

Violent Behavior : ಇತ್ತೀಚೆಗೆ ಹೈದರಾಬಾದ್‌ನ ಕುಕ್ಕಟಪಲ್ಲಿಯಲ್ಲಿ ನಡೆದ ಕ್ರಿಕೆಟ್ ಬ್ಯಾಟ್ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಕ್ಕಳಲ್ಲಿ ಈ ಪರಿಯ ಹಿಂಸೆ ನಿಜಕ್ಕೂ ಆಘಾತಕಾರಿ ಮತ್ತು ಕಳವಳಕಾರಿಯಾಗಿದೆ. ಈ ಘಟನೆ ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬರನ್ನು ಯೋಚಿಸುವಂತೆ ಮಾಡಿದೆ.
ಕುಕ್ಕಟಪಲ್ಲಿಯಲ್ಲಿ 14 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಯ ಮನೆಯಿಂದ ಬ್ಯಾಟ್ ಕದಿಯಲು ಪ್ರಯತ್ನಿಸಿದ್ದ. ಯಾರೂ ಇಲ್ಲ ಎಂದು ಭಾವಿಸಿ, ಬಾಲಕಿಯಿದ್ದ ಮನೆಯೊಳಗೆ ಹೋಗಿದ್ದ. ಈ ಕಳ್ಳತನ ಮಾಡಲು ಆತ ಒಂದು ತಿಂಗಳಿನಿಂದ ಪೂರ್ವತಯಾರಿ ಮಾಡಿಕೊಂಡಿದ್ದ. ತನ್ನ ಸಂಚನ್ನು ಒಂದು ಕಾಗದದ ಮೇಲೂ ಬರೆದಿಟ್ಟಿದ್ದ. ಬಾಲಕಿ ಸಹಸ್ರ, ಆರೋಪಿ ಬ್ಯಾಟ್ ಕದಿಯುತ್ತಿರುವುದನ್ನು ನೋಡಿದ್ದಾಳೆ. ತಕ್ಷಣ ಕಳ್ಳ, ಕಳ್ಳ ಎಂದು ಚೀರಾಡಿದ್ದಾಳೆ. ಇದರಿಂದ ಗಾಬರಿಯಾದ ಆತ, ಚಾಕುವಿನಿಂದ ಸಹ್ರಸಾಳ ಕತ್ತು ಸೀಳಿ, ಹೊಟ್ಟೆಗೆ ಇರಿದು ಕೊಂದಿದ್ದಾನೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 21 ಬಾರಿ ಚಾಕುವಿನಿಂದ ಇರಿದು ಆತ ಕೊಲೆ ಮಾಡಿದ್ದಾನೆ. ಇದೀಗ ಈ ಘಟನೆ ರಾಷ್ಟ್ರವ್ಯಾಪಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಘಟನೆಯು ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ನಡವಳಿಕೆಯ ಪ್ರತಿಬಿಂಬವಾಗಿದೆ. ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ನಿರ್ಲಕ್ಷ್ಯ, ಮಾಧ್ಯಮ ಪ್ರಭಾವ ಮುಂತಾದವುಗಳು ಮಕ್ಕಳಲ್ಲಿನ ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ. ಹೀಗಾಗಿ, ಪಾಲಕರು ಮತ್ತು ಸಮಾಜಕ್ಕೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಪಾಲಕರಿಗೆ ಇಂದಿನ ಸಮಾಜದಲ್ಲಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವಲ್ಲಿ ಇರುವ ಹೆಚ್ಚಿನ ಜವಾಬ್ದಾರಿಯನ್ನು ಈ ಘಟನೆ ಒತ್ತಿ ಹೇಳುತ್ತದೆ. ಮಕ್ಕಳನ್ನು ಭಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಬೆಳೆಸುವುದೇ ಸರಿಯಾದ ಮಾರ್ಗವಾಗಿದೆ.
