

ತೆಹ್ರಾನ್: ಅಪಾರ್ಟ್ಮೆಂಟ್ 11ನೇ ಮಹಡಿಯಿಂದ ತನ್ನ ಅಂಕಲ್ನಿಂದಲೇ ದೂಡಲ್ಪಟ್ಟ 16 ವರ್ಷದ ಹುಡುಗಿಯೊಬ್ಬಳು ಸಾವಿಗೀಡಾಗಿರುವ ಘಟನೆ ಇರಾನ್ ರಾಜಧಾನಿ ತೆಹ್ರಾನ್ನಲ್ಲಿ ನಡೆದಿದೆ.
ಫಾತಿಮೆ ಘೋಜಾಟ್ (16) ಮೃತ ಹುಡುಗಿ. ಮೇ 22ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ಅಂಕಲ್ ಮೊಜ್ತಬಾ ನಾಮ್ದರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಹುಡುಗಿ ಮೇಲೆ ಹಲ್ಲೆ ಮಾಡಿ ಬಳಿಕ ಆಪರ್ಟ್ಮೆಂಟ್ನಿಂದ ಕೆಳಗೆ ಎಸೆದು ಕೊಲೆ ಮಾಡಿದ್ದಾನೆ. ಘಟನೆಯು ಈಶಾನ್ಯ ತೆಹ್ರಾನ್ ಪ್ರಾಂತ್ಯದ ಶಹರಾ-ಎ ಅಸೆಮಾನ್ ಎಂಬಲ್ಲಿ ನಡೆದಿದೆ.
ಘಟನೆ ನಡೆದ ಎರಡೇ ವಾರದಲ್ಲಿ ಆರೋಪಿ ಮೊಜ್ತಬಾ ನಾಮ್ದರ್ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆಯ ತಾಯಿ ಬರಿಹಾ ರೆಹಮಾನಿ, ನಾಮ್ದರ್, ನನ್ನ ಮಗಳನ್ನು ನನ್ನ ಕಣ್ಣೆದುರಲ್ಲೇ ಅಪಾರ್ಟ್ಮೆಂಟ್ನ ಕಿಟಕಿಯಿಂದ ಎಸೆದನು. ಬಳಿಕ ಆಕೆಯ ಮೃತದೇಹವನ್ನು ನನ್ನ ಕೈಗೆ ಇಟ್ಟನು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆರಾಮವಾಗಿ ಓಡಾಡಿಕೊಂಡು ಇರುತ್ತಾನೆ. ಇದೀಗ ನಿನ್ನ ಸರದಿ ಎಂದು ನನ್ನ ಮಗನಿಗೂ ಬೆದರಿಕೆ ಹಾಕಿದ್ದಾನೆ ಎಂದು ರೆಹಮಾನಿ ಅಳಲು ತೊಡಿಕೊಂಡಿದ್ದಾರೆ.
ನಾನು ಮತ್ತು ನನ್ನ ಮಕ್ಕಳು ಭಯಭೀತರಾಗಿದ್ದೇವೆ. ಕೊಲೆ ಮಾಡಿರುವುದಕ್ಕೆ ಬೇಕಾದ ಎಲ್ಲ ಸಾಕ್ಷಿಗಳು ಇರುವಾಗ ಆರೋಪಿಯನ್ನು ಎರಡೇ ವಾರದಲ್ಲಿ ಜಾಮೀನಿನ ಮೇಲೆ ಬಿಡಬಹುದೇ? ಇತರೆ ದೇಶಗಳಲ್ಲಿಯೂ ಇದೇ ಕಾನೂನು ಪಾಲನೆ ಮಾಡುತ್ತಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಜಾಮೀನು ಕೊಟ್ಟ ನ್ಯಾಯಾಲಯ ಬಗ್ಗೆಯೂ ಸಾಕಷ್ಟು ಆಕ್ಷೇಪದ ಮಾತುಗಳು ಕೇಳಿಬರುತ್ತಿದೆ. ಆದರೆ, ಸಾಕ್ಷ್ಯಾಧಾರಗಳ ಕೊರತೆ ಇದೆ ಎಂಬ ಕಾರಣದಲ್ಲಿ ಆರೋಪಿ ಜಾಮೀನು ಸಿಕ್ಕಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಂಗವು ತನ್ನ ಸ್ವಾತಂತ್ರ್ಯವನ್ನು ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತಿದೆ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)