ರಗ್ಬಿ ಇಂಡಿಯಾ ಜೊತೆ ಐತಿಹಾಸಿಕ ಪಾಲುದಾರಿಕೆ ಘೋಷಿಸಿದ ಜಿಎಂಆರ್ ಸ್ಪೋರ್ಟ್ಸ್ | GMR Sports

dk (20) (1)
Published on

ನವದೆಹಲಿ:ಭಾರತದ ಕ್ರೀಡಾ ವ್ಯವಸ್ಥೆಯ ಪ್ರವರ್ತಕ ಸಂಸ್ಥೆಯಾಗಿರುವ ಜಿಎಂಆರ್ ಸ್ಪೋರ್ಟ್ಸ್(GMR Sports), ರಗ್ಬಿ ಪ್ರೀಮಿಯರ್ ಲೀಗ್ (ಆರ್.ಪಿ.ಎಲ್) ಆರಂಭಿಸುವ ಸಲುವಾಗಿ ದೇಶದ ರಗ್ಬಿ ಆಡಳಿತ ಮಂಡಳಿಯಾಗಿರುವ ರಗ್ಬಿ ಇಂಡಿಯಾ ಜೊತೆ 10 ವರ್ಷಗಳ ಕಾರ್ಯತಂತ್ರದ ಐತಿಹಾಸಿಕ ಪಾಲುದಾರಿಕೆಯನ್ನು ಹೆಮ್ಮೆಯಿಂದ ಘೋಷಿಸಿದೆ.

ರಗ್ಬಿ ಪ್ರೀಮಿಯರ್ ಲೀಗ್ 2025ರಲ್ಲಿ ಪದಾರ್ಪಣೆ ಮಾಡಲಿದ್ದು, ಇದು ಜಗತ್ತಿನ ಮೊದಲ ಫ್ರಾಂಚೈಸಿ ಆಧಾರಿತ ರಗ್ಬಿ ಲೀಗ್ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಆರು ನಗರ ಕೇಂದ್ರಿದ ತಂಡಗಳು ಈ ಲೀಗ್​ನಲ್ಲಿ ಭಾಗವಹಿಸಲಿದ್ದು, ಜಗತ್ತಿನ ಅಗ್ರ ರಗ್ಬಿ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಈ ಪಾಲುದಾರಿಕೆ ಹೊಸತನ ಮತ್ತು ಶ್ರೇಷ್ಠತೆಯ ಪರಂಪರೆಯನ್ನು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಕ್ರಿಯಾತ್ಮಕ ಕ್ರೀಡೆಗಳಲ್ಲಿ ಒಂದಾಗಿರುವ ರಗ್ಬಿ ಕ್ಷೇತ್ರಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಜಿಎಂಆರ್ ಸ್ಪೋರ್ಟ್ಸ್​ನ ಮಹತ್ವದ ಹೆಜ್ಜೆಯಾಗಲಿದೆ.

ಕ್ರೀಡೆಗಳ ಭವಿಷ್ಯವನ್ನು ರೂಪಿಸುವುದಲ್ಲಿ ಜಿಎಂಆರ್ ಸ್ಪೋರ್ಟ್ಸ್ ನಂಬಿಕೆ

ಈ ಸಹಯೋಗದ ಕುರಿತು ಮಾತನಾಡಿದ ಜಿಎಂಆರ್ ಸೋರ್ಟ್ಸ್ ಮುಖ್ಯಸ್ಥ ಕಿರಣ್ ಕುಮಾರ್ ಗ್ರಾಂಧಿ, ಕ್ರೀಡಾಪಟುಗಳು ಮತ್ತು ಅಭಿಮಾನಿಗಳನ್ನು ಸಮಾನವಾಗಿ ಪ್ರೇರೇಪಿಸುವ ವೇದಿಕೆಗಳನ್ನು ರಚಿಸುವ ಮೂಲಕ ಭಾರತದಲ್ಲಿ ಕ್ರೀಡೆಗಳ ಭವಿಷ್ಯವನ್ನು ರೂಪಿಸುವುದಲ್ಲಿ ಜಿಎಂಆರ್ ಸ್ಪೋರ್ಟ್ಸ್ ನಂಬಿಕೆ ಇಟ್ಟಿದೆ. ರಗ್ಬಿ ಪ್ರೀಮಿಯರ್ ಲೀಗ್ ಕೇವಲ ಲೀಗ್ ಅಲ್ಲ. ಇದು ವಿಶ್ವ ದರ್ಜೆಯ ರಗ್ಬಿಯನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಹಾಗೂ ತಳಮಟ್ಟದಲ್ಲಿ ರಗ್ಬಿಯನ್ನು ಅಭಿವೃದ್ಧಿ ಪಡಿಸುವ ಒಂದು ಚಳುವಳಿಯಾಗಿದೆ.

ರಗ್ಬಿ ಇಂಡಿಯಾ ಜೊತೆಗಿನ ಪಾಲುದಾರಿಕೆಯು ಅವಕಾಶಗಳನ್ನು ಸೃಷ್ಟಿಸಲು ಮತ್ತು ನಾವು ಸ್ಪರ್ಶಿಸುವ ಪ್ರತಿಯೊಂದು ಕ್ರೀಡೆಯಲ್ಲಿ ಶ್ರೇಷ್ಠತೆಯ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ಇದು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಕ್ರೀಡಾ ಲೋಕದ ಈ ರೋಚಕ ಹೊಸ ಅಧ್ಯಾಯದಲ್ಲಿ ಮುಂಚೂಣಿಯಲ್ಲಿರಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ರಗ್ಬಿ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ನಿರ್ಮಿಸುವ ಸಂದರ್ಭದಲ್ಲಿ ಪ್ರೇಕ್ಷಕರನ್ನು ಇದರೆಡೆಗೆ ಆಕರ್ಷಿಸುವ ಭರವಸೆಯನ್ನು ರಗ್ಬಿ ಪ್ರೀಮಿಯರ್ ಲೀಗ್ ನೀಡುತ್ತದೆ. ಯುವ ಭಾರತೀಯ ಪ್ರತಿಭೆಗಳನ್ನು ಅಂತರಾಷ್ಟ್ರೀಯ ಆಟಗಾರರಿಗೆ ಪರಿಯಚಿಯುವ ಮತ್ತು ಉನ್ನತ ಶ್ರೇಣಿಯ ತರಬೇತಿಗೆ ಒಡ್ಡುವ ಮೂಲಕ ಕ್ರೀಡೆಗಾಗಿ ಸುಸ್ಥಿರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಲೀಗ್ ಹೊಂದಿದೆ ಎಂದು ಹೇಳಿದರು.

ರಗ್ಬಿ ಇಂಡಿಯಾದ ಅಧ್ಯಕ್ಷ ರಾಹುಲ್ ಬೋಸ್ಮ ಮಾತನಾಡಿ, “ರಗ್ಬಿ ಪ್ರೀಮಿಯರ್​ ಭಾರತದ ರಗ್ಬಿ ಪಾಲಿಗೆ ಗೇಮ್ ಚೇಂಜರ್ ಆಗಲಿದೆ. ವಿಶ್ವ ರಗ್ಬಿಯ ಬೆಂಬಲ ಮತ್ತು ಜಿಎಂಆರ್ ಸ್ಪೋರ್ಟ್ಸ್‌ನ ಅನುಭವದೊದಿಗೆ ನಾವು ಅತ್ಯುತ್ತಮ ಪ್ರತಿಭೆ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸುವ ಲೀಗ್ ಅನ್ನು ನೀಡಲು ಸಿದ್ಧರಾಗಿದ್ದೇವೆ. ನಮ್ಮ ದೇಶದ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವ ವಿಶ್ವ ದರ್ಜೆಯ ರಗ್ಬಿ ಲೀಗ್ ಇದಾಗಲಿದ್ದು, ಇಲ್ಲಿ ಅಭಿಮಾನಿಗಳಿಗೆ ಅದ್ಭುತ ಅನುಭವ ಕಾದಿದೆ” ಎಂದರು.

