

ಬೆಂಗಳೂರು: ಪಾರ್ಶ್ವವಾಯು ಮತ್ತು ಹೃದಯಾ ಘಾತಕ್ಕೆ ಒಳಗಾದವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಿರುವ ದುಬಾರಿ ಬೆಲೆಯ ಚುಚ್ಚುಮದ್ದುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯಲಿವೆ. ಪಾರ್ಶ್ವವಾಯುವಿನಿಂದ ಅಂಗಾಂಗ ವೈಫಲ್ಯ ಹಾಗೂ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಅದೇ ರೀತಿ, ಹೃದಯಾಘಾತಕ್ಕೆ ಒಳಗಾದವರಿಗೆ 90 ನಿಮಿಷದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಸಾವಿನ ಸಂಭವ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ನಿರ್ವಹಣೆಗೆ ಅಗತ್ಯವಿರುವ 60 ಸಾವಿರ ರೂ. ದರದ ಆರ್ಟಿ ಪ್ಲಸ್ ಚುಚ್ಚುಮದ್ದು, ಹೃದಯಾಘಾತ ನಿರ್ವಹಣೆಗೆ 40 ಸಾವಿರ ರೂ. ಬೆಲೆಯ ಟೆನೆಕ್ಟ್ ಪ್ಲಸ್ ಚುಚ್ಚುಮದ್ದುಗಳು ತಾಲ್ಲೂಕು ಆಸ್ಪತ್ರೆಗಳಿಗೆ ಶೀಘ್ರವೇ ಪೂರೈಕೆಯಾಗಲಿವೆ.
ಈವರೆಗೂ ಈ ಚುಚ್ಚುಮದ್ದುಗಳು ಸರ್ಕಾರಿ ವ್ಯವಸ್ಥೆಯಡಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಜಯದೇವ ಹೃದ್ರೋಗ ಸಂಸ್ಥೆ ಹೊರತುಪಡಿಸಿ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರಲಿಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ಈ ಚುಚ್ಚುಮದ್ದುಗಳಿಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಿತ್ತು.
ಪಾರ್ಶ್ವವಾಯು, ಹೃದಯಾಘಾತವಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಸಿಕ್ಕರೆ ವ್ಯಕ್ತಿ ಗುಣಮುಖವಾಗಲು ಸಾಧ್ಯ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗದಿತ ಚುಚ್ಚುಮದ್ದುಗಳನ್ನು ಉಚಿತವಾಗಿ ಒದಗಿಸಲು ಕ್ರಮ ವಹಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. | ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
3.80 ಕೋಟಿ ರೂ. ಅನುಮೋದನೆ: ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಈ ಚುಚ್ಚುಮದ್ದುಗಳನ್ನು ಒದಗಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸ್ಟೆಮಿ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಯೋಜನೆಯಡಿ ಪಾರ್ಶ್ವವಾಯು ಹಾಗೂ ಹೃದಯ ಚಿಕಿತ್ಸೆಗೆ ಆದ್ಯತೆ ನೀಡಲಾಗಿದ್ದು, ಮೊದಲ ಹಂತದಲ್ಲಿ 3.80 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದೆ.
ಎಲ್ಲರಿಗೂ ಉಚಿತ: ಚುಚ್ಚುಮದ್ದು ಅಗತ್ಯ ಇರುವ ಎಲ್ಲರಿಗೂ ಸ್ಟೆಮಿ ಯೋಜನೆಯಡಿ ಬಿಪಿಎಲ್ -ಎಪಿಎಲ್ ಎಂಬ ಭೇದವಿಲ್ಲದೆ, ಅಗತ್ಯ ಇರುವ ಎಲ್ಲರಿಗೂ ಉಚಿತವಾಗಿ ಇಲಾಖೆ ಒದಗಿಸಲಿದೆ. ಈಗಾಗಲೇ ಇಲಾಖೆಯು ಚುಚ್ಚುಮದ್ದು ಖರೀದಿ ಪ್ರಕ್ರಿಯೆ ಆರಂಭಿಸಿದೆ. ಪಾರ್ಶ್ವವಾಯುವಿಗೆ ಒಳಗಾದವರಿಗೆ ಎಂಆರ್ಐ ಅಥವಾ ಸಿಟಿ ಸ್ಕಾ್ಯನ್ ನಡೆಸಿ, ರಕ್ತನಾಳ ಬ್ಲಾಕ್ ಆಗಿರುವುದು ದೃಢಪಟ್ಟಲ್ಲಿ ಈ ಚುಚ್ಚುಮದ್ದನ್ನು ನೀಡಲಾಗುತ್ತದೆ. ಹೃದಯಾಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ, ಚುಚ್ಚುಮದ್ದನ್ನು ಒದಗಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.