

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಬೈಸರನ್ನಲ್ಲಿ ಏ.22ರಂದು 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಮಂಗಳವಾರ ತಡರಾತ್ರಿ ‘ಆಪರೇಷನ್ ಸಿಂಧೂರ’ ಮೂಲಕ ದಿಟ್ಟ ಉತ್ತರ ನೀಡಿದೆ.
ಭಾರತದಲ್ಲಿ ಮೇ 7ರಂದು ನಡೆಸಲಿರುವ ಮಾಕ್ ಡ್ರಿಲ್ (ಪೂರ್ವಸಿದ್ಧತಾ ತಾಲೀಮು) ಬಗ್ಗೆ ದೇಶದ ಜನರು ಹಾಗೂ ಜಗತ್ತಿನ ವಿವಿಧ ರಾಷ್ಟ್ರಗಳ ಗಮನ ನೆಟ್ಟಿರುವಾಗ ಭಾರತದ ಸೇನೆಗಳು ಅದರ ಹಿಂದಿನ ರಾತ್ರಿಯೇ ಕ್ಷಿಪಣಿಗಳ ದಾಳಿ ಮೂಲಕ ಪಾಕ್ಗೆ ‘ಡ್ರಿಲ್’ ಮಾಡಿವೆ. ‘ಪಹಲ್ಗಾಮ್ ದಾಳಿ ನಡೆಸಿದವರಿಗೆ ಹಾಗೂ ಅದಕ್ಕೆ ಕಾರಣರಾದವರಿಗೆ ಅವರು ಊಹಿಸದ ರೀತಿಯಲ್ಲಿ ತಕ್ಕಶಾಸ್ತಿ ಮಾಡಲಾಗುವುದು’ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತಿನಂತೆ ಕಲ್ಪನೆಗೂ ಮಿಗಿಲಾದ ರೀತಿಯಲ್ಲಿ ‘ಆಪರೇಷನ್ ಸಿಂಧೂರ’ ನಡೆಸಲಾಗಿದೆ. ಅತ್ಯಂತ ವ್ಯವಸ್ಥಿತ, ವಿಸõತ ಹಾಗೂ ನಿರ್ದಿಷ್ಟವಾಗಿ ಗುರಿಯನ್ನು ಕೇಂದ್ರೀಕರಿಸಿ ನಡೆಸಲಾದ ಈ ಕಾರ್ಯಾಚರಣೆ ಭಾರತ ಇದುವರೆಗೆ ನಡೆಸಲಾದ ಆಪರೇಷನ್ಗಳಿಗಿಂತ ವಿಭಿನ್ನವಾಗಿದೆ. ತಡರಾತ್ರಿ 25 ನಿಮಿಷಗಳ ಕಾಲ 24 ಕ್ಷಿಪಣಿಗಳ ಮೂಲಕ ಉಗ್ರರ 9 ಶಿಬಿರಗಳ ಮೇಲೆ ನಡೆಸಿದ ಈ ದಾಳಿಯಲ್ಲಿ 70 ಉಗ್ರರು ಹತ್ಯೆಯಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಾರತ 2016ರಲ್ಲಿ ಉರಿ ಸರ್ಜಿಕಲ್ ಸ್ಟ್ರೈಕ್, 2019ರಲ್ಲಿ ಬಾಲಾಕೋಟ್ ವೈಮಾನಿಕ ದಾಳಿ ಸೇರಿ ಹಲವು ದಾಳಿಗಳನ್ನು ನಡೆಸಿದ್ದರೂ ಅವೆಲ್ಲವುಗಳಿಂತಲೂ ‘ಆಪರೇಷನ್ ಸಿಂಧೂರ’ ವಿಭಿನ್ನ ಎನ್ನಲಾಗಿದೆ. ಇದು ತಾಂತ್ರಿಕವಾಗಿ ಬಲಿಷ್ಠ ಹಾಗೂ ವಿಸ್ತಾರದ್ದಾದ್ದರಿಂದ ಹಿಂದೆಂದಿಗಿಂತಲೂ ವಿಭಿನ್ನ ಆಪರೇಷನ್ ಎನಿಸಿಕೊಂಡಿದೆ. ಬಾಲಾಕೋಟ್ ದಾಳಿ ಬಳಿಕ ಭಾರತ ನಡೆಸಿದ ವ್ಯಾಪಕ ಗಡಿಯಾಚೆಗಿನ ದಾಳಿ ಆಗಿರುವ ಸಿಂಧೂರ, ಭಾರತದ ಕಾರ್ಯತಂತ್ರದ ವಿಕಸನವನ್ನು ಪ್ರತಿನಿಧಿಸಿದೆ. ಭಯೋತ್ಪಾದಕ ಜಾಲಗಳಿಗೆ ಮತ್ತು ಅವುಗಳನ್ನು ನಿರ್ವಹಿಸುವವರಿಗೆ ಖಡಕ್ ಸಂದೇಶ ರವಾನಿಸಿದೆ.
