

ಮಂಡ್ಯ: ಚಿತ್ರದುರ್ಗದ ರೇಣುಕಸ್ವಾಮಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು ಎಂದು ಒತ್ತಾಯಿಸಿ ರೈತ ಸಂಘ(ರೈತ ಬಣ)ದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲವೊತ್ತು ಧರಣಿ ನಡೆಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ದರ್ಶನ್ ಒಬ್ಬ ಪ್ರಭಾವಿ ನಟ. ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಈತ ಭಾಗಿಯಾಗಿರುವ ಕಾರಣ, ಬಲಾಢ್ಯರು ಮತ್ತು ಪ್ರಭಾವಿಗಳು ಪ್ರಕರಣವನ್ನು ಮುಚ್ಚಿಹಾಕುವ ಸಂಶಯ ಇರುವುದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ರೇಣುಕಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಆತ ಯಾವುದೇ ತಪ್ಪು ಮಾಡಿದ್ದರೂ ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಆದರೆ, ಕಾನೂನು ಕೈಗೆತ್ತಿಕೊಂಡಿರುವ ದರ್ಶನ್ ಮತ್ತು ಇತರೆ ಆರೋಪಿಗಳ ನಡೆ ಸರಿಯಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಮುಂದೆ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುವುದು ಸರಿಯಲ್ಲ, ಮುಖ್ಯಮಂತ್ರಿ, ಗೃಹಸಚಿವರು ಈ ನಿಟ್ಟಿನಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸಿದರು.
ಕಾನೂನು ಎಲ್ಲರಿಗೂ ಒಂದೇ ದರ್ಶನ್ ಅವರ ಪ್ರಭಾವಕ್ಕೆ ಸರ್ಕಾರ ಮತ್ತು ಪೊಲೀಸರು ಮಣಿಯಬಾರದು. ನಟ ದರ್ಶನ್ ಮೇಲೆ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ಅವರ ರೌಡಿಶೀಟರ್ ಓಪನ್ ಮಾಡಬೇಕು. ಈ ಹಿಂದೆ ಅವರು ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಡ್ರಗ್ಸ್ ಸೇವಿಸಿ ಮೈಸೂರಿನಲ್ಲಿ ಕಾರು ಅಪಘಾತ ಮಾಡಿದ್ದರು. ಆಗಲೇ ಇವರ ವಿರುದ್ಧ ಕ್ರಮ ಕೈಗೊಂಡು ಬುದ್ಧಿ ಕಲಿಸಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದು ದೂರಿದರು.
ಚಿತ್ರರಂಗ ಸಮಾಜದಲ್ಲಿ ಬದಲಾವಣೆ ತರುವಂತದ್ದಾಗಿದೆ. ಇದಕ್ಕೆ ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಇಂದಿಗೂ ಸಾರ್ವಕಾಲಿಕ ಉದಾಹರಣೆ ನೀಡುವ ಚಿತ್ರ. ಈ ಸಿನಿಮಾದಿಂದ ಸ್ಪೂರ್ತಿ ಪಡೆದ ನೂರಾರು ಜನರು ತಮ್ಮ ಬದುಕಿನಲ್ಲಿ ಬದಲಾವಣೆ ಕಂಡುಕೊಂಡಿದ್ದಾರೆ. ಒಬ್ಬ ನಟ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಆದರೆ ನಾಯಕನಂತೆ ನಟಿಸುವ ದರ್ಶನ್ ನಿಜ ಜೀವನದಲ್ಲಿ ಖಳನಾಯಕನಿಗಿಂತಲೂ ಕ್ರೂರವಾಗಿ ನಡೆದುಕೊಂಡಿದ್ದಾರೆ. ಕೊಲೆಯಂತಹ ಘೋರ ಕೃತ್ಯ ಎಸಗಿರುವ ನಟ ದರ್ಶನ್‌ನನ್ನು ಚಿತ್ರೋದ್ಯಮದಿಂದ ಶಾಶ್ವತವಾಗಿ ನಿಷೇದ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ, ಹೆಮ್ಮಿಗೆ ಚಂದ್ರಶೇಖರ್ ಇತರರಿದ್ದರು.