ಸುವರ್ಣ ಕರ್ನಾಟಕಕ್ಕೆ ಸಿದ್ಧವಾಗಿದೆ ಚೌಕಟ್ಟು: ಕನ್ನಡ ನಿಧಿ ಸರ್ಕಾರದ ಚಿಂತನೆ ಸಿಎಸ್​ಆರ್ ನಿಧಿ ಸಂಗ್ರಹಿಸಿ ಗಡಿ ಶಾಲೆಗಳ ಅಭಿವೃದ್ಧಿ

Kannada
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ವಿಶಾಲ ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ ಐವತ್ತು ವರ್ಷ ತುಂಬಿರುವ ಹಿನ್ನೆಲೆ ಸುವರ್ಣ ಕರ್ನಾಟಕ ಆಚರಣೆಗೆ ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಇಡೀ ವರ್ಷ ಕನ್ನಡಪರ ವಾತಾವರಣ ನಿರ್ವಣದ ಜತೆ ಜತೆಗೆ ಕನ್ನಡ ನಿಧಿ ಸ್ಥಾಪನೆ ಸೇರಿದಂತೆ ಶಾಶ್ವತವಾದ ಒಂದಷ್ಟು ಕೆಲಸಗಳನ್ನು ಮಾಡಲು ಸರ್ಕಾರ ಮುಂದಾಗಿದೆ.

ಮೈಸೂರು ರಾಜ್ಯಕ್ಕೆ 1973 ನವೆಂಬರ್ 1 ರಂದು ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಕಳೆದ ವರ್ಷ ನವೆಂಬರ್​ನಲ್ಲಿಯೇ ಸುವರ್ಣ ಮಹೋತ್ಸವ ವರ್ಷ ಆರಂಭವಾಗಿ ಈ ನವೆಂಬರ್ 1ಕ್ಕೆ ಮುಕ್ತಾಯವಾಗಬೇಕಾಗಿತ್ತು. ಆದರೆ, ಒಂದು ವರ್ಷ ತಡವಾಗಿ ಕಾರ್ಯಕ್ರಮ ಆರಂಭವಾಗುತ್ತಿದೆ. ಅದಕ್ಕೆ ಅಗತ್ಯ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯನ್ನು ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ಕೂಡಲೇ ಕಾರ್ಯಕ್ರಮಗಳು ಆರಂಭವಾಗಲಿವೆ.

ಕ್ರಿಯಾ ಯೋಜನೆಯಲ್ಲಿ ಏನಿದೆ?: ಕರ್ನಾಟಕವೆಂದು ನಾಮಕರಣ ಮಾಡಿದ ರೂವಾರಿ ದಿ. ಡಿ.ದೇವರಾಜ ಅರಸು ಪ್ರತಿಮೆ ಮೈಸೂರಿನಲ್ಲಿ, 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ಬೆಂಗಳೂರಿನಲ್ಲಿ ಸ್ಥಾಪಿಸುವುದು.

50 ಸಾಧಕಿಯರ ಕುರಿತು ಪುಸ್ತಕಗಳ ರಚನೆ, ಕನ್ನಡ ತಂತ್ರಾಂಶಗಳ ಅಭಿವೃದ್ಧಿ, ಇರುವ ತಂತ್ರಾಂಶಗಳಲ್ಲಿ ಬದಲಾವಣೆ, ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಲ್ಮಡಿ ಶಾಸನದ ಮಾದರಿಯ ರಚನೆ, ಕಾಪೋರೇಟ್ ಕಂಪನಿಗಳ ಸಿಎಸ್​ಆರ್ ನೆರವಿನಲ್ಲಿ ಕನ್ನಡ ನಿಧಿ ಸ್ಥಾಪಿಸಿ ಅದರ ಮೂಲಕ ಗಡಿ ಭಾಗದ ಶಾಲೆಗಳ ಅಭಿವೃದ್ದಿಪಡಿಸುವುದು.

