

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಶರಣರನ್ನು ಗುರುವಾರ ರಾತ್ರಿ ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. ಎಫ್‌ಐಆರ್ ದಾಖಲಾಗಿ ಆರು ದಿನಗಳ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಮಠಕ್ಕೆ ತೆರಳಿ ಸ್ವಾಮೀಜಿ ಅವರನ್ನು ಬಂಧಿಸಿ ಬಿಗಿ ಭದ್ರತೆಯಲ್ಲಿ ಕರೆದೊಯ್ದಿದ್ದು ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ಬಂಧನ ಭೀತಿ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಅದನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವಾರ್ಡನ್ ಅವರನ್ನು ಗುರುವಾರ ಸಂಜೆ ಪೊಲಿಸರು ವಶಕ್ಕೆ ಪಡೆದಿದ್ದರು. ರಾತ್ರಿ ಸ್ವಾಮೀಜಿ ಬಂಧನವಾಗಿದೆ.
ಮುಂಜಾಗ್ರತೆ ದೃಷ್ಟಿಯಿಂದ ಪೊಲೀಸರು ಮುರುಘಾ ಮಠ ಸೇರಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿದ್ದಾರೆ. ಸ್ವಾಮೀಜಿ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಗಳು ನಡೆದಿದ್ದವು. ಮಠದ ಅಭಿಮಾನಿಗಳು ಸಭೆ ನಡೆಸಿ ಸ್ವಾಮೀಜಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದರು.
ಹಿನ್ನೆಲೆ: ಮಠದ ವಸತಿ ಶಾಲೆಯ ಬಾಲಕಿಯರಿಬ್ಬರು ಆಗಸ್ಟ್ 26ರಂದು ಒಡನಾಡಿ ಸಂಸ್ಥೆ ಮೂಲಕ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ತೆರಳಿ ಶರಣರ ವಿರುದ್ಧ ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಎದುರು ಸಂತ್ರಸ್ತ ಬಾಲಕಿಯರನ್ನು ಹಾಜರುಪಡಿಸಿ ಹೇಳಿಕೆ ಪಡೆದ ಬಳಿಕ ಶರಣರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಆ ನಂತರದ ಬೆಳವಣಿಗೆಯಲ್ಲಿ ಪ್ರಕರಣವನ್ನು ಮೈಸೂರಿನಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ಸ್ವಾಮೀಜಿ, ವಾರ್ಡನ್, ಕಾರ್ಯದರ್ಶಿ, ವಕೀಲ, ಮಠದ ಉತ್ತರಾಧಿಕಾರಿ ಸೇರಿ ಐವರ ವಿರುದ್ಧ ಆರೋಪ ಮಾಡಲಾಗಿತ್ತು.
ಈ ನಡುವೆ ಶರಣರು ಸೋಮವಾರ ಮಠದಿಂದ ಬೆಳಗಾವಿಯತ್ತ ಹೊರಟಿದ್ದಾರೆ ಎಂಬ ಸುದ್ದಿ ಹರಡಿತ್ತಾದರೂ ಕೆಲ ಹೊತ್ತಿನಲ್ಲಿ ಮಠದಲ್ಲಿ ಕಾಣಿಸಿಕೊಂಡು ನಾನು ಪಲಾಯನವಾದಿಯಲ್ಲ. ಈ ನೆಲದ ಕಾನೂನು ಗೌರವಿಸುತ್ತೇನೆ ಎಂದು ಹೇಳಿದ್ದರು. ಆಗಸ್ಟ್ 26ರ ಮಂಗಳವಾರ ಸಂತ್ರಸ್ತ ಬಾಲಕಿಯರಿಬ್ಬರು ನ್ಯಾಯಾಧೀಶರ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.