ನನ್ನ ಪುತ್ರಿಗೆ ಬಂದ ಸ್ಥಿತಿಯೇ... ಎನ್​ಕೌಂಟರ್​ ಆದೇಶ ಹೊರಡಿಸುವಂತೆ ಸಿಎಂ ಯೋಗಿಗೆ ತಂದೆ ಮನವಿ | Dowry Murder Case

ವಿಜಯವಾಣಿ (1)
Published on

UP Dowry Murder Case: ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ಗೃಹಿಣಿಯೊಬ್ಬಳು ಭೀಕರವಾಗಿ ಹತ್ಯೆಯಾದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗುವೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿರುವುದು ಅನೇಕರ ಕಣ್ಣಂಚಲ್ಲಿ ನೀರು ತರಿಸಿದೆ.

36 ಲಕ್ಷ ರೂ. ವರದಕ್ಷಿಣೆ

ಮೃತ ಯುವತಿಯನ್ನು ನಿಕ್ಕಿ ಭಾಟಿಯ (28) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಕಣ್ಣೀರಿಟ್ಟಿರುವ ತಂದೆ, ನನ್ನ ಪುತ್ರಿಗೆ ಬಂದ ಸ್ಥಿತಿಯೇ ಅವರಿಗೂ ಬರಬೇಕು. ಈ ಭೀಕರ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದು, ಅವರ ಮನೆಗೂ ಬೆಂಕಿಯಿಟ್ಟು ಧ್ವಂಸಗೊಳಿಸಬೇಕೆಂದು ಅಳಲು ತೋಡಿಕೊಂಡಿದ್ದಾರೆ.

ಕಣ್ಣಾರೆ ಕಂಡ ಪುತ್ರ

ಈ ಭೀಕರ ಘಟನೆಯ ಬಗ್ಗೆ ಮೃತ ನಿಕ್ಕಿಯ ಪುತ್ರ ಮಾತನಾಡಿದ್ದು, ನನ್ನ ತಂದೆ ಮತ್ತು ಅಜ್ಜಿ ನನ್ನ ತಾಯಿಗೆ ಕಪಾಳಮೋಕ್ಷ ಮಾಡಿ, ಆಕೆಯ ಮೇಲೆ ಒಂದು ವಸ್ತುವನ್ನು ಸುರಿದು, ಲೈಟರ್​ನಿಂದ ಬೆಂಕಿ ಹಚ್ಚಿದರು ಎಂದು ಹೇಳಿದ್ದಾನೆ. ಈ ವೇಳೆ ಮಾಧ್ಯಮದ ಯಾರೋ ಒಬ್ಬರು ನಿನ್ನ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದಾರಾ ಎಂದು ಕೇಳಿದಾಗ ಆ ಪುಟ್ಟ ಮಗು ತಲೆಯಾಡಿಸಿತು. ಅಂದಹಾಗೆ, ಈ ಭಯಾನಕ ಘಟನೆಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮಗಳನ್ನು ನೆನೆದು ಕಣ್ಣೀರು

ಈ ಕುರಿತು 'ಎನ್​ಡಿಟಿವಿ'ಗೆ ಪ್ರತಿಕ್ರಿಯಿಸಿರುವ ಯುವತಿಯ ತಂದೆ ಭಿಕಾರಿ ಸಿಂಗ್ ಪೈಲಾ, "ಅವರು ಕೊಲೆಗಾರರು. ಮಗಳನ್ನು ಕೊಂದ ಆಕೆಯ ಅತ್ತೆ-ಮಾವ, ಗಂಡನನ್ನು ಗುಂಡಿಕ್ಕಿ ಹತ್ಯೆಗೈಯಬೇಕು. ಅವರ ಮನೆಯನ್ನು ಛಿದ್ರಗೊಳಿಸಬೇಕು. ನನ್ನ ಪುತ್ರಿ ಬ್ಯೂಟಿ ಪಾರ್ಲರ್ ನಡೆಸುವ ಮೂಲಕ ಮಗನನ್ನು ನೋಡಿಕೊಳ್ಳುತ್ತಿದ್ದಳು. ಅಂಥವಳಿಗೆ ಈ ರೀತಿ ಚಿತ್ರಹಿಂಸೆ ನೀಡಿದ್ದಾರೆ. ಅವರ ಇಡೀ ಕುಟುಂಬವೇ ಪಿತೂರಿಯಲ್ಲಿ ಭಾಗಿಯಾಗಿದೆ" ಎಂದು ಕಣ್ಣೀರಿಟ್ಟಿದ್ದಾರೆ.

ಯುಪಿ ಸಿಎಂಗೆ ಮನವಿ!​

"ಜೇಬುಗಳ್ಳರ ಕಾಲಿಗೆ ಗುಂಡು ಹಾರಿಸುತ್ತಾರೆ. ಆದರೆ, ಇಂಥವರಿಗೆ ಯಾಕಿಲ್ಲ? ಈ ಕೊಲೆಗಾರರನ್ನು ಎನ್​ಕೌಂಟರ್​ ಮಾಡುವುದಿಲ್ಲವೇ? ಇದು ಬಿಜೆಪಿ ಸರ್ಕಾರ. ವಿಪಿನ್ (ನಿಕ್ಕಿಯ ಪತಿ) ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಈ ದಾರಿಯಿಂದ ನನ್ನ ಮಗಳನ್ನು ದೂರವಿಡಲು ಬಯಸಿದ್ದ. ಆದರೆ, ಅದು ಸಾಧ್ಯವಾಗಲಿಲ್ಲ. ನನ್ನ ಪುತ್ರಿಗೆ ಬಂದ ಸ್ಥಿತಿಯೇ ಅವರಿಗೂ ಬರಬೇಕು. ಈ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ನಿಕ್ಕಿ ತಂದೆ ಯುಪಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

2016ರಲ್ಲಿ ಮದುವೆ

ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್​ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್​ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್​ ನೋಯ್ಡಾದ ಫೋರ್ಟೀಸ್​ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷೆ ಮಾಡಿದ ಫೋರ್ಟೀಸ್​ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅದರಂತೆ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net