

ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ಡಿ. 20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೊರುಚ ಹೆಸರನ್ನು ಅಂತಿಮಗೊಳಿಸಲಾಯಿತು. ಆ ಬಳಿಕ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸುದ್ದಿಗೋಷ್ಠಿ ನಡೆಸಿ ಸಮ್ಮೇಳನಾಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.
ಕೊಡುಗೆ ಪರಿಗಣನೆ: ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೊರುಚ ಸೇರಿ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಪ್ರೊ. ಹಂ.ಪ.ನಾಗರಾಜಯ್ಯ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಸುಧಾಮೂರ್ತಿ, ಡಾ. ಲತಾ ರಾಜಶೇಖರ್, ನಾ. ಮೊಗಸಾಲೆ ಇನ್ನೂ ಹಲವರ ಹೆಸರು ಚರ್ಚೆಗೆ ಬಂದಿತಾದರೂ, ಹಿರಿತನ ಹಾಗೂ ನೆಲ-ಜಲ-ಭಾಷೆ ಸೇರಿ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಎಲ್ಲವನ್ನೂ ಪರಿಗಣಿಸಿ 94 ವರ್ಷದ, ಜಾನಪದ ಭೀಷ್ಮರೆಂದೇ ಖ್ಯಾತರಾಗಿರುವ ಗೊರುಚ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ಅಧ್ಯಕ್ಷ ಈಗ ಸಮ್ಮೇಳನಾಧ್ಯಕ್ಷ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೊರುಚ ತಮ್ಮ ಅವಧಿಯಲ್ಲಿ ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂದು ಘೋಷಣೆ ಮಾಡಿ ಪರಿಷತ್ತಿಗೆ ಆರ್ಥಿಕ ಬಲ ತುಂಬಿದ್ದರು. 1994ರಲ್ಲಿ ಮಂಡ್ಯದಲ್ಲಿ 63ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಚದುರಂಗರು ಸಮ್ಮೇಳನಾಧ್ಯಕ್ಷರಾಗಿದ್ದರು. ಸರ್ಕಾರದ ಜವಾಬ್ದಾರಿ ಎಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದ್ದಾರೆ.
ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಿದರೆ ತಮ್ಮ ಮಕ್ಕಳಿಗೆ ಭವಿಷ್ಯ ಇಲ್ಲವೆಂಬ ಆತಂಕದಿಂದಲೇ ಪಾಲಕರಿಗೆ ಇಂಗ್ಲಿಷ್ ಬಗ್ಗೆ ವ್ಯಾಮೋಹ ಜಾಸ್ತಿಯಾಗಿದೆ. ಸುಪ್ರೀಂಕೋರ್ಟ್ ಹಾಗೂ ಪ್ರಸಿದ್ಧ ಶಿಕ್ಷಣ ತಂತ್ರಜ್ಞರು, ಮಾತೃಭಾಷೆಯಲ್ಲೇ ಶಿಕ್ಷಣ ನೀಡುವಂತಾಗಬೇಕೆಂದು ಹೇಳಿದ್ದಾರೆ. ಮಾತೃಭಾಷೆ ಶಿಕ್ಷಣ ನೀಡುವ ನಿಯಮ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇಲ್ಲದಂತಾಗಿದೆ. ಮಾತೃಭಾಷೆಗೆ ಭದ್ರ ಅಡಿಪಾಯ ಹಾಕುವ ಕೆಲಸವಾಗಬೇಕಿದೆ. ಮಾತೃಭಾಷೆಯನ್ನು ಪರಿಣಾಮಕಾರಿ ಬೆಳೆಸುವುದು ಸರ್ಕಾರದ ಆದ ಕರ್ತವ್ಯ ಎಂದು ಅವರು ಸಲಹೆ ನೀಡಿದರು.
ಕನ್ನಡಿಗರ ಮಕ್ಕಳಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ತಮ್ಮ ಭವಿಷ್ಯ ಅತಂತ್ರವಾದಾಗ ಯುವಜನರು ಸಹಜವಾಗಿ ಅಸಮಾಧಾನಗೊಳ್ಳುತ್ತಾರೆ. ಇದರಿಂದಾಗಿ ಶಾಂತಿಭಗ್ನ ಆಗಲಿದೆ. ಯುವಜನತೆ ಭವಿಷ್ಯವನ್ನು ಭದ್ರಪಡಿಸುವುದಕ್ಕೆ ಸರ್ಕಾರ ಮುಂದಾಗಬೇಕು. ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಕನ್ನಡಿಗರ ಕ್ಷೇಮವನ್ನು ಕೇಳುವಂತಾಗಬೇಕು ಎಂದು ಸಲಹೆ ನೀಡಿದರು.
