

ನವದೆಹಲಿ: ಹಬ್ಬದ ಋತುವಿನಲ್ಲಿ ಏರುತ್ತಲೇ ಸಾಗಿರುವ ಚಿನ್ನ ಮತ್ತು ಬೆಳ್ಳಿಯ ದರ (Gold Price) ಮಂಗಳವಾರ ಕೊಂಚ ಇಳಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಅಕ್ಟೋಬರ್ 8ರಂದು 10 ಗ್ರಾಂ ಚಿನ್ನದ ದರವು 400 ರೂ. ಕಡಿಮೆಯಾಗಿ, 78,300 ರೂ.ಗೆ ತಲುಪಿದೆ. ಬೆಳ್ಳಿ ದರವು ಪ್ರತಿ ಕೆ.ಜಿ.ಗೆ 200 ರೂ. ಕಡಿಮೆಯಾಗುವ ಮೂಲಕ 94 ಸಾವಿರ ರೂ.ಗೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
10 ಗ್ರಾಂ ಚಿನ್ನದ ದರವು ಭಾನುವಾರ 78,700 ರೂ.ಗೆ ತಲುಪಿ, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಬೆಳ್ಳಿ ದರ ಈಗಾಗಲೇ 94 ಸಾವಿರ ರೂ. ಮುಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ 1 ಲಕ್ಷ ರೂ. ಗಡಿ ದಾಟಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಅಲ್ಲದೆ, ಇದೇ ವರ್ಷದ ಡಿಸೆಂಬರ್ ಹೊತ್ತಿಗೆ 10 ಗ್ರಾಂ ಚಿನ್ನದ ದರ 85 ಸಾವಿರ ರೂ.ಗೆ ತಲುಪುವ ಸಾಧ್ಯತೆ ಇದೆ.
2024ರ ಆರಂಭದಿಂದ ಈವರೆಗೆ ಚಿನ್ನದ ದರ ಶೇಕಡ 19.80ರಷ್ಟು ಏರಿಕೆಯಾಗಿದ್ದು, ಹಬ್ಬದ ಋತುವಿನ ಮೂರು ತಿಂಗಳಲ್ಲೇ (ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್) ಇನ್ನೂ 13%ರಷ್ಟು ಜಿಗಿತ ಕಾಣುವ ಸಾಧ್ಯತೆ ಇದೆ.