

ಭೋಪಾಲ್: ಕೆಲವೊಮ್ಮೆ ಮದುವೆ ವೇಳೆ ವರದಕ್ಷಿಣೆ, ವಧು-ವರರ ಪ್ರೇಮಪ್ರಕರಣ ಇತ್ಯಾದಿ ಕಾರಣಕ್ಕೆ ಗಲಾಟೆಗಳಾಗುತ್ತವೆ. ಆದರೆ ಇಲ್ಲೊಂದು ಕಡೆ ವರ ಧರಿಸಿದ್ದ ದಿರಿಸಿನ ವಿಚಾರವಾಗಿ ಗಲಾಟೆಯಾಗಿದ್ದು, ಮದುವೆ ನಡೆಯುತ್ತಿದ್ದ ಸ್ಥಳವೇ ರಣಾಂಗಣವಾಗಿ ಮಾರ್ಪಟ್ಟಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಾಂಗ್ಬೇಡ ಎಂಬ ಗ್ರಾಮದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ನಡೆದಿದೆ. ಬುಡಕಟ್ಟು ಸಮುದಾಯದ ಈ ಮದುವೆಯಲ್ಲಿ ವರ ಧಾರ್ ನಿವಾಸಿ ಸುಂದರ್ಲಾಲ್ ಎಂಬಾತ ಸಾಂಪ್ರದಾಯಿಕ ಧೋತಿ ಕುರ್ತಾ ಬದಲು ಶೇರ್ವಾಣಿ ತೊಟ್ಟು ಆಗಮಿಸಿದ್ದ.
ಸಂಪ್ರದಾಯದ ಪ್ರಕಾರ ಧೋತಿ ಕುರ್ತಾ ಧರಿಸುವ ಬದಲು ಶೇರ್ವಾಣಿ ತೊಟ್ಟಿದ್ದಕ್ಕೆ ವಧುವಿನ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕಲ್ಲುತೂರಾಟದೊಂದಿಗೆ ಹೊಯ್ಕೈ ಸಂಭವಿಸಿದೆ. ಶನಿವಾರ ಮದುವೆ ಸಂದರ್ಭ ಈ ಗಲಾಟೆ ನಡೆದಿದ್ದು, ಎರಡೂ ಕಡೆಯವರು ಧಮ್ನೊಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಂದಹಾಗೆ ವಧುವಿನ ಮನೆಯವರಿಂದ ಈ ವಿಚಾರವಾಗಿ ಯಾವುದೇ ತಕರಾರು ಇರಲಿಲ್ಲ. ಅದು ಆ ಕಡೆಯವರ ಸಂಬಂಧಿಕರಿಂದ ಗಲಾಟೆ ಆಗಿದೆ ಎಂದು ವರ ಸುಂದರ್ಲಾಲ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ಕೊನೆಗೂ ಮದುವೆ ನೆರವೇರಿದೆ. ಆದರೆ ಇಂದು ಎರಡೂ ಕಡೆಯವರ ಮೇಲೆ ಕೇಸು ದಾಖಲಾಗಿದೆ.