ಪತಿಯನ್ನು ಉಳಿಸಿಕೊಳ್ಳಲು ಲಿವರ್​ ಭಾಗ ದಾನ ಮಾಡಿದ ಪತ್ನಿ ಸಾವು, ಗಂಡನೂ ದುರ್ಮರಣ! Transplant Surgery

Transplant Surgery
Published on

Transplant Surgery : ಗಂಡನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಮಹದಾಸೆಯಿಂದ ತನ್ನ ಲಿವರ್​ನ ಒಂದು ಭಾಗವನ್ನು ದಾನ ಮಾಡಿದ ಮಹಿಳೆ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದುಃಖಕರ ಸಂಗತಿ ಏನೆಂದರೆ ಗಂಡನು ಕೂಡ ಕೊನೆಯಿಸಿರೆಳೆದಿದ್ದಾನೆ. ಕಸಿ ಶಸ್ತ್ರಚಿಕಿತ್ಸೆ ವೇಳೆ ಈ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ವೈದ್ಯರ ಎಡವಟ್ಟೇ ಈ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ.

ಈ ಪ್ರಕರಣ ಭಾರಿ ವಿರೋಧಕ್ಕೆ ಗುರಿಯಾಗುತ್ತಿದ್ದಂತೆ ಮಹಾರಾಷ್ಟ್ರದ ಆರೋಗ್ಯ ಇಲಾಖೆ, ಶಸ್ತ್ರಚಿಕಿತ್ಸೆ ನಡೆಸಿದ ಪುಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ನೋಟಿಸ್​ ಕಳುಹಿಸಿದೆ. ಅಂಗಾಂಗ ಕಸಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸೋಮವಾರದ ಒಳಗೆ ಸಲ್ಲಿಸುವಂತೆ ಪುಣೆಯ ಸಹ್ಯಾದ್ರಿ ಆಸ್ಪತ್ರೆಗೆ ನಿರ್ದೇಶಿಸಲಾಗಿದೆ ಎಂದು ಆರೋಗ್ಯ ಸೇವೆಗಳ ಉಪ ನಿರ್ದೇಶಕ ಡಾ. ನಾಗನಾಥ್ ಯೆಂಪಲ್ಲೆ ಭಾನುವಾರ (ಆಗಸ್ಟ್​ 24) ತಿಳಿಸಿದ್ದಾರೆ.

ನಾವು ಸಂಬಂಧಪಟ್ಟ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದೇವೆ ಮತ್ತು ದಾನಿಯ ವಿವರಗಳು, ಅವರ ವಿಡಿಯೋ ರೆಕಾರ್ಡಿಂಗ್‌ಗಳು ಮತ್ತು ಚಿಕಿತ್ಸೆಯ ಮಾರ್ಗವನ್ನು ತಿಳಿಸುವಂತೆ ಸೂಚನೆ ನೀಡಿದ್ದೇವೆ. ಸೋಮವಾರ ಬೆಳಗ್ಗೆ 10 ಗಂಟೆಯೊಳಗೆ ಎಲ್ಲಾ ವಿವರಗಳನ್ನು ಒದಗಿಸುವಂತೆ ಆಸ್ಪತ್ರೆಗೆ ತಿಳಿಸಲಾಗಿದೆ ಎಂದು ಡಾ. ನಾಗನಾಥ್ ಹೇಳಿದರು.

ಮೃತ ರೋಗಿಯನ್ನು ಬಾಪು ಕೊಮ್ಕರ್ ಎಂದು ಗುರುತಿಸಲಾಗಿದೆ. ಲಿವರ್​ನ ಒಂದು ಭಾಗವನ್ನು ದಾನ ಮಾಡಿದ ಆತನ ಪತ್ನಿ ಕಾಮಿನಿ ಕೂಡ ಅಸುನೀಗಿದ್ದಾರೆ. ಆಗಸ್ಟ್​ 15ರಂದು ಅವರಿಬ್ಬರು ಚಿಕಿತ್ಸೆಗೆ ಒಳಗಾಗಿದ್ದರು. ಕಸಿ ಶಸ್ತ್ರಚಿಕಿತ್ಸೆಯ ಬಳಿಕ ಬಾಪು ಕೊಮ್ಕರ್ ಅವರ ಆರೋಗ್ಯ ಹದಗೆಟ್ಟಿತು ಮತ್ತು ಆಗಸ್ಟ್ 17 ರಂದು ಕೊನೆಯುಸಿರೆಳೆದರು. ಇದಾದ ನಾಲ್ಕ ದಿನಗಳ ಬಳಿಕ ಅಂದರೆ, ಆಗಸ್ಟ್​ 21 ರಂದು ಕಾಮಿನಿ ಅವರು ಸೋಂಕು ತಗುಲಿ ಚಿಕಿತ್ಸೆಯ ಸಮಯದಲ್ಲೇ ವಿಧಿವಶರಾದರು.

ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದು, ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆಗಳನ್ನು ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳ ಪ್ರಕಾರವೇ ನಡೆಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸಮರ್ಥನೆ ಮಾಡಿಕೊಂಡಿದೆ.

ನಾವು ತನಿಖೆಯಲ್ಲಿ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ವಿಷಯದ ಸಂಪೂರ್ಣ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಬೆಂಬಲವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಆಸ್ಪತ್ರೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಆರೋಗ್ಯ ಇಲಾಖೆಯಿಂದ ಬಂದಿರುವ ನೋಟಿಸ್ ಅನ್ನು ಸ್ವೀಕಾರ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಅಂದಹಾಗೆ, ರೋಗಿಯು (ಬಾಪು ಕೊಮ್ಕರ್) ಅನೇಕ ಆರೋಗ್ಯ ತೊಡಕುಗಳನ್ನು ಹೊಂದಿದ್ದ. ಹೇಳಬೇಕೆಂದರೆ, ಆತ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಅಪಾಯ ಹೊಂದಿದ್ದ. ಇದರಲ್ಲಿ ನಮ್ಮ ತಪ್ಪು ಏನು ಇಲ್ಲ. ಸಾವಿನಿಂದಾಗಿರುವ ಭಾರಿ ನಷ್ಟದ ಸಮಯದಲ್ಲಿ ನಾವು ಕೊಮ್ಕರ್ ಕುಟುಂಬದೊಂದಿಗೆ ನಿಲ್ಲುತ್ತೇವೆ. ಅವರ ಮೇಲೆ ಆಳವಾದ ಸಹಾನುಭೂತಿಯನ್ನು ನಾವು ಹೊಂದಿದ್ದೇವೆ. ಜೀವಂತ ದಾನಿಗಳಿಂದ ಪಡೆದ ಯಕೃತ್ತಿನ ಕಸಿ ಅತ್ಯಂತ ಸಂಕೀರ್ಣವಾದ ಕಾರ್ಯವಿಧಾನಗಳಲ್ಲಿ ಒಂದಾಗಿದೆ ಮತ್ತು ಅದೇ ಸಂದರ್ಭದಲ್ಲಿ ರೋಗಿಯು ಅನೇಕ ತೊಡಕುಗಳನ್ನು ಹೊಂದಿರುವ ಹೆಚ್ಚಿನ ಅಪಾಯದ ವ್ಯಕ್ತಿಯಾಗಿದ್ದರು ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಶಸ್ತ್ರಚಿಕಿತ್ಸೆಯ ಅಪಾಯಗಳ ಬಗ್ಗೆ ಕುಟುಂಬ ಮತ್ತು ದಾನಿಗೆ ಮುಂಚಿತವಾಗಿಯೇ ಸಂಪೂರ್ಣ ಸಲಹೆ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗಳನ್ನು ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳನ್ನು ಅನುಸರಿಸಿಯೇ ನಡೆಸಲಾಯಿತು. ಆದರೆ, ದುರಾದೃಷ್ಟವಶಾತ್, ಕಸಿ ಮಾಡಿದ ನಂತರ ರೋಗಿಗೆ ಕಾರ್ಡಿಯೋಜೆನಿಕ್ ಆಘಾತ ಉಂಟಾಯಿತು ಮತ್ತು ಎಲ್ಲ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಹೇಳಿದೆ.

ಕಾಮಿನಿ ಕೋಮ್ಕರ್ ವಿಚಾರಕ್ಕೆ ಬರುವುದಾದರೆ, ಆರಂಭದಲ್ಲಿ ಅವರು ಚೆನ್ನಾಗಿ ಚೇತರಿಸಿಕೊಂಡರು. ಆದರೆ, ನಂತರದಲ್ಲಿ ಉಂಟಾದ ಸೆಪ್ಟಿಕ್ ಆಘಾತ ಮತ್ತು ಬಹು-ಅಂಗಾಂಗಗಳ ವೈಫಲ್ಯದಿಂದಾಗಿ ಮುಂದುವರಿದ ಚಿಕಿತ್ಸೆಯಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಹೇಳಿದೆ. ಅಲ್ಲದೆ, ಈ ದುರಂತದ ಸಮಯದಲ್ಲಿ ನಾವು ಅತ್ಯುನ್ನತ ಗುಣಮಟ್ಟದ ಆರೈಕೆಯನ್ನು ಒದಗಿಸಲು ಬದ್ಧರಾಗಿದ್ದೇವೆ ಮತ್ತು ದುಃಖಿತ ಕುಟುಂಬಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net