ರೇಣುಕಸ್ವಾಮಿ ಹತ್ಯೆ ಬಳಿಕ ಮೈಮೇಲಿದ್ದ ಚಿನ್ನಾಭರಣ ದೋಚಿದ್ದ ಖದೀಮರು; ತನಿಖೆಯಲ್ಲಿ ಹೊರಬಿತ್ತು ಅಸಲಿ ಕಹಾನಿ

Darshan Raghu
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ದಿನ ಕಳೆದಂತೆ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತಿದೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರ ಒಂದು ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಗಳ ಹೇಯ ಕೃತ್ಯ ಮತ್ತೊಮ್ಮೆ ಬಟಾಬಯಲಾಗಿದೆ.

ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಅಪಹರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಘವೇಂದ್ರ ಅಲಿಯಾಸ್​ ರಾಘು ಎಂಬಾತ ಎಸಗಿರುವ ಕುಕೃತ್ಯವೊಂದು ಇದೀಗ ಬಯಲಾಗಿದೆ. ರೇಣುಕಾ ಸ್ವಾಮಿಯನ್ನು ಅಪಹರಿಸಿ ಶೆಡ್​ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವುದಲ್ಲದೆ, ರೇಣುಕಾ ಸ್ವಾಮಿಯನ್ನು ಕೊಂದ ನಂತರ ಆತನ ಮೈಮೇಲಿದ್ದ ಚಿನ್ನಾಭರಣವನ್ನು ಈ ವ್ಯಕ್ತಿ ದೋಚಿದ್ದಾನೆ ಎಂದು ಹೇಳಲಾಗುತ್ತಿದೆ.

ರೇಣುಕಸ್ವಾಮಿ ಕೊಲೆಯಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ರಾಘವೇಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಆತನಿಗೆ ಕರೆ ಮಾಡಿದ ಪ್ರಕರಣದ ಇತರ ಆರೋಪಿಗಳು 10 ಲಕ್ಷ ರೂ. ಹಣ ಕೊಡುವುದಾಗಿ ಆಮಿಷ ಒಡ್ಡಿದ್ದು, ಈತ ವಾಪಸ್​ ಬಂದು ಶವ ಸಾಗಿಸಲು ಸಹಾಯ ಮಾಡಿದ್ದ. ಈ ವೇಳೆ ರಾಘವೇಂದ್ರ ರೇಣುಕಸ್ವಾಮಿ ಮೈಮೇಲಿದ್ದ ಚಿನ್ನದ ಸರ, ಉಂಗುರ, ಬೆಳ್ಳಿ ಖಡ್ಗ ಮತ್ತು ವಾಚ್​ಅನ್ನು ಕಳ್ಳತನ ಮಾಡಿದ್ದಾನೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದಾದ ಬಳಿಕ ರಾಘವೇಂದ್ರ ತನ್ನ ಪತ್ನಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು, ಲಾಡ್ಜ್​ ಒಂದರಲ್ಲಿ ರೂಮ್​ ಮಾಡಿ ಇರಿಸಿದ್ದ ತಿಳಿದು ಬಂದಿದೆ. ಬಳಿಕ ದೋಚಿದ್ದ ಚಿನ್ನಾಭರಣವನ್ನು ತನ್ನ ಬಳಿ ಪತ್ನಿ ನೀಡಿ ವಾಪಸ್​ ಊರಿಗೆ ಕಳುಹಿಸಿದ್ದ. ಚಿತ್ರದುರ್ಗದಲ್ಲಿ ಮತ್ತೊಮ್ಮೆ ಮಹಜರು ನಡೆಸಿರುವ ಪೊಲೀಸರು ಆರೋಪಿ ರಾಘವೇಂದ್ರ ಕದ್ದಿದ್ದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇತ್ತ ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಹೊಸ ವಿಚಾರಗಳನ್ನು ಬೆಳಕಿಗೆ ತರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net