ಭಾರತ ಹಿಂದೆಂದಿಗಿಂತಲೂ ವಿಭಿನ್ನ ಹಾಗೂ ಹೆಚ್ಚು ಪರಿಣಾಮ ಕಾರಿಯಾಗಿ ನಡೆಸಿದ ‘ಆಪರೇಷನ್ ಸಿಂಧೂರ’ಕ್ಕೆ ಎರಡೇ ವಾರಗಳಲ್ಲಿ ಯೋಜನೆ ಮಾಡಿಕೊಳ್ಳಲಾಗಿದೆ. ಪಾಕಿಸ್ತಾನದಿಂದ ಕಾರ್ಯಾಚರಿಸುವ ಭಯೋತ್ಪಾದಕ ಸಂಘಟನೆಗಳ ಬೆನ್ನೆಲುಬನ್ನು ಮುರಿಯುವಂಥ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳು ಈ ಯೋಜನೆ ರೂಪಿಸಿದ್ದವು. ಪಾಕ್ ಸೇನಾ ಸ್ಥಾಪನೆಗಳಿಗೆ ಹಾನಿ ಮಾಡದಂತೆ ಮತ್ತು ನಾಗರಿಕರಿಗೆ ಆಗಬಹುದಾದ ತೊಂದರೆ ಆದಷ್ಟೂ ಕಡಿಮೆ ಇರುವಂತೆ ಈ ದಾಳಿಯನ್ನು ರೂಪಿಸಲಾಗಿತ್ತು.
ಉಗ್ರರ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳನ್ನು ಬಂದ್ ಮಾಡಲಾಗಿದ್ದು, ಪಂಜಾಬ್ ಪೊಲೀಸರು ಮತ್ತು ಭದ್ರತಾ ಪಡೆಗಳು ಹೈ ಅಲರ್ಟ್ ಸ್ಥಿತಿಯಲ್ಲಿವೆ. ಡಾಕ್ಟರ್ಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ತಕ್ಷಣ ಸೇವೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.
ದಾಳಿಗೀಡಾದ 9 ಶಿಬಿರಗಳು ಭಾರತದಲ್ಲಿ ಹಲವು ವರ್ಷಗಳಿಂದ ಭಯೋತ್ಪಾದಕ ಕೃತ್ಯಗಳಿಗೆ ಕಾರಣವಾಗಿರುವ ಲಷ್ಕರ್ ಇ ತೊಯ್ಬಾ (ಎಲ್ಇಟಿ) ಮತ್ತು ಜೈಷ್ ಇ ಮೊಹಮ್ಮದ್ (ಜೆಇಎಂ) ಸಂಘಟನೆಗಳಿಗೆ ಸೇರಿವೆ. ಆ ಪೈಕಿ ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದು, ನಾಲ್ಕು ಪಾಕಿಸ್ತಾನದಲ್ಲಿ ಇದ್ದವು. ದಾಳಿಗೀಡಾದವುಗಳಲ್ಲಿ ಬಹಾವಲ್ಪುರ ಶಿಬಿರ ಜೆಇಎಂನ ಭದ್ರಕೋಟೆ ಆಗಿದೆ. ಮುಜಾಫರಾಬಾದ್ ಮತ್ತು ಭಿಂಬರ್ಗಳು ಕಾಶ್ಮೀರಕ್ಕೆ ಒಳನುಸುಳುವಲ್ಲಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪಾಯಿಂಟ್ಸ್ ಆಗಿದ್ದವು ಎಂದು ಭಾರತೀಯ ಭದ್ರತಾ ಪಡೆಗಳು ಗುರುತಿಸಿವೆ.