ಮಕ್ಕಳಲ್ಲಿ ಹಿಂಸಾತ್ಮಕ ನಡವಳಿಕೆ ಹೆಚ್ಚಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ, ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳು ಪ್ರಮುಖವಾದವು. ತಮ್ಮ ಮೇಲೆ ನಿಯಂತ್ರಣವಿಲ್ಲದಿರುವಂತಹ ಭಾವನಾತ್ಮಕ ಸಮಸ್ಯೆಗಳು ಅವರ ಆಕ್ರಮಣಕಾರಿ ನಡವಳಿಕೆಗೆ ಕಾರಣವಾಗುತ್ತವೆ. ಕೌಟುಂಬಿಕ ಸಂದರ್ಭಗಳು ಸಹ ಇದರ ಒಂದು ಭಾಗವಾಗಿದೆ. ಪಾಲಕರ ನಿರ್ಲಕ್ಷ್ಯ, ಹಿಂಸೆ ಮತ್ತು ಅವರಲ್ಲಿರುವ ಖಿನ್ನತೆ ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಆಗಾಗ ಜಗಳ ಆಡುವುದು ಮತ್ತು ಪೋಷಕರ ನಡುವೆ ವಾಗ್ವಾದಗಳು ನಡೆದರೆ, ಮಕ್ಕಳಲ್ಲಿ ಸಹಜವಾಗಿ ಕೋಪ ಹೆಚ್ಚಾಗುತ್ತದೆ. ವಯಸ್ಕರು ಕೋಪ ಮತ್ತು ಪರಸ್ಪರ ಹೊಡೆದಾಡಿಕೊಳ್ಳುವ ವರ್ತನೆಯನ್ನು ತೋರಿದರೆ ಮಕ್ಕಳು ಸಹ ಅದನ್ನು ಅನುಸರಿಸುತ್ತಾರೆ.
ಮಕ್ಕಳ ಮನಸ್ಸು ಹಿಂಸಾತ್ಮಕ ಚಲನಚಿತ್ರಗಳು, ವಿಡಿಯೋ ಗೇಮ್‌ಗಳು ಮತ್ತು ಸಾಮಾಜಿಕ ಜಾಲತಾಣದ ಕಂಟೆಂಟ್ಗಳಿಂದ ಹೆಚ್ಚು ಪ್ರಭಾವಿತವಾಗುತ್ತಿದೆ. ಹಿಂಸೆಯ ಮೂಲಕ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವ ಹೀರೋಗಳನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಅಲ್ಲದೆ, ಆನ್ಲೈನ್ ಗೇಮ್ಗಳಲ್ಲಿನ ಪಾತ್ರಗಳನ್ನು ನೋಡಿ ಮಕ್ಕಳು ಅನುಸರಿಸುತ್ತಾರೆ. ನಾವು ಯಾವುದಾದರೊಂದು ಸಮಸ್ಯೆಯಲ್ಲಿ ಸಿಲುಕಿದರೆ, ಹಿಂಸೆಯ ಮೂಲಕವೇ ನಾವು ಅದರಿಂದ ಸುಲಭವಾಗಿ ಹೊರಬರಬಹುದು ಎಂದು ಮಕ್ಕಳು ಭಾವಿಸುತ್ತಾರೆ.
