10 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ಅಕ್ರಮ ಮದ್ಯದ ಬಾಟಲಿಗಳು ವಶ!; 4 ಆರೋಪಿಗಳ ಬಂಧನ

Untitled design - 2023-09-17T164649.434
Published on

ಹಿಮಾಚಲ ಪ್ರದೇಶ: ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ 10 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಮತ್ತು ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ವರದಿಯಾಗಿದೆ.

ಶುಕ್ರವಾರ (ಸೆ.15) ಸುಳಿವಿನ ಮೇರೆಗೆ ಉನಾ ಪೊಲೀಸರು ಮತ್ತು ಕಾಂಗ್ರಾ ಜಿಲ್ಲೆಯ ಆಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ (ANTF) ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ವಾಹನದಿಂದ 28,500ಕ್ಕೂ ಹೆಚ್ಚು ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಂಡಿದೆ.

ಈ ಕ್ಯಾಪ್ಸೂಲ್‌ಗಳ ಮಾರುಕಟ್ಟೆ ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಉನಾದ ಪೊಲೀಸ್ ವರಿಷ್ಠಾಧಿಕಾರಿಯಾದ ಅರ್ಜಿತ್ ಸೇನ್ ಠಾಕೂರ್ ಮಾಹಿತಿ ನೀಡಿದ್ದು, ಗಾಗ್ರೆಟ್‌ನ ಮನ್ ಸಿಂಗ್ (48) ಮತ್ತು ಕಾಂಗ್ರಾ ಜಿಲ್ಲೆಯ ಮಹಾಸು ರಾಮ್ (47) ಬಂಧಿತರು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿದ ಅಧಿಕಾರಿಗಳು, ವಿಚಾರಣೆಯ ಸಮಯದಲ್ಲಿ ಇಬ್ಬರೂ ಆರೋಪಿಗಳು ಭೂಪೇಂದ್ರ ದತ್ತ (44) ಮತ್ತು ವೀರೇಂದ್ರ ಎಂಬ ಮತ್ತಿಬ್ಬರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದರು.

ಶನಿವಾರ (ಸೆ.16) ರಾತ್ರಿ ವೀರೇಂದ್ರ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ ಪೊಲೀಸರು, ವಿವಿಧ ಮದ್ಯದ ಬ್ರಾಂಡ್‌ಗಳ 210 ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ವೀರೇಂದ್ರನ ವಿರುದ್ಧ ಐಪಿಸಿ ಮತ್ತು ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಂಬತ್ತು ಪ್ರಕರಣಗಳಿವೆ. ಈ ಹಿಂದೆ ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಆತನ ವಿರುದ್ಧ ಹಲವು ಕೇಸ್​ಗಳ ದಾಖಲಾಗಿದ್ದವು ಎಂದು ಅಧಿಕಾರಿ ಠಾಕೂರ್ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net