ಗಲ್ವಾನ್​ ಯೋಧರ ಹೆಸರಿನಲ್ಲಿ ಮುಂಬೈ ವಾಣಿಜ್ಯೋದ್ಯಮಿಗೆ ಟೋಪಿ

fraud
Published on

ಮುಂಬೈ: ಗಲ್ವಾನ್​ ಕಣಿವೆಯಲ್ಲಿ ಕರ್ತವ್ಯನಿರತರಾಗಿರುವ ಭಾರತೀಯ ಸೇನಾಪಡೆ ಯೋಧರ ಹೆಸರಿನಲ್ಲಿ ವ್ಯಕ್ತಿಯೊಬ್ಬ ಮುಂಬೈನ ವಾಣಿಜ್ಯೋದ್ಯಮಿಗೆ ವಂಚಿಸಿದ್ದಾನೆ. ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀರಸೇನಾನಿಗಳಿಗೆ 4 ಸಾವಿರ ಸೇಫ್ಟಿ ಗಾಗಲ್ಸ್​ ಅನ್ನು ಪೂರೈಸಬೇಕಿದೆ. ಇದನ್ನು ವ್ಯವಸ್ಥೆ ಮಾಡುವಂತೆ ಹೇಳಿ ಆತ ನಂಬಿಸಿ, ಕತ್ತು ಕೊಯ್ದಿದ್ದಾನೆ ಎನ್ನಲಾಗಿದೆ.

ಮುಂಬೈನಲ್ಲಿ ಕನ್ನಡಕದ ಅಂಗಡಿ ಹೊಂದಿರುವ ವಾಣಿಜ್ಯೋದ್ಯಮಿ ಇ-ಕಾಮರ್ಸ್​ ವೆಬ್​ಸೈಟ್​ ಅನ್ನೂ ಹೊಂದಿದ್ದಾರೆ. ಈ ವೆಬ್​ಸೈಟ್​ ಮೂಲಕ ವಾಣಿಜ್ಯೋದ್ಯಮಿಯನ್ನು ಸಂಪರ್ಕಿಸಿ ಸೈಬರ್​ ಕಳ್ಳ, ತನ್ನನ್ನು ತಾನು ಭಾರತೀಯ ಸೇನಾಪಡೆಯ ಅಧಿಕಾರಿ ಆನಂದ್​ ಸಿಂಗ್​ ಎಂದು ಪರಿಚಯಿಸಿಕೊಂಡಿದ್ದ.

ಗಲ್ವಾನ್​ನಲ್ಲಿ ಚೀನಿಯರ ಉಪಟಳ ಮೇರೆ ಮೀರಿದೆ. ಆದ್ದರಿಂದ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ವಿತರಿಸಲು 4 ಸಾವಿರ ಸೇಫ್ಟಿ ಗಾಗಲ್ಸ್​ ಬೇಕಾಗಿದೆ ಎಂದು ನಂಬಿಸಿದ್ದ. ಒಮ್ಮೆಲೆ ಅಷ್ಟು ದೊಡ್ಡ ಆರ್ಡರ್​ ಸಿಗುತ್ತೆ ಎಂಬ ಖುಷಿಯಲ್ಲಿ ಹಾಗೂ ಭಾರತೀಯ ಸೇನಾಪಡೆಗೆ ನೆರವಾದ ಹೆಮ್ಮೆ ಲಭಿಸುತ್ತದೆ ಎಂಬ ಕಾರಣಕ್ಕೆ 55 ರೂಪಾಯಿಗೆ ಒಂದರಂತೆ ಸೇಫ್ಟಿ ಗಾಗಲ್ಸ್​ ಅನ್ನು ಮಾರಾಟ ಮಾಡಲು ವಾಣಿಜ್ಯೋದ್ಯಮಿ ಒಪ್ಪಿಕೊಂಡಿದ್ದರು.

ಒಪ್ಪಂದದಂತೆ 4 ಸಾವಿರ ಸೇಫ್ಟಿಗಾಗಲ್ಸ್​ನ ದಾಸ್ತಾನನ್ನು ಸಿದ್ಧಪಡಿಸಿಕೊಂಡು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ವಿದೇಶ ಭವನದ ಬಳಿ ದುಷ್ಕರ್ಮಿಗೆ ಹಸ್ತಾಂತರಿಸಿದ್ದರು.

ಮರುದಿನ ಹಣಕ್ಕಾಗಿ ಫೋನ್​ ಮಾಡಿದಾಗ ತಾನು ಕ್ಯುಆರ್​ ಕೋಡ್​ ಅನ್ನು ಕಳುಹಿಸಿದ್ದು, ಅದನ್ನು ಸ್ಕ್ಯಾನ್​ ಮಾಡಿ, ಬ್ಯಾಂಕ್​ ಖಾತೆಯ ವಿವರಗಳನ್ನು ದಾಖಲಿಸಿದಾಗ ಹಣ ಸಿಗುತ್ತದೆ ಎಂದು ನಂಬಿಸಿದ್ದ. ಅದರಂತೆ ಕ್ಯುಆರ್​ ಕೋಡ್​ ಅನ್ನು ಸ್ಕ್ಯಾನ್​ ಮಾಡಿದಾಗ, ವಾಣಿಜ್ಯೋದ್ಯಮಿಯ ಖಾತೆಗೆ ಹಣ ಜಮೆಯಾಗುವ ಬದಲು 60 ಸಾವಿರ ರೂಪಾಯಿ ಡಿಡಕ್ಟ್​ ಆಗಿತ್ತು.

ಬಳಿಕ ಮತ್ತೊಮ್ಮೆ ಆತನನ್ನು ಸಂಪರ್ಕಿಸಿದಾಗ, ಭಾರತೀಯ ಸೇನಾಪಡೆಗೆ ವಸ್ತುಗಳನ್ನು ವಿತರಿಸಲು ನೋಂದಣಿ ಪಡೆದುಕೊಳ್ಳಬೇಕಾದರೆ, ಇನ್ನೂ 40 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ನಂಬಿಸಿ ಮತ್ತೆ ಕ್ಯುಆರ್​ ಕೋಡ್​ ಮೂಲಕ 40 ಸಾವಿರ ರೂಪಾಯಿ ಪಡೆದುಕೊಂಡು ಒಟ್ಟು 1 ಲಕ್ಷ ರೂಪಾಯಿಗೆ ವಂಚಿಸಿದ್ದಾನೆ.

ಇದಾದ ನಂತರದಲ್ಲೂ ಹಣ ಸಿಗುವ ಆಸೆಯೊಂದಿಗೆ ವಂಚಕನನ್ನು ನೇರವಾಗಿ ಭೇಟಿಯಾಗಲು ವ್ಯಕ್ತಿ ಪ್ರಯತ್ನಿಸಿದ್ದಾನೆ. ಆದರೆ, ವಂಚಕ ಸಿಗಲು ನಿರಾಕರಿಸಿದಾಗ ವಾಣಿಜ್ಯೋದ್ಯಮಿ ಐಟಿ ಕಾಯ್ದೆಯಡಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net