

ಬೆಂಗಳೂರು: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರವಿದ್ದರೂ ತರಬೇತಿ ನೌಕರರು ಮತ್ತು ಈ ಹಿಂದೆ ಅಮಾನತಾಗಿರುವ ನೌಕರರ ಮೂಲಕ ಬಸ್ ಸೇವೆ ಮುಂದುವರಿದಿದೆ.
ಬೆಂಗಳೂರು, ಮೈಸೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಬಸ್ ಸೇವೆ ಆರಂಭವಾಗಿದ್ದು, ರಾಜ್ಯಾದ್ಯಂತ ನಾಲ್ಕು ನಿಗಮಗಳ ಈವರೆಗೆ 134 ಬಸ್ಗಳು ರಸ್ತೆಗೆ ಇಳಿದಿವೆ. ಈ ಪೈಕಿ ಬಿಎಂಟಿಸಿಯ 28, ಕೆಎಸ್ಆರ್ಟಿಸಿ 38, ಈಶಾನ್ಯ ಕರ್ನಾಟಕ ನಿಗಮದ 54 ಹಾಗೂ ವಾಯುವ್ಯ ಕರ್ನಾಟಕ ನಿಗಮದ 14 ಬಸ್ಗಳು ಸಂಚಾರ ಆರಂಭಿಸಿವೆ. ಕೆಲವೆಡೆ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಬಸ್ ಸಂಚಾರ ನಡೆಯುತ್ತಿದೆ.
ಕರ್ತವ್ಯಕ್ಕೆ ಹಾಜರಾಗದಿದ್ದರೆ ತಾತ್ಕಾಲಿಕ ಪಟ್ಟಿಯಿಂದ ತೆಗೆದು ಹಾಕುವ ಕುರಿತು ತರಬೇತಿ ನೌಕರರಿಗೆ ಸಾರಿಗೆ ನಿಗಮಗಳು ನೋಟಿಸ್ ನೀಡಿದ್ದವು. ಆ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 2 ಸಾವಿರಕ್ಕೂ ಹೆಚ್ಚಿನ ತರಬೇತಿ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೆಲವೆಡೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಅಧಿಕಾರಿಗಳು ಸ್ವಾಗತಿಸುತ್ತಿದ್ದ ದೃಶ್ಯ ಕಂಡು ಬಂತು. ಕೊಪ್ಪಳದಲ್ಲಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಬಸವರಾಜ ಹಾಗೂ ಹಂಚನಾಳಗೆ ವಿಭಾಗೀಯ ಆಯುಕ್ತ ಎಂ.ಎ.ಮುಲ್ಲಾರಿಂದ ಗುಲಾಬಿ ಹೂ ನೀಡಿ ಕಳುಹಿಸಿದರು.