ಸ್ಮಾರಕಗಳ ನಿರ್ಮಾಣ, ಏಕೀಕರಣದಿಂದ ಇಲ್ಲಿಯವರೆಗಿನ ಬೆಳವಣಿಗೆ ದಾಖಲಿಸುವ ಸ್ಮರಣ ಸಂಚಿಕೆ, ಸುವರ್ಣ ಕರ್ನಾಟಕದ ನೆನಪಲ್ಲಿ 50 ರೂ. ಮುಖಬೆಲೆಯ ನಾಣ್ಯ, ಅಂಚೆ ಚೀಟಿಗಾಗಿ ಕೇಂದ್ರಕ್ಕೆ ಮನವಿ, ಸಾಕ್ಷ್ಯಚಿತ್ರ ನಿರ್ಮಾಣ ಸೇರಿವೆ.

ಕನ್ನಡದ ವಾತಾವರಣ: ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಇಡೀ ವರ್ಷ ಕಾರ್ಯಕ್ರಮ ನಡೆಯಲಿದೆ. ಯುವ ಜನರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸುವ ಮೂಲಕ ಇತಿಹಾಸ, ಕಲೆ, ಸಂಸ್ಕೃತಿ, ಸಾಹಿತ್ಯದ ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತದೆ. ಶಾಲೆಗಳಲ್ಲಿ ‘ನನ್ನ ಭಾಷೆ ನಮ್ಮ ನಾಡು’ ಎಂಬ ಹೆಸರಿನಲ್ಲಿ ರಸಪ್ರಶ್ನೆ, ಚರ್ಚಾ, ಪ್ರಬಂಧ ಸ್ಪರ್ಧೆ, ಗ್ರಾಮ ಪಂಚಾಯಿತಿಗಳನ್ನು ಬಳಸಿಕೊಂಡು ಮನೆ ಮನೆಗಳಲ್ಲಿ ದೀಪ ಬೆಳಗಿಸುವಿಕೆ, ಎಲ್ಲ ಜಿಲ್ಲೆಗಳಲ್ಲಿ ‘ಕನ್ನಡ ಜ್ಯೋತಿ’ ಒಂದು ವರ್ಷ ಪೂರ್ತಿ ಪ್ರವಾಸ ಮಾಡುವುದು, ಕನ್ನಡದ ಸ್ಮಾರಕಗಳ ಜತೆ ಸೆಲ್ಪಿ, ಅ.17ಕ್ಕೆ ಲಾಂಛನ ಬಿಡುಗಡೆ, ಧ್ಯೇಯ ಗೀತೆ, ಎಲ್ಲ ಚಿತ್ರಮಂದಿರಗಳಲ್ಲಿ ಮಯೂರ ಚಿತ್ರದ ಉಚಿತ ಪ್ರದರ್ಶನ, ಮೊಬೈಲ್ ಕಾಲರ್ ಟ್ಯೂನ್, ಎಲ್ಲ ಜಿಲ್ಲೆಗಳಲ್ಲಿ ಮ್ಯಾರಥಾನ್, ವಾಕಥಾನ್ ಹೀಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಸುವರ್ಣ ಕರ್ನಾಟಕದ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಮತಿಗಾಗಿ ಸಲ್ಲಿಸಿದ್ದೇವೆ. ಅಗತ್ಯ ಹಣಕಾಸು ಬಿಡುಗಡೆಗೆ ಸಿಎಂ ಭರವಸೆ ನೀಡಿದ್ದಾರೆ. ಅ.17ಕ್ಕೆ ಲಾಂಛನ ಬಿಡುಗಡೆ ಮಾಡಲಿದ್ದೇವೆ. | ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

  • ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನ ಮಾದರಿ
  • ಕರ್ನಾಟಕ ನಾಮಕರಣ ಕಲ್ಲಿನ ಮಾದರಿಯನ್ನು ಭುವನೇಶ್ವರಿ ಪ್ರತಿಮೆ ಜತೆ ಅಳವಡಿಕೆ
  • 50 ಸಾಧಕಿಯರ ಬಗ್ಗೆ ಪುಸ್ತಕ
  • ಕನ್ನಡ ತಂತ್ರಾಂಶಗಳ ಅಭಿವೃದ್ಧಿಗೆ ಚರ್ಚೆ
  • ಮೈಸೂರು ಪಾಕ್ ಮಾದರಿ ಕರ್ನಾಟಕ ಪಾಕ್
  • ಇದೇ ತಿಂಗಳಿನಲ್ಲಿ ವಾರ್ ರೂಂ ಸ್ಥಾಪನೆ
  • ಒಂದು ವರ್ಷ ತಡವಾಗಿ ಕಾರ್ಯಕ್ರಮ

ಮೂರು ಸ್ಮಾರಕ: ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಧಾರವಾಡ ಅದರಗುಂಚಿ ಶಂಕರಗೌಡ, ಬಳ್ಳಾರಿಯ ರಂಜಾನ್ ಸಾಬ್ ಹಾಗೂ ಗದಗದ ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿ ಸ್ಥಳಗಳನ್ನು ಸ್ಮಾರಕಗಳಾಗಿ ಅಭಿವೃದ್ದಿ ಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಮುಂದಿನ ವರ್ಷ ನವೆಂಬರ್​ಗೆ ಸ್ಮಾರಕಗಳ ಉದ್ಘಾಟನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ನಾಪತ್ತೆಯಾದ ನಾಮಕರಣದ ಶಿಲೆ: ಕರ್ನಾಟಕವೆಂದು ನಾಮಕರಣ ಸಮಾರಂಭ ಈಗಿನ ಕಂಠೀರವ ಕ್ರೀಡಾಂಗಣದ ಆವರಣದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ನಾಮಕರಣ ಮಾಡಿದ ಶಿಲೆ ನಾಪತ್ತೆಯಾಗಿದೆ. ಅದರ ಪೋಟೋ ಇರುವುದರಿಂದ ಅದೇ ಮಾದರಿ ಮಾಡಿಸಿ ಅದನ್ನು ಭುವನೇಶ್ವರಿ ಪ್ರತಿಮೆಯ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಕಟೌಟ್​ಗಳು: ನಾಡಿನ ಸಾಂಸ್ಕೃತಿಕ ರಾಯಭಾರಿಗಳಾದ ಬಸವಣ್ಣ, ಕೆಂಪೇಗೌಡ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಕನಕದಾಸ, ಶಿಶುನಾಳ ಷರೀಫ, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಡಿವಿಜಿ, ಒನಕೆ ಓಬವ್ವ ಹೀಗೆ... ವಿವಿಧ ಮಹನೀಯರ ಕಟೌಟ್​ಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಅಳವಡಿಸಲಾಗುತ್ತದೆ.

50 ಮಹಿಳೆಯರಿಗೆ ಸನ್ಮಾನ: ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ 50 ಸಾಧಕ ಮಹಿಳೆಯರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುವುದರಲ್ಲಿ ಪುರುಷ ಮತ್ತು ಮಹಿಳೆಯರು ಇರುತ್ತಾರೆ. ಅದರ ಜತೆಗೆ ಪ್ರತ್ಯೇಕವಾಗಿ 50 ಮಹಿಳೆಯರನ್ನು ಗೌರವಿಸಲಾಗುತ್ತದೆ.

