

ಬೆಂಗಳೂರು: ಅಧ್ಯಾತ್ಮಿಕ ಸಾಧನೆಗೆ ಚಳಿಗಾಲದಲ್ಲಿ ಬರುವ ಧನುರ್ಮಾಸದಲ್ಲಿ ಮಾಡುವ ಧ್ಯಾನ ಉತ್ತಮ ಮಾರ್ಗವಾಗಿದೆ ಎಂದು ನಾಗರಭಾವಿಯ ಆತ್ಮ ಸಂಯಮ ಯೋಗ ಗುರುಕುಲದ ಅಧ್ಯಕ್ಷ ಯೋಗಾಚಾರ್ಯ ಆತ್ಮಪ್ರೇಮ್ ಡಾ ಧನ್ವಂತರಿ ಹೇಳಿದ್ದಾರೆ.
ಡಿ.21ನ್ನು ವಿಶ್ವಸಂಸ್ಥೆಯು ವಿಶ್ವ ಧ್ಯಾನ ದಿನವನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ಧ್ಯಾನ ದಿವಸವನ್ನು ಡಿ.21ಕ್ಕೆ ನಿಗದಿ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲೆಡೆ ಚಳಿಗಾಲವಿರುತ್ತದೆ. ಈ ಸಂದರ್ಭದಲ್ಲಿ ಅಷ್ಟಾಂಗ ಯೋಗ ವಿದ್ಯೆಯಲ್ಲಿ ಬರುವ ಏಳನೆಯ ಮೆಟ್ಟಿಲಾದ ಧ್ಯಾನವನ್ನು ಮಾಡುವುದರಿಂದ ಅಧ್ಯಾತ್ಮಿಕ ಸಾಧನೆಗೆ ಪೂರಕವಾಗುತ್ತದೆ. ಭಾರತೀಯರು ಈ ಸಂದರ್ಭದಲ್ಲಿ ಧನುರ್ಮಾಸದ ವ್ರತ ಮಾಡುವ ಪರಿಪಾಠವಿದ್ದು, ಇದು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ. ಅಂತರಂಗದ ಮೌನ ಭಗವಂತನೊಂದಿಗಿನ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವಿವರಿಸಿದರು.
ಈ ವೇಳೆ ಶಿಬಿರದಲ್ಲಿ ಪಾಲ್ಗೊಂಡವರಿಗೆ ಧ್ಯಾನ ಸಾಧನೆ ಹಾಗೂ ಸಂಯಮ ಆತ್ಮಸಾಕ್ಷಾತ್ಕಾರ ಸಾಧನೆಯ ತಂತ್ರಗಳ ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಸುಮತಾರಾಣಿ, ಕಾರ್ಯದರ್ಶಿ ಚಕ್ರವರ್ತಿ, ಡಾ ಉತ್ತುಂಗ ಒಡೆಯರ್ ಮತ್ತಿತರರು ಪಾಲ್ಗೊಂಡಿದ್ದರು.