ಪಾಲುದಾರಿಕೆಯ ಬಗ್ಗೆ ನಾವು ಉತ್ಸುಕ

ಜಿಎಂಆರ್ ಸ್ಪೋರ್ಟ್​ನ ಅಧ್ಯಕ್ಷರಾಗಿರುವ ಪಿ.ಕೆ.ಎಸ್.ವಿ ಸಾಗರ್ ಮಾತನಾಡಿ, ಜಿಎಂಆರ್ ಸ್ಪೋರ್ಟ್ಸ್ ಕ್ರಿಕೆಟ್‌ನಿಂದ ಹಿಡಿದು ಕಬಡ್ಡಿ ಮತ್ತು ಖೋ ಖೋವರೆಗೆ ಕ್ರೀಡೆಗಳಲ್ಲಿ ಸದಾ ಹೊಸತನವನ್ನು ಸಾಧಿಸಿದೆ. ರಗ್ಬಿ ಪ್ರೀಮಿಯರ್ ಲೀಗ್‌ನೊಂದಿಗೆ, ನಾವು ಈಗ ಕ್ರೀಡಾ ಫ್ರಾಂಚೈಸಿಗಳನ್ನು ನಿರ್ವಹಿಸುವುದರಿಂದ ಲೀಗ್‌ಗಳು ಮತ್ತು ಕ್ರೀಡೆಗಳನ್ನು ನಿರ್ವಹಿಸುವವರೆಗೆ ಕ್ರೀಡೆಯ ವ್ಯವಹಾರದಲ್ಲಿ ಮೌಲ್ಯಯುತ ಸರಪಳಿಯಲ್ಲಿ ಮುನ್ನಡೆಯುತ್ತಿದ್ದೇವೆ. ಲೀಗ್‌ನ ಕಾರ್ಯಾಚರಣೆಗಳಿಗೆ ವಾಣಿಜ್ಯ ಪಾಲುದಾರರಾಗಿ ವಿಶ್ವ ದರ್ಜೆಯ ಉದ್ಯಮವನ್ನು ಸ್ಥಾಪಿಸಲು ರಗ್ಬಿ ಇಂಡಿಯಾದೊಂದಿಗಿನ ಈ ಪಾಲುದಾರಿಕೆಯ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ಕ್ರಿಯಾತ್ಮಕ ಮತ್ತು ಶ್ರೇಷ್ಠತೆಯಿಂದ ಸಾಗುತ್ತಿರುವ ಸಂಸ್ಥೆಯಾಗಿರುವ ರಗ್ಬಿ ಇಂಡಿಯಾ ಜೊತೆಗಿನ ನಮ್ಮ ಪಾಲುದಾರಿಕೆ, ರಗ್ಬಿ ಇಂಡಿಯಾ ಮತ್ತು ಜಿಎಂಆರ್ ಸ್ಪೋರ್ಟ್ಸ್ ಪಾಲಿಗೆ ಅತ್ಯಾಕರ್ಷಕ ಹೊಸ ಅಧ್ಯಾಯವಾಗಲಿದೆ. ಮುಂಬರುವ ವಾರಗಳಲ್ಲಿ ನಾವು ಲೀಗ್‌ನ ವಿವರಗಳನ್ನು ಅನಾವರಣಗೊಳಿಸಲಿದ್ದೇವೆ. ಭಾರತಕ್ಕೆ ಬರುವ ಮತ್ತೊಂದು ವಿಶ್ವ ಪ್ರಸಿದ್ಧ ಕ್ರೀಡೆಯನ್ನು ಎದುರು ನೋಡಲು ಕಾಯುತ್ತಿರಿ ಎಂದರು.

ನಗರ-ಆಧಾರಿತ ಫ್ರಾಂಚೈಸಿಗಳು, ಮಾಲೀಕತ್ವದ ವಿವರಗಳು ಮತ್ತು ಅಂತರಾಷ್ಟ್ರೀಯ ತರಬೇತುದಾರರ ಅನಾವರಣ ಇನ್ನು ಐದು ವಾರಗಳಲ್ಲಿ ನಡೆಯಲಿದ್ದು, ರಗ್ಬಿ ಪ್ರೀಮಿಯರ್ ಲೀಗ್‌ನ ಐತಿಹಾಸಿಕ ಚೊಚ್ಚಲ ಋತುವಿಗೆ ವೇದಿಕೆ ಸಜ್ಜಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net