ಲ್ಯಾಂಬೋರ್ಗಿನಿ ಕಾರು ರಹಸ್ಯ ಬಯಲು: 5 ವರ್ಷದ ಬಳಿಕ ವಶ

Car 1
Published on

ಬೆಂಗಳೂರು: ತೆರಿಗೆ ವಂಚನೆ ಹಾಗೂ ನಕಲಿ ನೋಂದಣಿ ಸಂಖ್ಯೆ ಫಲಕ ಬಳಕೆ ಆರೋಪದಲ್ಲಿ ಸೋಮವಾರ ಆರ್​ಟಿಒ ಅಧಿಕಾರಿಗಳು ಜಪ್ತಿ ಮಾಡಿರುವ ಐಷಾರಾಮಿ ಲ್ಯಾಂಬೋರ್ಗಿನಿ ಕಾರು 5 ವರ್ಷಗಳ ಹಿಂದೆ ಟೆಕ್ಕಿ ಹತ್ಯೆ ಯತ್ನ ಪ್ರಕರಣದಲ್ಲಿ ಜಪ್ತಿಯಾಗಿತ್ತು ಎಂಬ ಸಂಗತಿ ಬಯಲಾಗಿದೆ. ನೋಂದಣಿ, ವಿಮೆ ಸೇರಿ ಈಗ ನೀಡಲಾಗಿರುವ ದಾಖಲೆಗಳು ನಕಲಿಯಾಗಿದ್ದು, ಆರ್​ಟಿಒ ಅಧಿಕಾರಿಗಳ ತಂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಹಸ್ಯ ಭೇದಿಸಲು ಮುಂದಾಗಿದೆ.

ಕೇರಳ ಮೂಲದ ಬೀಡಿ ಉದ್ಯಮಿ ಮೊಹಮದ್ ನಿಶಾಮ್ ಎಂಬಾತ 2015ರಲ್ಲಿ ಬೆಂಗಳೂರಿನ ಯುಬಿ ಸಿಟಿ ಬಳಿ ಆಪಾರ್ಟ್​ವೆುಂಟ್​ನಲ್ಲಿ ವಾಸವಿದ್ದ. ಆತ ಇದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ತಡರಾತ್ರಿ ಕರ್ಕಶ ಶಬ್ದ ಮಾಡುತ್ತಾ ಜಾಲಿರೈಡ್ ಮಾಡುತ್ತಿದ್ದ. ಅದರಿಂದ ಸುತ್ತಮುತ್ತಲ ನಿವಾಸಿಗಳ ನೆಮ್ಮದಿಗೆ ಭಂಗ ಉಂಟಾಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದ್ದ ಟೆಕ್ಕಿಯೊಬ್ಬರು ನಿಶಾಮ್ ವಿರುದ್ಧ ದೂರು ನೀಡಿದ್ದರು. ಅದಕ್ಕೆ ಆಕ್ರೋಶಗೊಂಡಿದ್ದ ನಿಶಾಮ್ ಟೆಕ್ಕಿಯ ಮೇಲೆ ಎರಡು ಬಾರಿ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದ. ಅಲ್ಲದೆ, ಪಿಸ್ತೂಲ್ ತೋರಿಸಿ ಬೆದರಿಸಿದ್ದ. ಆತನಿಂದ ತೊಂದರೆ ಅನುಭವಿಸಿದ್ದ ಟೆಕ್ಕಿ, 2015ರಲ್ಲೇ ಕಬ್ಬನ್​ಪಾರ್ಕ್ ಠಾಣೆಯಲ್ಲಿ ನಿಶಾಮ್ ವಿರುದ್ಧ ದೂರು ನೀಡಿದ್ದರು.

ನಿಶಾಮ್ನ್ನು ಬಂಧಿಸಿದ್ದ ಪೊಲೀಸರು, ಆತ ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಿದ್ದರು. ಪರಿಶೀಲನೆ ನಡೆಸಿದಾಗ ಕಾರು ನಿಶಾಮ್ೆ ಸೇರಿದ್ದಲ್ಲ, ದೆಹಲಿ ಮೂಲದ ಉದ್ಯಮಿಯೊಬ್ಬರ ಹೆಸರಿನಲ್ಲಿದೆ ಎಂದು ತನಿಖಾಧಿಕಾರಿಗಳಿಗೆ ಗೊತ್ತಾಗಿತ್ತು. ಅಲ್ಲದೆ ಬಂಧಿತ ನಿಶಾಮ್ ಕೇರಳದಲ್ಲಿ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದ ಎನ್ನಲಾಗಿತ್ತು.

ಹಲವು ಅನುಮಾನ

5 ವರ್ಷಗಳ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರು ಹೇಗೆ ಬಿಡುಗಡೆಯಾಯಿತು? ಈಗ ಮತ್ತೊಬ್ಬನ ಬಳಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರ್​ಟಿಒ ಅಧಿಕಾರಿಗಳ ಪ್ರಕಾರ ನಕಲಿ ನೋಂದಣಿ ಫಲಕ ಅಳವಡಿಸಿ ಸಂಚರಿಸುತ್ತಿತ್ತು. ತೆರಿಗೆಯನ್ನೂ ಪಾವತಿಸಿಲ್ಲ. 2015ರಲ್ಲೇ ಪೊಲೀಸರು ಜಪ್ತಿ ಮಾಡಿದಾಗ ಅದೆಲ್ಲವನ್ನೂ ಪರಿಶೀಲನೆ ನಡೆಸಿಲ್ಲವೇ ಎಂಬುದು ತನಿಖೆಯಲ್ಲಿ ಗೊತ್ತಾಗಬೇಕಿದೆ. ನೋಂದಣಿ ಒಬ್ಬರ ಹೆಸರಲ್ಲಿದೆ, ವಿಮೆ ಇನ್ನೊಬ್ಬರ ಹೆಸರಿನಲ್ಲಿರುವುದು ಈವರೆಗಿನ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net