ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 6.7%: ಇಂಡಿಯಾ ರೇಟಿಂಗ್ಸ್ ಅಂದಾಜು

gdp
Published on

ನವದೆಹಲಿ: ದೇಶದ ಜಿಡಿಪಿ ಬೆಳವಣಿಗೆ ದರವು ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ 2024) ಶೇ. 6.7 ಮತ್ತು 2023-24ರ ಹಣಕಾಸು ವರ್ಷದಲ್ಲಿ ಅಂದಾಜು ಶೇ. 6.9- 7 ಆಗಲಿದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ಅಂದಾಜಿಸಿದೆ.

ಇಂಡಿಯಾ ರೇಟಿಂಗ್ಸ್​ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನೀಲ್​ ಕುಮಾರ್ ಸಿನ್ಹಾ ಈ ಕುರಿತು ವಿವರಗಳನ್ನು ನೀಡಿದ್ದಾರೆ. ನಿರ್ಮಾಣ ಮತ್ತು ವಿದ್ಯುಚ್ಛಕ್ತಿ ನೇತೃತ್ವದ ಸೇವಾ ವಲಯವು ಬೆಳವಣಿಗೆಯ ವೇಗವನ್ನು ಮುಂದುವರಿಸಿದೆ, ಆದರೆ, ಗಣಿಗಾರಿಕೆ ಮತ್ತು ಕೈಗಾರಿಕಾ ಉತ್ಪಾದನೆಯು ಹಿಂದುಳಿದಿದೆ ಎಂದು ಅವರು ಹೇಳಿದರು.

ನಾಲ್ಕನೇ ತ್ರೈಮಾಸಿಕ (ಜನವರಿ-ಮಾರ್ಚ್ 2024) ಮತ್ತು 2023-24 ಹಣಕಾಸು ವರ್ಷದ ತಾತ್ಕಾಲಿಕ ಜಿಡಿಪಿ ಅಂದಾಜುಗಳನ್ನು ಸರ್ಕಾರವು ಮೇ 31ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. ಭಾರತದ ಆರ್ಥಿಕತೆಯು ಜೂನ್ ತ್ರೈಮಾಸಿಕದಲ್ಲಿ ಶೇಕಡಾ 8.2, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.1 ಮತ್ತು 2023-24ರ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.4 ಬೆಳವಣಿಗೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್‌ನಲ್ಲಿ ತನ್ನ ವಿತ್ತೀಯ ನೀತಿ ಪರಾಮರ್ಶೆಯಲ್ಲಿ, 2023-24ರ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಎಂದು ಅಂದಾಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net