MS Dhoni: ನಿನ್ನೆ (ಮೇ.07) ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಸಿಎಸ್ಕೆ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಧೋನಿ ಪಡೆ 2 ರನ್ಗಳ ಜಯ ಸಾಧಿಸಿತು. ಈ ಮೂಲಕ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಪಡೆಗೆ ಗೆಲುವಿನ ಚೇತರಿಕೆ ಸಿಕ್ಕಿತು.

ಇದನ್ನೂ ಓದಿ: ಧರ್ಮಶಾಲಾದಲ್ಲಿ ಇಂದು ಪಂಜಾಬ್-ಡೆಲ್ಲಿ ಕಾದಾಟ; ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕರಷ್ಟೇ ಪಂದ್ಯ!
ಬುಧವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯ ಕೊನೆಯ ಓವರ್ ವರೆಗೂ ತಲುಪಿದ್ದು, ರೋಮಾಂಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಕಡೆಯ ಓವರ್ನಲ್ಲಿ ಧೋನಿ ಸಿಕ್ಸರ್ ಮೂಲಕ ಫಿನಿಶರ್ ಆಗಿ ಕಾಣಿಸಲಿದ್ದಾರೆ ಎಂದು ಅಭಿಮಾನಿಗಳು ಸೀಟಿನ ತುದಿಯಲ್ಲಿ ಕುಳಿತು ಪಂದ್ಯವನ್ನು ಕಾತರದಿಂದ ನೋಡುತ್ತಿದ್ದರು. ಅಂತಿಮವಾಗಿ ಬೌಂಡರಿ ಮೂಲಕ ರೋಚಕ ಗೆಲುವು ದಾಖಲಿಸಿದ ಸಿಎಸ್ಕೆ ಕೊನೆಗೂ ನಿಟ್ಟುಸಿರು ಬಿಟ್ಟಿತು.
ಧೋನಿ ಮನದ ಮಾತು
ಕೆಕೆಆರ್ ನೀಡಿದ180 ರನ್ಗಳ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 19.4 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಪಂದ್ಯವನ್ನು ವಶಪಡಿಸಿಕೊಂಡಿತು. ಕಳೆದ ನಾಲ್ಕು ಪಂದ್ಯಗಳಿಂದ ಸೋಲಿನ ನಂತರ ಮಾತನಾಡುತ್ತಿದ್ದ ಕ್ಯಾಪ್ಟನ್ ಧೋನಿ, ಈ ಬಾರಿ ಗೆಲುವು ಹಾಗೂ ತಮ್ಮ ನಿವೃತ್ತಿ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. “ಇದು ನನಗೆ ಸದಾ ಸಿಗುವ ಪ್ರೀತಿ-ವಾತ್ಸಲ್ಯ. ನನಗೀಗ 42 ವರ್ಷ ಅನ್ನೋದನ್ನ ಮರಿಬೇಡಿ. ನಾನು ಬಹಳ ಸಮಯದಿಂದ ಆಡ್ತಿದ್ದೀನಿ. ತುಂಬ ಜನರಿಗೆ ಗೊತ್ತಿಲ್ಲ ನನ್ನ ಕೊನೆಯ ಪಂದ್ಯ ಯಾವಾಗ ಅಂತ, ಹಾಗಾಗಿ ನನ್ನ ಪ್ರತಿ ಇನ್ನಿಂಗ್ಸ್ ನೋಡಲು ಬಯಸುತ್ತಾರೆ” ಎಂದರು.
“ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಐಪಿಎಲ್ ಮುಗಿದ ಬಳಿಕ ನಾನು ಇನ್ನೂ ಆರರಿಂದ ಎಂಟು ತಿಂಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನನ್ನ ದೇಹವು ಈ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆಯೋ ಎಂಬುದನ್ನು ನೋಡಬೇಕು. ಪ್ರಸ್ತುತ ನಿವೃತ್ತಿ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಪ್ರೇಕ್ಷಕರಿಂದ ನನಗೆ ಸಿಗುತ್ತಿರುವ ಪ್ರೀತಿ ಮತ್ತು ಕಾಳಜಿ ಅದ್ಭುತವಾಗಿದೆ” ಎಂದು ಧೋನಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು,(ಏಜೆನ್ಸೀಸ್).