ಮದುವೆಗೆ ಬಂದು ಅಜ್ಜನಿಗೇ ಕೊಡಲಿಯಿಂದ ಹೊಡೆದು ಕೊಂದ ಮೊಮ್ಮಗ!

ajja
Published on

ಲಖನೌ: ಆಮಂತ್ರಣವಿಲ್ಲದಿದ್ದರೂ ಮದುವೆಗೆ ಬಂದ ಯುವಕನೊಬ್ಬ, ಕಾರ್ಯಕ್ರಮದಲ್ಲಿ ಸಂತಸದಿಂದಿದ್ದ ತನ್ನ ಅಜ್ಜನನ್ನೇ ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

ಮಂಡಿ ಧನೌರಾ ಪೊಲೀಸ್ ಠಾಣೆ ಪ್ರದೇಶದ ಜುಂಧಾಪುರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕೆಮ್​ ಸಿಂಗ್​ ಎನ್ನುವವರ ಮಗ ಅರುಣ್ ಮದುವೆ ನಡೆಯುತ್ತಿತ್ತಂತೆ. ಕರೊನಾ ಇದ್ದ ಕಾರಣದಿಂದ ಹೆಚ್ಚಿನ ಜನರಿಗೆ ಆಮಂತ್ರಣ ನೀಡದೆಯೇ ಮದುವೆ ಮಾಡಲಾಗಿದೆ. ಕೆಮ್ ಸಿಂಗ್ ತಂದೆಯ ಮಗಳ ಮನೆಗೇ ಆಮಂತ್ರಣ ಕೊಟ್ಟಿರಲಿಲ್ಲವಂತೆ. ಸಾಕಷ್ಟು ಸಮಯದಿಂದ ಎರಡು ಕುಟುಂಬಗಳ ನಡುವೆ ಯಾವುದೋ ಕಾರಣಕ್ಕೆ ಅಂತರ ಏರ್ಪಟ್ಟಿದ್ದರಿಂದಾಗಿ ಮದುವೆಗೆ ಕರೆದಿಲ್ಲ.

ಆದರೆ ಈ ವಿಚಾರದಲ್ಲಿ ಸಿಟ್ಟಾಗಿದ್ದ ಮೊಮ್ಮಗ ಸೌರಭ್​ ಬೇರೆಯದ್ದೇ ನಿರ್ಧಾರ ಮಾಡಿದ್ದಾನೆ. ಆಮಂತ್ರಣವಿಲ್ಲದಿದ್ದರೂ ಮದುವೆಗೆ ತೆರಳಿದ್ದಾನೆ. ಅಲ್ಲಿ ತನ್ನ ಅಜ್ಜನೊಂದಿಗೆ ಜಗಳವಾಡಿ ಆತನಿಗೆ ಕೊಡಲಿಯಿಂದ ಬಲವಾಗಿ ಹೊಡೆದಿದ್ದಾನೆ. ಅದನ್ನು ತಪ್ಪಿಸಲು ಬಂದ ಮೂರ್ನಾಲ್ಕು ಜನರಿಗೂ ಕೊಡಲಿ ಏಟು ಕೊಟ್ಟಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಹೆಚ್ಚು ಗಾಯಾಳುವಾಗಿದ್ದ ಅಜ್ಜ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net