More

    ಕೆಲಸ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ; ಕಾಂಗ್ರೆಸ್​ ಶಾಸಕ ಅಜಯ್​ ಸಿಂಗ್ ಮಾಜಿ ಪಿಎ ಅರೆಸ್ಟ್

    ಬೆಂಗಳೂರು: ಮೋಸ ಹೋಗುವ ಜನರು ಎಲ್ಲಿಯವರೆಗೂ ಇರಿತ್ತಾರೋ ಅಲ್ಲಿಯವರೆಗೂ ವಂಚನೆ ಎಸಗುವವರು ಇದ್ದೇ ಇರುತ್ತಾರೆ ಎಂಬ ಮಾತನ್ನು ನಾವು ಹಲವು ಬಾರಿ ಕೇಳಿದ್ದೇವೆ ಹಾಗೂ ಕಣ್ಣಾರೇ ಕಂಡಿದ್ದೇವೆ. ಇದೀಗ ಈ ಮಾತಿಗೆ ಪೂರಕವೆಂಬಂತೆ ಕಾಂಗ್ರೆಸ್​ ಶಾಸಕ ಮಾಜಿ ಆಪ್ತ ಸಹಾಯಕನೋರ್ವ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಬಂಧಿತನನ್ನು ಪರಶುರಾಮ್​ ಪಾಟೀಲ್​ ಎಂದು ಗುರುತಿಸಲಾಗಿದ್ದು, ಈತ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅಜಯ್​ ಸಿಂಗ್​ ಅವರ ಬಳಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಖುದ್ದು ಶಾಸಕರೇ ಈತನನ್ನು ಕೆಲಸದಿಂದ ವಜಾ ಮಾಡಿದ್ದರು ಎಂದು ವರದಿಯಾಗಿದೆ.

    Ajay Singh EX PA

    ಇದನ್ನೂ ಓದಿ: ಮೈದುನನ ಮಕ್ಕಳಿಗೆ ಸ್ಕೆಚ್​ ಹಾಕಿ ಕೊಲೆಗೈದ ಹಂತಕಿ; ​ಒಂದಲ್ಲ ಎರಡಲ್ಲ ಮೂರನೇ ಕೊಲೆಗೆ ಸಿಕ್ಕಿಬಿದ್ದಳು

    ಬಂಧಿತ ವ್ಯಕ್ತಿಯೂ ಗುತ್ತಿಗೆದಾರರಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಕೆಕೆಆರ್​ಡಿಬಿಯಲ್ಲಿ ಶಾಸಕರಿಗೆ ಕೆಲಸ ಕೊಡಿಸುವುದಾಗಿ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ. ಕಲಬುರಗಿ, ಬೀದರ್ ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಜನರಿಂದ 1.50 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಪರಾರಿಯಾಗಿದ್ದ. ಮೇ 13ರಂದು ಬೀದರ್​ ಮೂಲದ ಕಿರಣ್​ ಎಂಬುವವರು ಪರಶುರಾಮ್​ ಮೋಸ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಪರಶುರಾಮ್​ ಬೆಂಗಳೂರಿ​ನ ಲಾಡ್ಜ್​ ಒಂದರಲ್ಲಿ ತಂಗಿರುವ ಬಗ್ಗೆ ಮಾಹಿತಿ ಪಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ.

    ಇನ್ನೂ ತನ್ನ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಆರೋಪಿ ಫೋನ್​ ಸ್ವಿಚ್​ಆಫ್​ ಮಾಡಿಕೊಂಡು ಕಲಬುರಗಿಯಿಂದ ಎಸ್ಕೇಪ್​ ಆಗಿ ಸೀದಾ ಬೆಂಗಳೂರಿಗೆ ಬಂದಿದ್ದಾನೆ. ಬಳಿಕ ತನ್ನ ಗುರುತು ಸಿಗಬಾರದೆಂದು ತಲೆ ಬೋಳಿಸಿಕೊಂಡು ಬೆಂಗಳೂರಿನ‌ ಲಾಡ್ಜ್ ಗಳಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ. ಇತ್ತ ಪರಶುರಾಮ್​ ಬಂಧನ ಸುದ್ದಿ ಹೊರಬರುತ್ತಿದ್ದಂತೆ ಆತನಿಂದ ಮೋಸ ಹೋಗಿರುವವರು ತಮ್ಮ ಹಣ ವಾಪಸ್​ ಕೊಡಿಸುವಂತೆ ಪೊಲೀಸರಿಗೆ ದೂರು ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts