ಕಾಂಗ್ರೆಸ್​ ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ: ಜಿ. ಪರಮೇಶ್ವರ್​ ಹೇಳಿಕೆ

G Parameshwar
Published on

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲುವ ಮುನ್ನ 5 ಉಚಿತ ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್​, ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ವರಸೆ ಬದಲಾಯಿಸಿದೆ. ಕಾಂಗ್ರೆಸ್​ ಗ್ಯಾರೆಂಟಿಗಳಿಗೆ ಷರತ್ತು ವಿಧಿಸುವುದಾಗಿ ಜಿ. ಪರಮೇಶ್ವರ್​ ಹೇಳಿದ್ದಾರೆ. ಈ ಹಿಂದೆ ಷರತ್ತಿನ ಬಗ್ಗೆ ತಿಳಿಸದೇ ಎಲ್ಲರಿಗೂ ಉಚಿತ ಎಂದು ಕಾಂಗ್ರೆಸ್​ ಹೇಳಿತ್ತು.

ನಾವು ಬದ್ಧರಾಗಿ ಇರುತ್ತೇವೆ

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿ. ಪರಮೇಶ್ವರ್​, ಕಾಂಗ್ರೆಸ್ ಗ್ಯಾರಂಟಿಗಳಿಗೆ ಕಂಡಿಷನ್ಸ್ ಇರುತ್ತದೆ. ಮೊದಲ ಕ್ಯಾಬಿನೆಟ್​ನಲ್ಲೇ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಮೊದಲ ಕ್ಯಾಬಿನೆಟ್​ನಲ್ಲಿ ಜಾರಿ ಮಾಡುತ್ತೇವೆ ಎಂದರು.

ಷರತ್ತುಗಳು ಇರುತ್ತವೆ

ಆಯಾ ಇಲಾಖೆ ಸಚಿವರು ಕೂತು ಗ್ಯಾರಂಟಿಗಳ ಬಗ್ಗೆ ವರ್ಕ್ ಮಾಡಿ ಜಾರಿ ಮಾಡುತ್ತೇವೆ. ಆದರೆ, ಗ್ಯಾರಂಟಿಗಳಿಗೆ ಷರತ್ತುಗಳು ಇರುತ್ತವೆ. ಸುಮ್ಮನೆ ಕೊಟ್ಟರೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ. ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಸೂಚನೆ ನೀಡಿದರು.

ಹೈಕಮಾಂಡ್ ತೀರ್ಮಾನ ಮಾಡುತ್ತದೆ

ಸಿಎಂ ಆಯ್ಕೆ ವಿಚಾರವಾಗಿ ಮಾತನಾಡಿ, ಎಲ್ಲವು ಸುಸೂತ್ರವಾಗಿ ನಡೆಯುತ್ತದೆ. ಹೈಕಮಾಂಡ್ ಪ್ರಕ್ರಿಯೆ ನಡೆಸುತ್ತಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದೆಹಲಿಯಲ್ಲಿ ಸೋನಿಯಾ, ರಾಹುಲ್ ಹಾಗೂ ಅಧ್ಯಕ್ಷರಾದ ಖರ್ಗೆ ಅವರು ಕೂತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ನೀವು ಅಂದುಕೊಂಡ ಹಾಗೆ ದೊಡ್ಡ ಹೋರಾಟ ಆಗುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಸ್ಥಾನ‌ ಕೊಡಬೇಕು. ಇದು ಇರುವ ಪದ್ಧತಿ. ಸಿದ್ದರಾಮಯ್ಯ ಸಿಎಲ್​ಪಿ ಲೀಡರ್ ಕೆಲಸ ಮಾಡಿದ್ದಾರೆ. ಈ ಬಾರಿ ನಾವು ಸಾಮೂಹಿಕ ನಾಯಕತ್ವ ಅಂತ ಹೋಗಿದ್ವಿ. ಈಗ ಅಧಿಕಾರ ಬಂದಿದೆ. ಹೈಕಮಾಂಡ್ ಯಾರು ಸಿಎಂ ಅಂತ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಶಕ್ತಿ ಪ್ರದರ್ಶನ ಅಲ್ಲ

ಸಿದ್ದರಾಮಯ್ಯ ಜೊತೆ ಶಾಸಕರು ಹೋಗಿ ಶಕ್ತಿ ಪ್ರದರ್ಶನ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಶಕ್ತಿ ಪ್ರದರ್ಶನ ಅಲ್ಲ. ಕೆಲವು ಶಾಸಕರು ಅವರ ನಾಯಕರ ಜೊತೆ ಹೋಗಿರುತ್ತಾರೆ. ಅದನ್ನ ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ. ನಾವು ಬೇಕಾದರೂ ಶಾಸಕರನ್ನ ಕಡೆದುಕೊಂಡು ಹೋಗಬಹುದು‌. ಆದರೆ ನಾವು ಹೋಗುವುದಿಲ್ಲ. ಕೆಲವರು ಹೋಗಿದ್ದಾರೆ ಅಷ್ಟೆ. ಅದಕ್ಕೆ ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ ಎಂದರು.

ಅಸಮರ್ಥನಲ್ಲ

2013ರಲ್ಲಿ ಪರಮೇಶ್ವರಗೆ ಅನ್ಯಾಯ ಆಯ್ತು. ಈ ಬಾರಿ ಅದನ್ನು ಹೈಕಮಾಂಡ್ ಸರಿ ಮಾಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್​, ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. ನಾನು ಕೂಡ 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಆ ರೀತಿ ಮಾಡುವುದಿಲ್ಲ. ನನಗೆ ಪ್ರಿನ್ಸಿಪಲ್ ಇದೆ. ನನಗೆ ಶಿಸ್ತು ಮುಖ್ಯ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಖಂಡಿತ ಮಾಡುತ್ತೇನೆ. ಅವಕಾಶ ಕೊಟ್ಟರೆ ಮಾಡುವುದಿಲ್ಲ ಎಂದು ಹೇಳುವುದಿಲ್ಲ. ಹೈಕಮಾಂಡ್​ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಎಲ್ಲವೂ ಗೊತ್ತಿದೆ. ಲಾಬಿ ಮಾಡಬಾರದು ಅಂತ ಸುಮ್ಮನೆ ಇದ್ದೇನೆ. ಸುಮ್ಮನೆ ಇದ್ದೇನೆ ಅಂದರೆ ಅಸಮರ್ಥ ಅಂತ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಪರಮೇಶ್ವರ್​ ಟಾಂಗ್ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net