

Freedom of speech : ಕಮರ್ಷಿಯಲ್ ಉದ್ದೇಶಗಳೊಂದಿಗೆ ಮಾತನಾಡುವಾಗ ನೀವು ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಕೆಲ ಯೂಟ್ಯೂಬರ್ಸ್ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಇಂದು (ಆಗಸ್ಟ್ 25) ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ.
ಅಂಗವಿಕಲರನ್ನು ಅಪಹಾಸ್ಯ ಮಾಡುವಂತಹ ಹಲವಾರು ಕಾಮಿಡಿ ವಿಡಿಯೋಗಳ ವಿರುದ್ಧ ಆಕ್ರೋಶ ಹೊರಹಾಕಿರುವ ಉನ್ನತ ನ್ಯಾಯಾಲಯ, ಕಾಮೆಡಿಯನ್ ಹಾಗೂ ಯೂಟ್ಯೂಬರ್ ಸಮಯ್ ರೈನಾ ಸೇರಿದಂತೆ ಇನ್ನಿತರ ಯೂಟ್ಯೂಬರ್ಸ್ ಹಾಗೂ ಇನ್ಫ್ಲುಯೆನ್ಸರ್ಗಳಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ, ಮುಂದೆ ಇಂತಹ ಕಂಟೆಂಟ್ಗಳು ಮರುಕಳಿಸಿದರೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವುದಾಗಿಯೂ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಬೆಂಬಲವಾಗಿ ನಿಂತಿರುವ ಕ್ಯೂರ್ ಎಸ್ಎಂಎ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆ ದಾಖಲಿಸಿದ ಅರ್ಜಿಯ ವಿಚಾರಣೆ ನಡೆಸಿ, ಈ ಆದೇಶವನ್ನು ಹೊರಡಿಸಿದೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಸಂಚಿಕೆಯಲ್ಲಿ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಮಾಡಿದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ.
ಅಂಗವಿಕಲರನ್ನು ಅಣಕಿಸುವ ಮತ್ತು ಅಪಹಾಸ್ಯ ಮಾಡುವಂತಹ ಕಾಮಿಕ್ ವಿಡಿಯೋಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿ, ಕ್ರಮಕೈಗೊಳ್ಳಲು ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್ಗಳಾದ ಸಮಯ್ ರೈನಾ, ವಿಪುನ್ ಗೋಯಲ್, ಬಲರಾಜ್ ಪರಮ್‌ಜೀತ್ ಸಿಂಗ್ ಘಾಯ್, ಸೋನಾಲಿ ಠಕ್ಕರ್ ಮತ್ತು ನಿಶಾಂತ್ ಜಗದೀಶ್ ತನ್ವರ್ ಸೇರಿದಂತೆ ಅನೇಕ ಯೂಟ್ಯೂಬರ್ಸ್ ಹಾಗೂ ಇನ್ಫ್ಲುಯೆನ್ಸರ್ಗಳಿಗೆ ನ್ಯಾಯಾಲಯ ಖಡಕ್ ಸೂಚನೆ ನೀಡಿದೆ.
ಫೌಂಡೇಶನ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಮಾತನಾಡಿ, ಒಳ್ಳೆಯ ಪ್ರಜ್ಞೆ ಇಂದು ಮೇಲುಗೈ ಸಾಧಿಸಿದೆ ಮತ್ತು ಎಲ್ಲಾ ಕಾಮೆಡಿಯನ್ಗಳು ಕ್ಷಮೆಯಾಚಿಸಿದ್ದಾರೆ ಎಂದರು. ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮಾತನಾಡಿ, ಕಾಮೆಡಿಯನ್ಸ್ ಮತ್ತು ಇನ್ಫ್ಲುಯೆನ್ಸರ್ಗಳಿಗೆ ಸೂಕ್ತ ಮಾರ್ಗಸೂಚಿ ರೂಪಿಸಲು ಸರ್ಕಾರ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದರು.
ಸರ್ಕಾರ ರೂಪಿಸುವ ಮಾರ್ಗಸೂಚಿಗಳು ಕೇವಲ ಒಂದು ಘಟನೆಗೆ ಪ್ರತಿಕ್ರಿಯೆ ಆಗಿರಬಾರದು. ಭವಿಷ್ಯದ ಸವಾಲುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಮಾರ್ಗಸೂಚಿಯು ವಿಶಾಲ ಆಧಾರಿತವಾಗಿರಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ ನೀಡಿದರು.
ಹಾಸ್ಯವು ಜೀವನದ ಒಂದು ಭಾಗ ಮತ್ತು ನಾವು ನಮ್ಮನ್ನು ಹಾಸ್ಯ ಮಾಡಿಕೊಳ್ಳಬಹುದು. ಆದರೆ, ನೀವು ಇತರರನ್ನು ಗೇಲಿ ಮಾಡಲು ಪ್ರಾರಂಭಿಸಿದಾಗ, ಸೂಕ್ಷ್ಮತೆಯ ಉಲ್ಲಂಘನೆಯಾಗುತ್ತದೆ. ಭಾರತವು ಹಲವಾರು ಸಮುದಾಯಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದೆ ಮತ್ತು ಇಂದಿನ ಇನ್ಫ್ಲುಯೆನ್ಸರ್ಗಳೆಂದು ಕರೆಯಲ್ಪಡುವವರು ನಿಮ್ಮ ಭಾಷಣವನ್ನು ಕಮರ್ಷಿಯಲ್ ಉದ್ದೇಶದಿಂದ ಮಾಡುವಾಗ, ಒಂದು ಸಮುದಾಯವನ್ನು ಬಳಸಿಕೊಂಡು ಅವರ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. (ಏಜೆನ್ಸೀಸ್)