿಎಸ್​ಟಿ ಸಂಗ್ರಹಕ್ಕೆ ಕಾರಣವಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟು 1,43,612 ಕೋಟಿ ರೂಪಾಯಿ ಸಂಗ್ರಹದಲ್ಲಿ ಕೇಂದ್ರೀಯ ಜಿಎಸ್​ಟಿ 24,710 ಕೋಟಿ, ರಾಜ್ಯ ಜಿಎಸ್​ಟಿ 30,951 ಕೋಟಿ ಹಾಗೂ ಸಮಗ್ರ ಜಿಎಸ್​ಟಿ 77,782 ಕೋಟಿ ರೂ.ಸೇರಿದೆ. 10,168 ಕೋಟಿ ರೂಪಾಯಿ ಸೆಸ್ ಕೂಡ ಒಳಗೊಂಡಿದೆ ಎಂದು ಸರ್ಕಾರ ವಿವರಿಸಿದೆ. ಜುಲೈನಲ್ಲಿ 1,12,020 ಕೋಟಿ ರೂಪಾಯಿ ಜಿಎಸ್​ಟಿ ಆದಾಯ ಸಂಗ್ರಹವಾಗಿದ್ದು ಆಗಸ್ಟ್ ನಲ್ಲಿ ಶೇಕಡ 28 ಏರಿಕೆಯಾಗಿದೆ.

ಕರ್ನಾಟಕದ ವಿಕ್ರಮ: ಅತೀ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆಗಸ್ಟ್​ನಲ್ಲಿ ಮಹಾರಾಷ್ಟ್ರ 18,684 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಿದ್ದರೆ ಕರ್ನಾಟಕ 9,583 ಕೋಟಿ ರೂ. ಸಂಗ್ರಹಿಸಿದೆ. ಸಾಮಾನ್ಯವಾಗಿ ಮಹಾರಾಷ್ಟ್ರ ಮೊದಲಿಂದಲೂ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 2ನೇ ಸ್ಥಾನದಲ್ಲಿರು ತ್ತದೆ. ಆದರೆ, ಕಳೆದೊಂದು ವರ್ಷದಲ್ಲಿ ಮೂರು ಬಾರಿ ಕರ್ನಾಟಕ ಎರಡನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಕರ್ನಾಟದಲ್ಲಿ 7,429 ಕೋಟಿ ರೂ. ಸಂಗ್ರಹವಾಗಿತ್ತು, ಈ ಬಾರಿ ಶೇ.29ರಷ್ಟು ಪ್ರಗತಿ ಕಾಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net