

ಫ್ಲೋರಿಡಾ: 17ನೇ ಆವೃತ್ತಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲೂ ಟಾಪ್ ರನ್ ಸ್ಕೋರರ್ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುಟುಕು ವಿಶ್ವಸಮರದಲ್ಲಿ ವಿರಾಟ್ ಯಾಕೋ ಮಂಕಾದಂತೆ ಕಾಣುತ್ತಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಐದು ರನ್ ಮಾತ್ರ. ಇತ್ತ ವಿರಾಟ್ ಕೊಹ್ಲಿ ಫಾರ್ಮ್ ಟೀಮ್ ಇಂಡಿಯಾವನ್ನು ಚಿಂತೆಗೆ ದೂಡಿದ್ದು, ಮುಂದಿನ ಪಂದ್ಯಗಳಲ್ಲಿ ಕೊಹ್ಲಿಗೆ ಕೊಕ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಕುರಿತು ಮಾತನಾಡಿದ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಅಚ್ಚರಿಯ ಹೇಳಿಕೆ ನೀಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ತಂಡ ವಿರಾಟ್ ಮೇಲೆ ಇಟ್ಟಿರುವ ವಿಶ್ವಾಸವನ್ನು ಅವರು ಒತ್ತಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕುರಿತು ಪ್ರತಿಬಾರಿಯೂ ಪ್ರಶ್ನೆ ಕೇಳಿದಾಗಲೂ ನಾನು ಉತ್ತರಿಸಲು ಇಷ್ಟಪಡುತ್ತೇನೆ. ಆದರೆ, ಅತನ ಬ್ಯಾಟಿಂಗ್ ಲಯದ ಬಗ್ಗೆ ನಮಗೆ ಹೆಚ್ಚಿನ ಚಿಂತೆಯಿಲ್ಲ. ಐಪಿಎಲ್ ಟೂರ್ನಿಯಿಂದ ವಿರಾಟ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಂದೆರಡು ವೈಫಲ್ಯದಿಂದ ಏನೂ ಬದಲಾಗುವುದಿಲ್ಲ. ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಿಜವಾಗಿಯೂ ಸ್ವಲ್ಪ ರನ್‌ಗಾಗಿನ ಹಸಿವು ಉತ್ತಮ. ಬ್ಯಾಟರ್ ಆಗಿ ಉತ್ತಮ ಸ್ಥಿತಿಯಲ್ಲಿರಲಿದ್ದು, ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಅತಿ ಅವಶ್ಯಕ ಪಂದ್ಯಗಳಲ್ಲಿ ವಿರಾಟ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾವು ವಿರಾಟ್ರಿಂದ ಉತ್ತಮ ಇನ್ನಿಂಗ್ಸ್ಅನ್ನು ನಿರೀಕ್ಷಿಸುತ್ತಿದ್ದೇವೆ. ನಾವು ನಮ್ಮ ಮುಂದೆ ಇರುವ ಪರಿಸ್ಥಿತಿಗಳನ್ನು ನೋಡಬೇಕು ಮತ್ತು ಅವುಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ.