

Groom Father: ಮಗನ ಮದುವೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ ಎನ್ನುವಾಗಲೇ ವರನ ತಂದೆ ಮನನೊಂದು ಸಾವಿಗೆ ಶರಣಾದ ಘಟನೆ ತೆಲಂಗಾಣದ ನಾರಾಯಣ್ಪೇಟ್ನಲ್ಲಿ ವರದಿಯಾಗಿದೆ.
ಸುಪುತ್ರನ ಮದುವೆ ಮಾಡಿ, ಅವನಿಗೊಂದು ಜವಾಬ್ದಾರಿ ಕೊಡುವ ಮಹತ್ತರದ ಆಸೆಯಿಂದ ತಿಳಿದಿರುವ ವಧು ನೋಡಿ, ಗುರು-ಹಿರಿಯರ ಅನುಗ್ರಹದಲ್ಲಿ ಮದುವೆ ಮಾತುಕತೆ ಕೂಡ ಮುಗಿಸಿದ್ದ ತಂದೆ ಇದೀಗ ಸಾವಿಗೆ ಶರಣಾಗಿದ್ದಾರೆ. ಅದ್ಧೂರಿ ಮದುವೆ ಸಮಾರಂಭಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ ಎಂದು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಆಘಾತಕಾರಿ ಸುದ್ದಿಯೊಂದು ಕೇಳಿಬಂದಿತು. ಅದು ಮದುವೆ ನಿಶ್ಚಯಗೊಂಡಿದ್ದ ವಧು ತನ್ನ ಗೆಳೆಯನ ಜೊತೆ ಮನೆಬಿಟ್ಟು ಹೋಗಿದ್ದಾಳೆ ಎಂದು. ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ವರನ ಕಟುಂಬಸ್ಥರು ಕಂಗಾಲಾದರು.
ಮದುವೆ ನಿಶ್ಚಯಕ್ಕೂ ಮುನ್ನ ಏನೂ ಹೇಳದೆ ಈಗ ಕೇವಲ ಮೂರು ದಿನಗಳು ಬಾಕಿ ಉಳಿದಿರುವ ಸಮಯದಲ್ಲಿ ಮನೆಬಿಟ್ಟು ಓಡಿ ಹೋದ ವಿಷಯ ತಿಳಿದ ವರನ ತಂದೆ, ತಮ್ಮ ಮಾನ-ಮರ್ಯಾದೆ ಎಲ್ಲವೂ ಮಣ್ಣು ಪಾಲಾಯಿತು. ಜನರ ಮುಂದೆ ಹೇಗೆ ತಲೆ ಎತ್ತಿಕೊಂಡು ಓಡಾಡುವುದು ಎಂಬ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ನಾರಾಯಣಪೇಟೆಯ ಕಾಂಜಿ ಗೋವಿಂದ ರಾವ್ ಅವರ ಪುತ್ರ ಅಭಿಷೇಕ್ ಮತ್ತು ಜ್ಞಾನ್ ವಿಜಯಕುಮಾರ್ ಅವರ ಪುತ್ರಿ ಶ್ವೇತಾ ನಿಶ್ಚಯಗೊಂಡ ನವಜೋಡಿಗಳು. 4 ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ನೆರವೇರಿತ್ತು.
ಮೇ.9ರಂದು ವಿವಾಹ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಹೀಗಾಗಿ ಊರು ಮಂದಿ, ಸಂಬಂಧಿಕರಿಗೆಲ್ಲ ಮದುವೆ ಆಮಂತ್ರಣ ಪತ್ರಿಕೆಗಳನ್ನೂ ಹಂಚಲಾಗಿತ್ತು. ವಧು ಶ್ವೇತಾ ತನ್ನ ಗೆಳೆಯ ವೆಂಕಟೇಶ್ ಜೊತೆಗೆ ಮನೆಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಈ ಕಾರಣದಿಂದ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಮುರಿದುಬಿದ್ದಿತು. ಈ ವಿಷಯ ತಿಳಿದ ವರನ ತಂದೆ ಗೋವಿಂದ ರಾವ್, ಅವಮಾನ ಸಹಿಸಲಾಗದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).