More

    ಚೋರ ಪೊಲೀಸನ ವಿಧೇಯ ಶಿಷ್ಯ

    ಅದು 2020ರ ಜುಲೈ ತಿಂಗಳ ಒಂದು ರಾತ್ರಿ. ವೇಳೆ ಎರಡು ಗಂಟೆ. ಚೆನ್ನೈನಿಂದ ಮುಂಬೈಗೆ ಹೋಗುವ ಸೂಪರ್​ಫಾಸ್ಟ್ ರೈಲು ಯಾದಗಿರಿ ರೈಲುನಿಲ್ದಾಣಕ್ಕೆ ಬಂದು ಎರಡು ನಿಮಿಷಗಳು ನಿಂತು ಮುಂದಕ್ಕೆ ಹೊರಟಿತು. ರೈಲು ಸ್ಟೇಷನ್ ಬಿಟ್ಟ ಕೆಲವೇ ನಿಮಿಷಗಳ ನಂತರ ಎಸ್-7 ಸ್ಲೀಪರ್ ಕೋಚ್​ನಲ್ಲಿದ್ದ ಒಬ್ಬ ಮಹಿಳೆ, ‘ಅಯ್ಯೋ ನನ್ನ ಬ್ಯಾಗ್ ಯಾರೋ ಕದ್ದರು’ ಎಂದು ಕಿರುಚತೊಡಗಿದಳು. ಅವಳ ಅರಚಾಟ ಕೇಳಿ ನಿದ್ರೆಯಲ್ಲಿದ್ದ ಸಹ ಪ್ರಯಾಣಿಕರು ಎಚ್ಚರಗೊಂಡರು. ಯಾರೋ ಚೈನ್ ಎಳೆದು ರೈಲನ್ನು ನಿಲ್ಲಿಸಿದರು. ಅಷ್ಟರಲ್ಲಿ ರೈಲು ಯಾದಗಿರಿಯಿಂದ ಹತ್ತು ಕಿ.ಮೀ. ಮುಂದಕ್ಕೆ ಚಲಿಸಿತ್ತು.

    ಚೋರ ಪೊಲೀಸನ ವಿಧೇಯ ಶಿಷ್ಯರೈಲು ನಿಂತ ಕೂಡಲೇ ಏನಾಯಿತೆಂದು ನೋಡಲು ರೈಲಿನ ಚಾಲಕ, ಗಾರ್ಡ್ ಮತ್ತು ಒಬ್ಬ ಆರ್.ಪಿ.ಎಫ್. ಕಾನ್ಸ್​ಟೇಬಲ್ ಎಸ್-7 ಕೋಚಿಗೆ ಬಂದರು. ಬ್ಯಾಗ್ ಕಳೆದುಕೊಂಡಿದ್ದ ಸೀತಾಲಕ್ಷ್ಮಿ ನಡೆದ ವಿಷಯವನ್ನು ಅವರಿಗೆ ತಿಳಿಸಿದಳು. ಅವರು ರೈಲಿನಲ್ಲಿದ್ದ ಕರ್ನಾಟಕದ ರೈಲ್ವೆ ಪೊಲೀಸ್ ಕಾನ್ಸ್​ಟೇಬಲ್​ನನ್ನು ಅಲ್ಲಿಗೆ ಕರೆಸಿದರು. ಆತನ ಮುಂದೆ ಸೀತಾಲಕ್ಷ್ಮಿ ಹೀಗೆಂದರು: ‘ನಾನು ಚೆನ್ನೈನಿಂದ ಪುಣೆಗೆ ಪ್ರಯಾಣ ಮಾಡುತ್ತಿರುವೆ. ರಾತ್ರಿ ತಲೆದಿಂಬಿನ ಕೆಳಗೆ ನನ್ನ ಹ್ಯಾಂಡ್​ಬ್ಯಾಗನ್ನು ಇಟ್ಟುಕೊಂಡು ಮಲಗಿದ್ದೆ. ಗಾಢನಿದ್ರೆ ಹತ್ತಿತ್ತು. ಯಾರೋ ಬ್ಯಾಗನ್ನು ಎಳೆದುಕೊಂಡಂತೆ ಭಾಸವಾದಾಗ ಎಚ್ಚರಗೊಂಡೆ. ಒಬ್ಬ ವ್ಯಕ್ತಿ ಬ್ಯಾಗನ್ನು ತೆಗೆದುಕೊಂಡು ಬಿರಬಿರನೆ ಬಾಗಿಲಿನಿಂದಿಳಿದು ಓಡಿಹೋದ. ಬ್ಯಾಗಿನಲ್ಲಿ 2 ತೊಲೆ ತೂಕದ ಬಂಗಾರದ ಆಭರಣಗಳು, 4 ಸಾವಿರ ರೂಪಾಯಿ ನಗದು ಇದ್ದ ಮನಿಪರ್ಸ್ ಮತ್ತು ಎರಡು ಮೊಬೈಲ್ ಫೋನ್​ಗಳಿದ್ದವು’ ಎಂದರು.

    ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪೊಲೀಸರು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ರೈಲು ಹೊರಟಾಗ ಒಬ್ಬ ವ್ಯಕ್ತಿ ಸ್ಲೀಪರ್ ಕೋಚ್​ನಿಂದ ಹ್ಯಾಂಡ್ ಬ್ಯಾಗ್ ಹಿಡಿದುಕೊಂಡು ಛಂಗನೆ ಇಳಿದ ದೃಶ್ಯ ಕಾಣಿಸಿತು. ಆದರೆ ಆಗ ಕಡಿಮೆ ಬೆಳಕಿದ್ದುದರಿಂದ ಅವನ ಮುಖ ಸರಿಯಾಗಿ ಕಾಣಲಿಲ್ಲ. ಹೀಗಾಗಿ ಅವನ ಗುರುತು ಹಿಡಿಯುವುದು ಸಾಧ್ಯವಾಗಲಿಲ್ಲ. ಆಗವರು ಸಿಸಿಟಿವಿ ಫುಟೇಜ್ ಅನ್ನು ಅಕ್ಕಪಕ್ಕದ ರೈಲ್ವೆ ಪೊಲೀಸ್ ಠಾಣೆಗಳಿಗೆ ಕಳುಹಿಸಿ ಆ ವ್ಯಕ್ತಿಯ ಗುರುತು ಹಿಡಿಯಲು ಸಹಕಾರ ಕೋರಿದರು.

    15 ದಿನಗಳ ನಂತರ ರಾಯಚೂರು ರೈಲ್ವೆ ಹೆಡ್ ಕಾನ್ಸ್​ಟೇಬಲ್ ಒಬ್ಬ ಸಿಸಿಟಿವಿ ಫುಟೇಜ್ ನೋಡಿ ಅದರಲ್ಲಿರುವ ವ್ಯಕ್ತಿ ಈ ಹಿಂದೆ ರಾಯಚೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಬಸವರಾಜ್ ಇರಬಹುದು ಎಂದ. ಆಗ ತನಿಖಾಧಿಕಾರಿ ಬಸವರಾಜನ ಮನೆಗೆ ಹೋದರು. ಆತ ಊರಲ್ಲಿಲ್ಲವೆಂದು ಅವನ ಪತ್ನಿ ತಿಳಿಸಿ ಅವನ ಮೊಬೈಲ್ ಫೋನ್ ನಂಬರ್ ಅನ್ನು ಕೊಟ್ಟಳು. ಅದರ ಲೊಕೇಷನ್ ಆಧಾರದ ಮೇಲೆ ಬಸವರಾಜನನ್ನು ಪತ್ತೆ ಮಾಡಿದ ಪೊಲೀಸರು ಅವನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ತಾನೇ ಬ್ಯಾಗ್ ಅಪಹರಿಸಿದ್ದಾಗಿ ಒಪ್ಪಿಕೊಂಡ.

    ಕಳ್ಳತನ ಮಾಡಿದ್ದ ಬ್ಯಾಗಿನಲ್ಲಿದ್ದ ಎರಡು ಚಿನ್ನದ ಸರಗಳನ್ನು ಅಡವಿಟ್ಟು, ನಗದು ನಾಲ್ಕು ಸಾವಿರ ಹಣವನ್ನು ಖರ್ಚು ಮಾಡಿದ್ದಾಗಿ ತಿಳಿಸಿದ. ಬ್ಯಾಗಿನಲ್ಲಿದ್ದ ಎರಡು ಮೊಬೈಲ್ ಫೋನುಗಳನ್ನು ತಿಪ್ಪೆಗುಂಡಿಯಲ್ಲಿ ಎಸೆದಿದ್ದಾಗಿ ತಿಳಿಸಿದ. ಅವನು ಸರಗಳನ್ನು ಅಡವಿಟ್ಟಿದ್ದ ಚಿನ್ನದ ಅಂಗಡಿಯಾತ ಸರಗಳನ್ನು ಕರಗಿಸಿದ್ದಾಗಿ ತನಿಖಾಧಿಕಾರಿಗೆ ತಿಳಿಸಿ ಚಿನ್ನವನ್ನು ಕೊಟ್ಟ.

    ಬಸವರಾಜ್ ಪೊಲೀಸರಿಗೆ ತಾನು ಫೋನ್​ಗಳನ್ನು ಎಸೆದಿದ್ದ ತಿಪ್ಪೆಗುಂಡಿಯನ್ನು ತೋರಿಸಿದ. ಪೌರಕಾರ್ವಿುಕರ ಸಹಾಯದಿಂದ ಅದನ್ನು ಹುಡುಕಿದಾಗ ಎರಡೂ ಫೋನ್​ಗಳು ಸಿಕ್ಕವು. ಅವು ಸೀತಾಲಕ್ಷ್ಮಿಯ ಫೋನ್​ಗಳೇ ಆಗಿದ್ದವು. ಮುಂದೆ ಬಸವರಾಜನನ್ನು ಪೊಲೀಸ್ ಠಾಣೆಯಲ್ಲಿ ಸುದೀರ್ಘವಾಗಿ ವಿಚಾರಿಸಿದಾಗ ಹೀಗೆ ಹೇಳಿದ:

    ‘ನಾನು 5 ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿಯೇ ಮನೆಗಳ್ಳತನ ಮತ್ತು ಬೀದಿಕಳ್ಳತನ ಮಾಡುತ್ತಿದ್ದೆ. ಬಂಗಾರ ಮತ್ತು ನಗದು ಹಣವನ್ನು ಕದಿಯುವುದಲ್ಲದೆ ಮೊಬೈಲ್ ಫೋನ್​ಗಳನ್ನೂ ಕದಿಯುತ್ತಿದ್ದೆ. ಒಂದು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ನ್ಯಾಯಾಲಯದ ವಿಚಾರ ಣೆಗೆ ಹೋದಾಗ ಅಲ್ಲಿ ನನಗೆ ಮಹದೇವ ಎಂಬ ಪೊಲೀಸ್ ಕಾನ್ಸ್​ಟೇಬಲ್ ಪರಿಚಿತನಾದ. ನಾನು ಯಾವ ಅಪರಾಧವನ್ನು ಮಾಡಿದೆ, ಹೇಗೆ ಸಿಕ್ಕಿಹಾಕಿಕೊಂಡೆ ಎಂದು ