

Dowry Murder Case: ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ಗೃಹಿಣಿಯೊಬ್ಬಳು ಭೀಕರವಾಗಿ ಹತ್ಯೆಯಾದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಪ್ರಕರಣದ ಆರೋಪಿಗಳಾದ ಆಕೆಯ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ. ಕೇಸ್ ಬೆಳಕಿಗೆ ಬಂದಾಗಿನಿಂದ ಇಲ್ಲಿಯವರೆಗೆ ಏನೆಲ್ಲ ಆಗಿದೆ? ಎಂಬುದರ ಸಂಪೂರ್ಣ ಅಪ್ಡೇಟ್ ಹೀಗಿದೆ ನೋಡಿ.
ಹಣದ ದಾಹಕ್ಕೆ ಗಂಡ ಮತ್ತು ಆತನ ಹೆತ್ತವರು ಸೇರಿ ಪತ್ನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್ ನೋಯ್ಡಾದ ಫೋರ್ಟೀಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿತು. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷಿಸಿದ ಫೋರ್ಟೀಸ್ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಂತೆಯೇ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಮದುವೆ ಸಮಯದಲ್ಲಿ ಭಾರೀ ವರದಕ್ಷಿಣೆ ನೀಡಲಾಗಿತ್ತು. ಆದರೆ, ಇಷ್ಟಕ್ಕೆ ಗಂಡನ ಮನೆಯವರ ಹಣದಾಹ ತಣಿಸಲಿಲ್ಲ. ಮತ್ತೆ 36 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ವಿಪಿನ್ (ಮೃತ ಯುವತಿಯ ಗಂಡ) ಮತ್ತು ಆತನ ಕುಟುಂಬ ನಿಕ್ಕಿಯನ್ನು ಒತ್ತಾಯಿಸಿದರು. ಅಷ್ಟೊಂದು ಹಣವನ್ನು ತೆಗೆದುಕೊಂಡು ಬರಲು ಸಾಧ್ಯವಾಗದಿದ್ದಾಗ, ಮನಬಂದತೆ ಥಳಿಸಿದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿದ್ದಾರೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗುವೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿರುವುದು ಅನೇಕರ ಕಣ್ಣಂಚಲ್ಲಿ ನೀರು ತರಿಸಿದೆ.
ಅಂದಹಾಗೆ, ಮೃತ ನಿಕ್ಕಿ ಮತ್ತು ಆಕೆಯ ಸಹೋದರಿ ಕಾಂಚನ್, 2016, ಡಿಸೆಂಬರ್ 10ರಂದು ಸಹೋದರರಾದ ವಿಪಿನ್ ಮತ್ತು ರೋಹಿತ್ ಅವರನ್ನು ವಿವಾಹವಾದರು. ಮದುವೆಯ ಸಮಯದಲ್ಲಿ ವರರಿಗೆ ಟಾಪ್ ಮಾಡೆಲ್ ಸ್ಕಾರ್ಪಿಯೋ ಎಸ್‌ಯುವಿ, ಬುಲೆಟ್ (ರಾಯಲ್ ಎನ್‌ಫೀಲ್ಡ್) ಬೈಕ್, ನಗದು, ಚಿನ್ನ, ಎಲ್ಲವನ್ನೂ ವರದಕ್ಷಿಣೆಯಾಗಿಯೇ ನೀಡಲಾಗಿತ್ತು. ಇದಲ್ಲದೆ, ಕರ್ವಾ ಚೌತ್‌ನಲ್ಲಿ ನಮ್ಮ ಮನೆಯಿಂದ ಉಡುಗೊರೆಗಳನ್ನು ಕಳುಹಿಸಲಾಗುತ್ತಿತ್ತು ಎಂದು ನಿಕ್ಕಿ ಸಹೋದರಿ ಕಾಂಚನ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ಬಂಧಿತನಾದ ಆರೋಪಿ ವಿಪಿನ್, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಯಿತು. ಗುಂಡೇಟಿನ ನೋವಿನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿಪಿನ್ಗೆ ಪೊಲೀಸರು ಸರಣಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಆರೋಪಿ, “ಈ ಕೃತ್ಯದಲ್ಲಿ ನನಗೆ ಯಾವುದೇ ಪಶ್ಚಾತಾಪವಿಲ್ಲ. ನಾನು ಆಕೆಗೆ ಬೆಂಕಿ ಹಚ್ಚಲಿಲ್ಲ. ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದು. ಗಂಡ-ಹೆಂಡತಿ ಮಧ್ಯೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತದೆ. ಇದು ತೀರ ಸಾಮಾನ್ಯ. ನಾನವಳನ್ನು ಕೊಂದಿಲ್ಲ” ಎಂದು ಹೇಳಿರುವುದಾಗಿ ‘ಪಿಟಿಐ’ ವರದಿ ಉಲ್ಲೇಖಿಸಿದೆ. ಪ್ರಸ್ತುತ, ವಿಪಿನ್ ತಾಯಿಯನ್ನು ಬಂಧಿಸಿರುವ ಖಾಕಿ ಪಡೆ, ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಈ ಕುರಿತು ‘ಎನ್ಡಿಟಿವಿ’ಗೆ ಪ್ರತಿಕ್ರಿಯಿಸಿರುವ ಯುವತಿಯ ತಂದೆ ಭಿಕಾರಿ ಸಿಂಗ್ ಪೈಲಾ, “ಅವರು ಕೊಲೆಗಾರರು. ಮಗಳನ್ನು ಕೊಂದ ಆಕೆಯ ಅತ್ತೆ-ಮಾವ, ಗಂಡನನ್ನು ಗುಂಡಿಕ್ಕಿ ಹತ್ಯೆಗೈಯಬೇಕು. ಅವರ ಮನೆಯನ್ನು ಛಿದ್ರಗೊಳಿಸಬೇಕು. ನನ್ನ ಪುತ್ರಿ ಬ್ಯೂಟಿ ಪಾರ್ಲರ್ ನಡೆಸುವ ಮೂಲಕ ಮಗನನ್ನು ನೋಡಿಕೊಳ್ಳುತ್ತಿದ್ದಳು. ಅಂಥವಳಿಗೆ ಈ ರೀತಿ ಚಿತ್ರಹಿಂಸೆ ನೀಡಿದ್ದಾರೆ. ಅವರ ಇಡೀ ಕುಟುಂಬವೇ ಪಿತೂರಿಯಲ್ಲಿ ಭಾಗಿಯಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ.
ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್ ನೋಯ್ಡಾದ ಫೋರ್ಟೀಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷೆ ಮಾಡಿದ ಫೋರ್ಟೀಸ್ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅದರಂತೆ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ನಿಕ್ಕಿ (28) ಎಂಬ ಯುವತಿ ಹತ್ಯೆಯಾಗಿದ್ದಾಳೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ತನ್ನ ಸಹೋದರಿ ಬೆಂಕಿಯಲ್ಲಿ ಬೇಯುತ್ತಿದ್ದರೂ ಉಳಿಸಲು ಯತ್ನಿಸದ ತಂಗಿ, ಕಿಡಿಗೇಡಿಗಳ ಕೃತ್ಯವನ್ನು ದಾಖಲೆಯಾಗಿ ತೋರಿಸಲು ವಿಡಿಯೋ ಮಾಡಿಕೊಂಡಿದ್ದಾರೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗು ಕಣ್ಣಾರೆ ಕಂಡು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ,(ಏಜೆನ್ಸೀಸ್).