

ಉತ್ತರಪ್ರದೇಶ: ನಮ್ಮ ಪೂರ್ವಜರ ಕಾಲದಲ್ಲಿ ಬರಗಾಲ ಆವರಿಸಿದರೆ, ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಇದನ್ನು ಮೀರಿ ಸಹ ಮಳೆ ಕಾಣಿಸದೆ ಹೋದರೆ, ಕಪ್ಪೆಗಳಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಕಾಯುವರು. ಸದ್ಯ ಈ ಸಂಪ್ರದಾಯ ಇದೀಗ ಮತ್ತೆ ಮರುಕಳಿಸಿದ್ದು, ಉತ್ತರಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವಾರಣಾಸಿಯ ಸ್ಥಳೀಯರು ಶಾಸ್ತ್ರೋಕ್ತವಾಗಿ ಕಪ್ಪೆಗಳಿಗೆ ಮದುವೆ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಹಿಂದೂ ಅರ್ಚಕರೊಬ್ಬರು ಕಪ್ಪೆಗಳಿಗೆ ವಿವಾಹ ಮಾಡಿಸಿದ್ದು, ಗಂಡು-ಹೆಣ್ಣಿಗೆ ಹೇಗೆ ವಸ್ತ್ರ ತೊಡಿಸಿ, ಅಲಂಕಾರ ಮಾಡುತ್ತಾರೆಯೋ, ಈ ಮದುವೆಯನ್ನು ಕೂಡ ಹಾಗೆಯೇ ಮಾಡಿದ್ದಾರೆ.
ಕೆಂಪು ವಸ್ತ್ರದಲ್ಲಿ ಮಿಂಚಿದ ಕಪ್ಪೆಗಳಿಗೆ ಪುಷ್ಪಗಳಿಂದ ಅರ್ಚನೆ ಮಾಡಲಾಯಿತು. ಮದುವೆಗೆ ಸ್ಥಳೀಯರು ವಾದ್ಯ ಮತ್ತು ಭಜನೆ ಕಾರ್ಯಕ್ರಮವನ್ನು ಕೂಡ ಏರ್ಪಡಿಸಿರುವುದು ವಿಶೇಷ. ಘಟನೆಯ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ,(ಏಜೆನ್ಸೀಸ್).