ಅನ್ಯಭಾಷೆಗಳಿಂದ ಕನ್ನಡ ಕಲಬೆರಕೆ: ಕನ್ನಡ ನಶಿಸುತ್ತಿಲ್ಲ, ಜೀವಂತವಾಗಿದೆ. ಆದರೆ, ಅನ್ಯಭಾಷೆಗಳಿಂದ ಕನ್ನಡ ಕಲಬೆರಕೆ ಯಾಗುತ್ತಿದೆ. ಕನ್ನಡದ ಮೂಲ ಸೊಗಡು ಕಳೆದು ಹೋಗುತ್ತಿದೆ. ಆದ್ದರಿಂದ, ನಮ್ಮ ಮಾತೃ ಭಾಷೆ ಕಣ್ಮರೆಯಾಗುವ ಆತಂಕದಲ್ಲಿ ಇದ್ದೇವೆ. ಯಾವುದೇ ಕಾರಣಕ್ಕೂ ಕನ್ನಡದ ಮೂಲ ಸೊಗಡು ಹಾಳಾಗಬಾರದು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಸಾಹಿತ್ಯ, ಸಂಸ್ಕೃತಿ, ನೆಲದ ಸೊಗಡು ಕುರಿತು ಮಕ್ಕಳಿಗೆ ಕಲಿಸುವ ಕಾರ್ಯಗತವಾಗಬೇಕು ಎಂದು ಗೊರುಚ ಪ್ರತಿಪಾದಿಸಿದರು.
ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸಿರುವುದು ಸಂತಸದ ಸಂಗತಿ. ಶುದ್ಧ ಕನ್ನಡಕ್ಕೆ ಮಂಡ್ಯ ಹೆಸರುವಾಸಿ. ಆ ಜಿಲ್ಲೆಯಲ್ಲಿ ಭಾಷೆಯ ಮೂಲ ಸೊಗಡು ಉಳಿದುಕೊಂಡಿದೆ. ಹಾಗಾಗಿ, ಮಂಡ್ಯದಲ್ಲಿ ಸಮ್ಮೇಳನದಿಂದ ಕನ್ನಡದ ಘನತೆ, ಗೌರವ ಇನ್ನಷ್ಟು ಹೆಚ್ಚಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ವೇಳೆ 1994ರಲ್ಲಿ ಮಂಡ್ಯದಲ್ಲಿ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ನಡೆಸಿದ್ದೆ. ಇದೀಗ ಮಂಡ್ಯದಲ್ಲೇ ನಡೆಯುವ ಸಮ್ಮೇಳನಕ್ಕೆ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಗೊರುಚ ಹರ್ಷವ್ಯಕ್ತಪಡಿಸಿದರು.
ಗೊ.ರು.ಚನ್ನಬಸಪ್ಪ ಪರಿಚಯ: ಕನ್ನಡ ಸಾಹಿತ್ಯ ಹಾಗೂ ಜನಪದ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಸಾಹಿತಿ ಗೊ.ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯಲ್ಲಿ 1930ರ ಮೇ 18ರಂದು ಜನಿಸಿದರು. 1948ರಲ್ಲಿ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಗಾಂಧೀಗ್ರಾಮದಲ್ಲಿ ಸಮಾಜ ಶಿಕ್ಷಣ ತರಬೇತಿಯನ್ನು ಪಡೆದರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಹಾಗೂ 1992ರಿಂದ 95ವರೆಗೆ ಅಧ್ಯಕ್ಷರಾಗಿ ಪರಿಷತ್ತಿನ ಏಳಿಗೆಗೆ ಹಾಗೂ ಕನ್ನಡದ ಅಭಿವೃದ್ಧಿಗೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ 150ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಅವರ ಅವಧಿಯಲ್ಲಿಯೇ 1994ರಲ್ಲಿ ಮಂಡ್ಯದಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದ ಕಲೆಗಳು ಸೇರಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಅಭಿನಂದನೆಗಳ ಮಹಾಪೂರ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಗೊ.ರು. ಚನ್ನಬಸಪ್ಪ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಗೊರುಚ ಆಯ್ಕೆ ಅತೀವ ಹರ್ಷ ತಂದಿದೆ. 94ರ ವಯಸ್ಸಿನಲ್ಲೂ ತಮ್ಮ ಕ್ರಿಯಾಶೀಲತೆಯಿಂದ ಮಾದರಿಯಾಗಿದ್ದಾರೆ ಎಂದು ಶುಭ ಕೋರಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಗೊರುಚ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವುದು ನನ್ನ ಸಂತೋಷ ಇಮ್ಮಡಿಗೊಳಿಸಿದೆ ಎಂದಿದ್ದಾರೆ. ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕನ್ನಡ ವಿವಿಧ ಸಂಘ-ಸಂಸ್ಥೆಗಳು ಹಾಗೂ ಗೊರುಚ ಆಪ್ತ ಬಳಗವು ಕೂಡ ಅಭಿನಂದನೆ ಸಲ್ಲಿಸಿವೆ.
