

ಬೆಂಗಳೂರು: ಜಾಗತಿಕ ಖ್ಯಾತಿಯ ಆಧ್ಯಾತ್ಮಿಕ ಗುರು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಡಿ.21 ಶನಿವಾರ ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ. ಇದೇ ಪ್ರಥಮವಾಗಿ ವಿಶ್ವ ಧ್ಯಾನ ದಿನದ ಆಚರಣೆಯನ್ನು ಹಮ್ಮಿಕೊಂಡಿರುವ ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗುರೂಜಿ ಪ್ರಧಾನ ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ನಡೆಯುವ ಜಾಗತಿಕ ಧ್ಯಾನವನ್ನು ನಡೆಸಿಕೊಡಲಿದ್ದಾರೆ. ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಡಿ.21ನ್ನು ವಿಶ್ವ ಧ್ಯಾನ ದಿನವೆಂದು ಘೋಷಿಸಿ, ಸರ್ವಾನುಮತದಿಂದ ಅನುಮೋದಿಸಲಾಗುತ್ತದೆ. ಇನ್ನು ಮುಂದೆ ಪ್ರತಿ ವರ್ಷ ಡಿ.21ರಂದು ಜಾಗತಿಕ ಧ್ಯಾನದ ಆಚರಣೆ ನಡೆಯಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮಕಾರಿ ಮತ್ತು ಶಾಂತಿ ಹಾಗೂ ಐಕ್ಯತೆಯನ್ನು ಪೋಷಿಸುವಲ್ಲಿ ಧ್ಯಾನದ ಪ್ರಯೋಜನವನ್ನು ವಿಶ್ವಸಂಸ್ಥೆ ಅಧಿಕೃತವಾಗಿ ಒಪ್ಪಿಕೊಂಡಿದೆ.
ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ‘ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ’ ಡಿ.21 ರಂದು ಪ್ರಥಮ ವಿಶ್ವ ಧ್ಯಾನದ ದಿನಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ‘ವಿಶ್ವಶಾಂತಿ ಮತ್ತು ಸಾಮರಸ್ತಯಕ್ಕಾಗಿ ಧ್ಯಾನ’ ಎಂಬ ಧ್ಯೇಯದೊಂದಿಗೆ ವಿಶ್ವ ಧ್ಯಾನ ದಿನಾಚರಣೆ ನಡೆಯಲಿದೆ. ಭಾರತೀಯ ನಂಬಿಕೆಯ ಪ್ರಕಾರ ಧನುರ್ಮಾಸ ಪ್ರಾರ್ಥನೆ ಮತ್ತು ಧ್ಯಾನಕ್ಕೆ ಶುಭಕಾಲ. ಅಂತೆಯೇ ಧನುರ್ಮಾಸದ ಡಿ.21ರಂದು ಭಾರತೀಯ ಕಾಲಮಾನದ ರಾತ್ರಿ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಆನ್‌ಲೈನ್ ಮೂಲಕ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೆಚ್ಚುತ್ತಿರುವ ಒತ್ತಡ, ಹಿಂಸಾಚಾರ, ಸಮಾಜದಲ್ಲಿ ವಿಶ್ವಾಸದ ಕೊರತೆ, ಆಧುನಿಕ ಜಗತ್ತಿನ ಸವಾಲುಗಳು. ಧ್ಯಾನವು, ಆಧುನಿಕತೆಯ ಸವಾಲುಗಳನ್ನು ಎದುರಿಸಲು ಬೇಕಾದ ಸಾಮರ್ಥ್ಯವನ್ನು ನೀಡಲಿದ್ದು, ಈ ನಿಟ್ಟಿನಲ್ಲಿ ವಿಶ್ವ ಧ್ಯಾನ ದಿನವನ್ನು ವಿಶ್ವಸಂಸ್ಥೆಯು ಸರ್ವಾನಮತದಿಂದ ಒಪ್ಪಿರುವುದು ಮಹತ್ತರ ಹೆಜ್ಜೆಯಾಗಿದೆ. ಶ್ರೀ ಶ್ರೀ ಗುರೂಜಿ ಧ್ಯಾನದ ಲಾಭಗಳನ್ನು 180 ದೇಶಗಳಲ್ಲಿ ಪಸರಿಸುವುದರಲ್ಲಿ ಕಳೆದ ನಾಲ್ಕು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸುದೃಢತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು ಧ್ಯಾನವೇ ಅತ್ಯುತ್ತಮವಾದ ದಾರಿಯೆಂದು ತೊರಿಸಿಕೊಟ್ಟಿದ್ದಾರೆ. ಅವರ ಪ್ರಯತ್ನದ ಲವಾಗಿ ವಿಶ್ವಸಂಸ್ಥೆ ಧ್ಯಾನ ದಿನವನ್ನು ಅಂಗೀಕರಿಸಿದೆ.