

ಚಿಕ್ಕಬಳ್ಳಾಪುರ: ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಬಿದ್ದು ನಾಲ್ವರು ಯುವಕರು ಜಲಸಮಾಧಿಯಾಗಿರುವ ದುರಂತ ಘಟನೆ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ (ಡಿ. 09) ರಾತ್ರಿ ನಡೆದಿದೆ.
ಮೃತಪಟ್ಟ ನಾಲ್ವರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಬಾಗೆಪಲ್ಲಿಗೆ ಹೊರಟಿದ್ದ ಸ್ವಿಫ್ಟ್ ಕಾರು ಹೆದ್ದಾರಿಯ ಅಮಾನಿ ಗೋಪಾಲಕೃಷ್ಣ ಕೆರೆಯ ನೀರಿನ ಗುಂಡಿಗೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಿಕ್ಕಬಳ್ಳಾಪುರ ಸಂಚಾರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಾರನ್ನು ಹೊರಕ್ಕೆ ತೆಗೆದು ಮೃತದೇಹಗಳನ್ನು ಮೇಲಕ್ಕೆ ಎತ್ತಿದ್ದಾರೆ.
ಅತಿವೇಗದಿಂದ ದುರ್ಘಟನೆ: ರಾಷ್ಟ್ರೀಯ ಹೆದ್ದಾರಿ 7ರಲ್ಲಿನ ದುರ್ಘಟನೆಗೆ ಅತಿಯಾದ ವೇಗ ಕಾರಣ ಎಂದು ಕಂಡುಬಂದಿದೆ. ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.