ಕರ್ನಾಟಕ ಪಾಕ್: ಮೈಸೂರು ಪಾಕ್ ಈಗ ಜಗದ್ವಿಖ್ಯಾತವಾಗಿದೆ. ಸುವರ್ಣ ಕರ್ನಾಟಕದ ಅಂಗವಾಗಿ ಕೆಎಂಎಫ್ ಮೂಲಕ ಕರ್ನಾಟಕ ಪಾಕ್ ತಯಾರಿಸುವ ಕುರಿತು ಚರ್ಚೆ ನಡೆದಿದೆ. ನಂದಿನ ತಯಾರಿಸುವ ಕರ್ನಾಟಕ ಪಾಕ್ ನವೆಂಬರ್ ಒಂದರಂದು ಬಿಡುಗಡೆಯಾಗಲಿದೆ.

ಸುವರ್ಣ ರಥದಲ್ಲಿ ಪಯಣ: ಕರ್ನಾಟಕ ನಾಮಕರಣ ಸಂದರ್ಭದಲ್ಲಿ ಸಚಿವರಾಗಿದ್ದ ಕೆ.ಎಚ್. ಪಾಟೀಲ್ ಗದಗದಿಂದ ಹಂಪಿಗೆ ಬಂದು ಅಲ್ಲಿನ ವಿರೂಪಾಕ್ಷ ದೇವಾಲಯದಿಂದ ಕನ್ನಡ ಜ್ಯೋತಿಯನ್ನು ಗದಗದ ವೀರನಾರಾಯಣ ದೇವಾಲಯಕ್ಕೆ ತೆಗೆದುಕೊಂಡು ಹೋಗಿದ್ದರು. ಆ ನೆನಪಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ್, ಶಿವರಾಜ ತಂಗಡಗಿ ಅವರು ನ.2 ರಂದು ಪ್ರವಾಸೋದ್ಯಮ ಇಲಾಖೆಯ ಸುವರ್ಣ ರಥ ರೈಲಿನಲ್ಲಿ ಹಂಪಿಗೆ ತೆರಳಿ ಅಲ್ಲಿಂದ ಕನ್ನಡ ಜ್ಯೋತಿಯನ್ನು ಗದಗದ ವೀರನಾರಾಯಣ ದೇವಾಲಯಕ್ಕೆ ತೆಗೆದುಕೊಂಡು ಹೋಗುವ ಚರ್ಚೆಯಾಗಿದೆ.

ವಾರ್ ರೂಂ: ಇಡೀ ವರ್ಷದ ಕಾರ್ಯಕ್ರಮಗಳಲ್ಲಿ ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ವಾರ್ ರೂಂ ಸ್ಥಾಪಿಸಲಾಗುತ್ತಿದೆ. ಅಕ್ಟೋಬರ್ ಮೂರನೇ ವಾರದ ಆರಂಭದ ವೇಳೆಗೆ ವಾರ್ ರೂಂ ಸಿದ್ಧವಾಗಿರುತ್ತದೆ.

ಏನೇನು ದಾಖಲು?: ಕರ್ನಾಟಕ ನಾಮಕರಣವಾದ ನಂತರ ಯಾವ ಯಾವ ದಶಕದಲ್ಲಿ ಏನೇನು ಪ್ರಗತಿಯಾಗಿದೆ ಎಂಬುದನ್ನು ದಾಖಲಿಸಲಾಗುತ್ತದೆ. 70ರ ದಶಕವನ್ನು ಸಾಮಾಜಿಕ ನ್ಯಾಯ, 80ರ ದಶಕ ಪ್ರಗತಿಪರ ವಿಚಾರಧಾರೆ, ಮಾಹಿತಿ ತಂತ್ರಜ್ಞಾನಕ್ಕೆ ಮುನ್ನುಡಿ, 90 ರ ದಶಕ ಆರ್ಥಿಕ ಉದಾರೀಕರಣದ ಪ್ರಗತಿ, 21 ನೇ ಶತಮಾನ ವಿಶ್ವದ ನಕ್ಷೆಯಲ್ಲಿ ಬೆಂಗಳೂರು ಹೀಗೆ ವಿವಿಧ ಹಂತಗಳನ್ನು ಸ್ಮರಣ ಸಂಚಿಕೆಯಲ್ಲಿ ದಾಖಲಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net