BTS ಭೇಟಿಯಾಗಲು ಮನೆ ಬಿಟ್ಟ ಹೋದ ಬಾಲಕಿಯರಿಗೆ ಕಾದಿತ್ತು ಶಾಕ್​!

BTS
Published on

ಚೆನ್ನೈ: ದಕ್ಷಿಣ ಕೊರಿಯಾ ಮೂಲದ ಬ್ಯಾಂಗ್​ಟ್ಯಾನ್​ ಬಾಯ್ಸ್​ (BTS)ಗೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಇದರ ಕ್ರೇಜ್​ ದೊಡ್ಡಮಟ್ಟದಲ್ಲಿ ಇದ್ದು, ಯುವತಿಯರೇ ಹೆಚ್ಚು ಎಂದು ಹೇಳಬಹುದಾಗಿದೆ. ಕೆಲವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿಕೊಂಡು ಇವರ ಕಾರ್ಯಕ್ರಮ ವೀಕ್ಷಿಸಲು ಪ್ರಯಾಣ ಬೆಳೆಸಿದ್ದಾರೆ.

ಬಿಟಿಎಸ್​ಅನ್ನು ಖುದ್ದಾಗಿ ಭೇಟಿ ಮಾಡಿ ಅಭಿಮಾನ ವ್ಯಕ್ತಪಡಿಸಲು ಅನೇಕ ಯುವತಿಯರು ಕನಸು ಕಾಣುತ್ತಿರುತ್ತಾರೆ. ಅದೇ ರೀತಿ ತಮಿಳುನಾಡಿನ ಕರೂರು ಜಿಲ್ಲೆಯ ಮೂವರು ಬಾಲಕಿಯರು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಮೆಚ್ಚಿನ ಬಿಟಿಎಸ್ ಅನ್ನು ಭೇಟಿ ಮಾಡಲು ಮನೆ ಬಿಟ್ಟು ತೆರಳಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದ್ದು, ಪೊಲೀಸರು ಮೂವರು ಬಾಲಕಿಯರನ್ನು ರಕ್ಷಿಸಿದ್ದಾರೆ.

ನಡೆದಿದ್ದೇನು?

ತಮಿಳುನಾಡು ಕರೂರು ಜಿಲ್ಲೆಯವರಾದ ಮೂವರು ಬಾಲಕಿಯರು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮೂವರು ಬಾಲಕಿಯರು ಬಿಟಿಎಸ್​ ಬ್ಯಾಂಡ್​ ಟ್ರೂಪಿನ ಸದಸ್ಯರನ್ನು ಭೇಟಿ ಮಾಡಿ ನಿರ್ಧರಿಸಿದ ಬಾಲಕಿಯರು 14 ಸಾವಿರ ಹಣದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್​ಗೆ ತೆರಳುವ ಬಗ್ಗೆ ಯೋಜನೆ ರೂಪಿಸಿದ್ದರು.

BTS Girls

ಸಮುದ್ರ ದಾರಿಯ ಮೂಲಕ ದಕ್ಷಿಣ ಕೊರಿಯಾಗೆ ತೆರಳಲು ಯೋಜನೆ ರೂಪಿಸಿದ್ದ ಬಾಲಕಿಯರು ಮೊದಲಿಗೆ ಕರೂರು ಸಮೀಪದ ಇರೋಡಿನಿಂದ ಚೆನ್ನೈಗೆ ತೆರಳಿ ಅಲ್ಲಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ ಹೋಗಿ ದಕ್ಷಿಣ ಕೊರಿಯಾದ ಸಿಯೋಲ್​ಗೆ ಹೋಗುವ ಶಿಫ್​ ಅನ್ನು ಏರುವ ಯೋಜನೆ ಹಾಕಿಕೊಂಡಿದ್ದರು.

ಅದರಂತೆ ಜನವರಿ 04ರಂದು ಮನೆ ಬಿಟ್ಟು ಬಂದಿರುವ ಬಾಲಕಿಯರು ಬಸ್​ ಮೂಲಕ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಹೋಟೆಲ್​ನಲ್ಲಿ ತಂಗಿದ್ದ ಮೂವರಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಬಿಟಿಎಸ್​ಅನ್ನು ಭೇಟಿ ಮಾಡುವ ಆಸೆ ಕಮರಿ ಹೋಗಿದೆ. ಇದಾದ ಬಳಿಕ ಊರಿಗೆ ಹೋಗಲೆಂದು ರೈಲು ಹತ್ತಿದ್ದಾರೆ. ಆದರೆ, ಕಟ್ಪಾಡಿ ಸ್ಟೇಷನ್​ಗೆ ಬಂದಾಗ ತಿಂಡಿ ತಿನ್ನಲೆಂದು ಕೆಳಗೆ ಇಳಿದಾಗ ರೈಲು ತಪ್ಪಿ ಹೋಗಿದೆ. ಮೂವರು ಬಾಲಕಿಯರು ದಿಕ್ಕು ದೋಚದಂತೆ ಅತ್ತ-ಇತ್ತ ಸುಳಿದಾಡುತ್ತಿರುವಾಗ ರೈಲ್ವೆ ಸಿಬ್ಬಂದಿ ಆ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೂವರು ಬಾಲಕಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಶಕ್ಕೆ ಒಪ್ಪಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮೂವರು ಬಾಲಕಿಯರಿಗೆ ಕೌನ್ಸಿಲಿಂಗ್ ಮಾಡಿ, ಅವರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಸಹ ಮಾಡಲಾಗಿದೆ. ಬಳಿಕ ಅವರ ಪೋಷಕರಿಗೆ ಬಾಲಕಿಯರನ್ನು ಒಪ್ಪಿಸಿ ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net