ಮಕ್ಕಳು ಶಾಲೆಯಲ್ಲಿ ಯಾರಾದರೂ ಕೀಟಲೆ ಮಾಡಿದಾಗ ಅಥವಾ ಬೆದರಿಸಿದಾಗ ಹಿಂಸೆಯ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಬಹುದು. ಮಕ್ಕಳಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ, ಕೋಪ, ಅಸಹನೆ, ಅಸೂಯೆ ಮತ್ತು ಸಣ್ಣ ವಿಷಯಗಳಿಗೆ ಅತಿಯಾದ ಕೋಪವನ್ನು ನಿಯಂತ್ರಿಸುವುದು ಹೇಗೆ ಎಂದು ತಿಳಿದಿರುವುದಿಲ್ಲ. ತಮ್ಮ ಭಾವನಾತ್ಮಕ ನಿಯಂತ್ರಣದ ಕೊರತೆಯಿಂದಾಗಿ ಅವರ ವರ್ತನೆಯಲ್ಲಿ ಆಕ್ರೋಶ ಸಹಜವಾಗಿ ತೂರಬಹುದು. ಇಂದಿನ ಆಧುನಿಕ ಜಗತ್ತಿನಲ್ಲಿ ಪಾಲಕರು ಅನೇಕ ವಿಚಾರಗಳಲ್ಲಿ ಅದರಲ್ಲೂ ಮೊಬೈಲ್ಗಳಲ್ಲಿ ತುಂಬಾ ಬಿಜಿಯಾಗಿರುವುದು ಮತ್ತು ಮಕ್ಕಳೊಂದಿಗೆ ಆಗಾಗ ಮಾತನಾಡದೇ ಇರುವುದು ಕೂಡ ಮಕ್ಕಳ ವರ್ತನೆಯಲ್ಲಿ ತುಂಬಾ ಬದಲಾಣೆಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳ ಜೊತೆ ಪಾಲಕರ ವರ್ತನೆ ಕೂಡ ಸರಿಯಾಗಿರಬೇಕು.
ಅಂದಹಾಗೆ, ಮಕ್ಕಳ ಮೇಲಿನ ಕೋಪವನ್ನು ಸಣ್ಣ ಸಮಸ್ಯೆಯಾಗಿ ಯಾವುದೇ ಕಾರಣಕ್ಕೂ ಪಾಲಕರು ತೆಗೆದುಕೊಳ್ಳಬಾರದು. ಮನೆಯ ವಾತಾವರಣವು ಯಾವಾಗಲೂ ಶಾಂತಿಯುತವಾಗಿರಬೇಕು. ಪಾಲಕರ ಜಗಳಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹೀಗಾಗಿ ಮನೆಯಲ್ಲಿ ಜಗಳ ಮತ್ತು ವಾಗ್ವಾದಕ್ಕೆ ಅವಕಾಶವೇ ಇರಬಾರದು. ಮೊಬೈಲ್ ಅಥವಾ ಟಿವಿ ಪರದೆಯ ಸಮಯವನ್ನು ಸೀಮಿತಗೊಳಿಸಬೇಕು. ಹಿಂಸೆಯನ್ನು ತೋರಿಸುವ ವಿಷಯಗಳಿಂದ ಮಕ್ಕಳನ್ನು ಆದಷ್ಟು ದೂರವಿಡಬೇಕು. ಶಾಲೆಯಲ್ಲಿ ಸಮಾಲೋಚನೆ ಮತ್ತು ಭಾವನಾತ್ಮಕ ಮಾರ್ಗದರ್ಶನ ಕಡ್ಡಾಯವಾಗಿದೆ. ಪಾಲಕರು ಮತ್ತು ಶಿಕ್ಷಕರು ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಿಂಸೆಯ ಬದಲು ಸಹಿಷ್ಣುತೆ ಮತ್ತು ಕ್ಷಮೆಯಂತಹ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕು.
ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಒಂದು ಸಂಗತಿ ಇದೆ. ಅದೇನೆಂದರೆ, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವುದು ಮಕ್ಕಳು ಮಾಡಿದ ತಪ್ಪಿನಿಂದ ಮಾತ್ರ ಅಲ್ಲ, ಬದಲಾಗಿ ಕುಟುಂಬ, ಮಾಧ್ಯಮ ಮತ್ತು ಶಾಲಾ ವಾತಾವರಣ ಎಂಬ ಮೂರು ಅಂಶಗಳು ಕೂಡ ಇದಕ್ಕೆ ಬಲವಾದ ಅಡಿಪಾಯ ಹಾಕುತ್ತಿವೆ ಎಂಬುದನ್ನು ಗುರುತಿಸಬೇಕು. ಹೀಗಾಗಿ ಮಕ್ಕಳಿಗೆ ಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. (ಏಜೆನ್ಸೀಸ್)