ಕ್ರಿಕೆಟ್​ ವಿಚಾರಕ್ಕೆ ಗುಂಪುಗಳ ನಡುವೆ ಘರ್ಷಣೆ; ಕಲ್ಲು ತೂರಿ ತಲ್ವಾರ್ ಪ್ರದರ್ಶನ, ಪೊಲೀಸ್​ ಸೇರಿದಂತೆ ಎಂಟು ಮಂದಿಗೆ ಗಾಯ

Group Clash
Published on

ಬೆಳಗಾವಿ: ಕ್ರಿಕೆಟ್​ ವಿಚಾರಕ್ಕೆ ಮಕ್ಕಳಲ ನಡುವೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಿ ತಲ್ವಾರ್​ ಪ್ರದರ್ಶಿಸಿರುವ ಘಟನೆ ಬೆಳಗಾವಿ ಜಿಲ್ಲೆ ಶಹಾಪೂರ್​ ಪ್ರದೇಶದಲ್ಲಿರುವ ಅಳ್ವಾನ್​ ಗಲ್ಲಿಯಲ್ಲಿ ನಡೆದಿದೆ.

ಘಟನೆಯಲ್ಲಿ ಪೊಲೀಸ್​ ಪೇದೆ ಸೇರಿದಂತೆ ಎಂಟು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಬಾರದಂತೆ ಪೊಲೀಸರು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ.

belagavi Clash

ಘಟನೆಯ ಹಿನ್ನೆಲೆ?

ಮೇ 23ರಂದು ಸಂಜೆ 05 ಗಂಟೆ ಸುಮಾರಿಗೆ ಮಕ್ಕಳ ನಡುವೆ ಕ್ರಿಕೆಟ್​ ಆಡುವ ವಿಚಾರಕ್ಕೆ ಜಗಳ ಶುರುವಾಗಿದೆ. ಬಳಿಕ ಇದರಲ್ಲಿ ಎರಡು ಗುಂಪಿನ ಯುವಕರು ಮಧ್ಯಪ್ರವೇಶಿಸಿದ್ದು, ದೊಡ್ಡಮಟ್ಟದ ಘರ್ಷಣೆ ಉಂಟಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಿಂದೂಗಳ ಮನೆಯನ್ನು ಗುರಿಯಾಗಿಸಿ ಕಲ್ಲು ತೂರಲಾಗಿದೆ. ಈ ವೇಳೆ ಅಬ್ದುಲ್ ಎಂಬಾತ ನಡು ರಸ್ತೆಯಲ್ಲಿ ತಲ್ವಾರ್ ಪ್ರದರ್ಶನ ಮಾಡಿದ್ದು, ಯುವಕರ‌ ನಡುವಿನ ಗಲಾಟೆಯಲ್ಲಿ ಓರ್ವ ಪೊಲೀಸ್ ಪೇದೆ ಸೇರಿದಂತೆ ಎಂಟು ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮಾತನಾಡಿರುವ ಬೆಳಗಾವಿ ಜಿಲ್ಲಾ ಪೊಲೀಸ್​ ಆಯುಕ್ತ ಯಡಾ ಮಾರ್ಟಿನ್, ಕ್ರಿಕೆಟ್ ವಿಚಾರಕ್ಕೆ ಗಲಾಟೆಯಾಗಿದ್ದು ಬಳಿಕ ದೊಡ್ಡದಾಗಿದೆ. ತಲ್ವಾರ್ ಝಳಪಿಸಿದರ ಕುರಿತು ಮಾಹಿತಿ ಇದೆ. ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಗಲಾಟೆಯಲ್ಲಿ ಎಂಟು ಜನರಿಗೆ ಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಆಗದಂತೆ ಬೆಳಗಾವಿ ನಗರ ಸೇರಿದಂತೆ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ ಕರೆಯಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net