25 ಕೋಟಿ ರೂ. ಅನುದಾನ: ಸಮ್ಮೇಳನಕ್ಕೆ 30 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದು, 6 ಕೋಟಿ ರೂ. ಸಂಗ್ರಹವಾಗಿದೆ. ಸಮ್ಮೇಳನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಸೇರಿ ಜನಪ್ರತಿನಿಧಿಗಳು, ಪರಿಷತ್ತಿನ ಪದಾಧಿಕಾರಿಗಳು ಸೇರಿ ಜಿಲ್ಲೆಯ ಅಧಿಕಾರಿಗಳ ವರ್ಗ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು. ಕರ್ನಾಟಕ ಏಕೀಕರಣ 50ರ ಸಂಭ್ರಮದ ಅಂಗವಾಗಿ ಸಮ್ಮೇಳನದಲ್ಲಿ ಸಾಧಕರಿಗೆ ವಿಶೇಷ ಸನ್ಮಾನ ಮಾಡಲಾಗುತ್ತಿದೆ. ವಿಶೇಷ ಗೋಷ್ಠಿಗಳ ಆಯೋಜನೆ ಸೇರಿ ಕಾರ್ಯಕ್ರಮಗಳ ರೂಪುರೇಷೆ ಸಿದ್ದಗೊಳುತ್ತಿದ್ದು, ಶೀಘ್ರದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಮತ್ತೊಮ್ಮೆ ಹೊರಗಿನವರಿಗೆ ಆತಿಥ್ಯ: ಮಂಡ್ಯ ಜಿಲ್ಲೆ ಆತಿಥ್ಯಕ್ಕೆ ಹೆಸರಾಗಿದೆ. ಅದೇ ರೀತಿ ಈ ಬಾರಿಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೊರಗಿನ ಜಿಲ್ಲೆಯವರಿಗೆ ಸಿಕ್ಕಿದೆ. 1974ರಲ್ಲಿ ನಡೆದ ಮೊದಲ ಸಮ್ಮೇಳನದಲ್ಲಿ ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆ ಆಯ್ಕೆಯಾಗಿದ್ದರು. ಪರಿಷತ್ನ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆ ಹೊಂದಿದ್ದರು. ಅಂತೆಯೇ 1994ರಲ್ಲಿ ಆಯೋಜನೆಗೊಂಡಿದ್ದ ಎರಡನೇ ಸಮ್ಮೇಳನದಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಲ್ಲಹಳ್ಳಿಯ ಚದುರಂಗ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ಸಮ್ಮೇಳನದ ಅಧ್ಯಕ್ಷತೆಯನ್ನು ಮಂಡ್ಯದವರಿಗೆ ಕೊಡಬೇಕೆನ್ನುವ ಆಗ್ರಹ ಕೇಳಿಬಂದಿತ್ತಾದರೂ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿಲ್ಲ.
ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆ ಸಮಂಜಸವಾಗಿದೆ. 94ರ ವಯಸ್ಸಿನಲ್ಲೂ ಕನ್ನಡಕ್ಕಾಗಿ ಚಿಂತನೆಯಲ್ಲಿ ತೊಡಗಿರುವ ಅವರಿಗೆ ಸಿಕ್ಕ ಗೌರವ ಇದಾಗಿದೆ.
| ದಿನೇಶ್ ಗೂಳಿಗೌಡ ವಿಧಾನ ಪರಿಷತ್ ಸದಸ್ಯ
ಕನ್ನಡದಲ್ಲಿ ರಾಜಕೀಯ ನುಸುಳಿಲ್ಲ. ಆದರೆ, ಬರವಣಿಗೆ, ಸಾಹಿತಿ, ವಾದ- ವಿವಾದಗಳಲ್ಲಿ ರಾಜಕೀಯ ಸೇರಿದೆ. ಎಲ್ಲ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ನಮ್ಮ ಬದುಕಿನ ಆಯಾಮದಲ್ಲೂ ರಾಜಕೀಯ ನುಗ್ಗಿದೆ. ರಾಜಕೀಯ ಶುದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು. ಸಮಕಾಲೀನ ಸಮಸ್ಯೆ ಅರ್ಥ ಮಾಡಿಕೊಂಡಿರುವ ಸಾಹಿತಿಗಳು, ಪರಿಹಾರ ನೀಡುವ ಕೆಲಸ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾಹಿತ್ಯ, ಸಮ್ಮೇಳನ, ಸಂಸ್ಕೃತಿ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಎಂದಿಗೂ ವ್ಯರ್ಥವಾಗಲ್ಲ.
| ಗೊ.ರು.ಚನ್ನಬಸಪ್ಪ ಹಿರಿಯ ಸಾಹಿತಿ
ಸಮುದ್ರ ಮಂಥನದಿಂದ ಅಮೃತ ದೊರೆಯಿತು. ಹಾಗೆ ವಿವಾದಗಳು ಪ್ರಗತಿಯ ಸಂಕೇತ. ಆರೋಗ್ಯಕರ ಟೀಕೆಗಳನ್ನು ಕಸಾಪ ಸ್ವಾಗತಿಸುತ್ತದೆ. ಹಾಗೆಂದು ಅನಗತ್ಯ ವಿವಾದ ಸೃಷ್ಟಿಸುವುದು ಬೇಡ. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕು.
| ನಾಡೋಜ ಡಾ. ಮಹೇಶ ಜೋಶಿ ಕಸಾಪ ಅಧ್ಯಕ್ಷ