

ಸಾಗರ: ಸಾಗರ ತಾಲೂಕಿನ ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೋಡಿ ಗ್ರಾಮದ ಸರ್ವೇ ನಂ.41ರಲ್ಲಿ ತಿಮ್ಮಪ್ಪ ಹಿರಳೆ ಎಂಬುವರು ಬೆಳೆದಿದ್ದ ಶುಂಠಿ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ನಾಶಪಡಿಸಿದ್ದಾರೆ.
ತಿಮ್ಮಪ್ಪ ಬಗರ್‌ಹುಕುಂ ಜಮೀನು ಉಳುಮೆ ಮಾಡುತ್ತಿದ್ದಾರೆ. ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮಂಜೂರಾತಿಗೆ ಕಾಯುತ್ತಿದ್ದಾರೆ. ಇದೇ ಸರ್ವೇ ನಂಬರ್‌ನ ಎರಡು ಎಕರೆಯಲ್ಲಿ ಶುಂಠಿ ನಾಟಿ ಮಾಡಿದ್ದರು. ಆದರೆ ಅರಣ್ಯಾಧಿಕಾರಿಗಳು ಯಾವುದೇ ಸೂಚನೆ ನೀಡದೆ ಬೆಳೆ ನಾಶಪಡಿಸಿದ್ದಾರೆ ಎಂದು ರೈತ ಸಂಘದ ಪದಾಧಿಕಾರಿಗಳು ದೂರಿದ್ದಾರೆ.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಸಬಾ ಹೋಬಳಿಯ ಹಿರಳೆ ತಿಮ್ಮಪ್ಪ ಅವರು ಎರಡು ತಿಂಗಳ ಹಿಂದೆ ಶುಂಠಿ ಬೆಳೆ ಹಾಕಿದ್ದರು. ಶುಕ್ರವಾರ ಅರಣ್ಯ ಅಧಿಕಾರಿಗಳು ರೈತನಿಗೆ ಯಾವುದೇ ಸೂಚನೆ ನೀಡದೆ ಬೆಳೆನಾಶ ಮಾಡಿದ್ದಾರೆ. ಗೋಪಾಲಕೃಷ್ಣ ಬೇಳೂರು ಶಾಸಕರಾದ ಮೇಲೆ ಚಳವಳಿನಿರತ ರೈತರ ಮೇಲೆ ದೌರ್ಜನ್ಯ, ರೈತರ ಬೆಳೆನಾಶ, ರೈತರನ್ನು ಜೈಲಿಗೆ ಕಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಶುಂಠಿ ಬೆಳೆ ನಾಶ ಮಾಡಿದ ಅರಣ್ಯ ಅಧಿಕಾರಿಗಳ ವಿರುದ್ಧ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಪದೇಪದೆ ತೊಂದರೆ ಕೊಟ್ಟಿದ್ದಾರೆ. ಕನಿಷ್ಠ ಒಂದು ಬೆಳೆ ತೆಗೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿದರೂ ಬೆಳೆ ನಾಶ ಮಾಡಿದ್ದಾರೆ. ಸಾಲ ಮಾಡಿ ನಾವು ಬೆಳೆ ಹಾಕಿದ್ದೇವೆ. ಇದೀಗ ಪೂರ್ಣ ಬೆಳೆ ನಾಶ ಮಾಡಿದ್ದಾರೆ ಎಂದು ತಿಮ್ಮಪ್ಪ ಅಳಲು ತೋಡಿಕೊಂಡರು.
ರೈತ ತಿಮ್ಮಪ್ಪಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಸಿರವಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.