ಭಾರಿ ಮಳೆಗೆ ಸೃಷ್ಟಿಯಾಯ್ತು 2 ಕಿ.ಮೀ ಉದ್ದದ ಕುಳಿ: 2 ದೇವಸ್ಥಾನ, ಮನೆಗಳನ್ನು ನುಂಗಿದ ಮಿನಿ ಜಲಪಾತ! Heavy Rain

Heavy Rain
Published on

Heavy Rain : ಭಾರಿ ಮಳೆಯಿಂದಾಗಿ ಸರ್ವಾಲ್​ ಅಣೆಕಟ್ಟು ತುಂಬಿ ಹರಿದ ಪರಿಣಾಮ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಜಾಡವಾಟ​ ಗ್ರಾಮದಲ್ಲಿ ಸುಮಾರು 2 ಕಿ.ಮೀ ಉದ್ದದ ಬೃಹತ್​ ಕುಳಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತತ್ತರಿಸಿರುವ ಈ ಗ್ರಾಮದಲ್ಲಿ ಸಾಕಷ್ಟು ವಿನಾಶ ಸೃಷ್ಟಿಯಾಗಿದೆ. ಈ ಬೃಹತ್​ ಕುಳಿಯುವ ಬರೋಬ್ಬರಿ 2 ಕಿ.ಮೀ ಉದ್ದವಿರುವುದಲ್ಲದೆ, 100 ಅಡಿ ಅಗಲ ಮತ್ತು 55 ಅಡಿ ಆಳವಿದೆ.

ವರುಣನ ಅಬ್ಬರ ಇದೇ ರೀತಿ ಮುಂದುವರಿದರೆ ಜಾಡವಾಟ ಗ್ರಾಮದಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಅಂದಹಾಗೆ, ಈ ಬೃಹತ್​ ಕುಳಿಯು ಎಕರೆಗಟ್ಟಲೆ ಕೃಷಿ ಭೂಮಿಯ ನಡುವೆಯೇ ಇದೆ. ಸುತ್ತಮುತ್ತಲಿನ ಹೊಲಗಳಿಂದ ನೀರು ಹರಿದು ಹಳ್ಳಕ್ಕೆ ಬರುತ್ತಿದ್ದು, ಒಂದು ರೀತಿಯಲ್ಲಿ ಜಲಪಾತದಂತೆಯೇ ರೂಪುಗೊಂಡಿವೆ. ಈ ಕುಳಿಯ ಪರಿಣಾಮ ಆ ಪ್ರದೇಶದಲ್ಲಿದ್ದ ಎರಡು ಮನೆಗಳು, ಎರಡು ಅಂಗಡಿಗಳು ಮತ್ತು ಎರಡು ದೇವಾಲಯಗಳು ಕೂಡ ಕುಸಿದಿವೆ.

ಪ್ರಸ್ತುತ ಸೇನೆ ಮತ್ತು ಪರಿಹಾರ ಪಡೆಗಳು ಈ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಹತ್ತಿರದ ಮನೆಗಳಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳೀಯ ಆಡಳಿತದ ಮೂಲಕ ಸರ್ಕಾರ ಅಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಇದರ ನಡುವೆ ಹಳ್ಳದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ಮತ್ತು ಸಚಿವ ಕಿರೋಡಿ ಲಾಲ್ ಮೀನಾ, ತಕ್ಷಣ ಪ್ರವಾಹ ಪೀಡಿತ ಪ್ರದೇಶಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ ಬಳಿಕ ಯಂತ್ರಗಳ ಸಹಾಯದಿಂದ ನೀರನ್ನು ಬೇರೆಡೆಗೆ ತಿರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಷ್ಟೆಲ್ಲ ಪ್ರಯತ್ನ ಮಾಡಿದರು ಕೂಡ ಪ್ರಸ್ತುತ ಮಣ್ಣಿನ ಸವೆತವನ್ನು ತಡೆಯುವುದು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನು ರಾಜಸ್ಥಾನದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿಶಾಲ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ. ಹಲವು ಗ್ರಾಮಗಳು ಸಂಪೂರ್ಣವಾಗಿ ಮುಳುಗಿ ಹೋಗಿವೆ ಮತ್ತು ಇನ್ನು ಕೆಲವು ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿವೆ.

ರಾಜಸ್ಥಾನದ ಕೋಟಾ, ಬಂಡಿ, ಸವಾಯಿ ಮಾಧೋಪುರ್ ಮತ್ತು ಝಲಾವರ್‌ನಲ್ಲಿ ಗರಿಷ್ಠ ಮಟ್ಟದಲ್ಲಿ ಪರಿಣಾಮ ಕಂಡುಬರುತ್ತಿದೆ. ಕೋಟಾದ ಹರಿಜಿಯವರ ನಿಮೋದ ಗ್ರಾಮ ಸೇರಿದಂತೆ ಡಿಗೋಡು ಉಪವಿಭಾಗದಲ್ಲಿ 400ಕ್ಕೂ ಮನೆಗಳು ಕುಸಿದಿವೆ. ನೂರಾರು ಜನರು ಪರಿಹಾರ ಶಿಬಿರಗಳಲ್ಲಿ ವಾಸಿಸುವಂತಾಗಿದೆ. ಸೇನೆ ಮತ್ತು ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಪರಿಹಾರ ಪಡೆಗಳು ಸ್ಥಳೀಯರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net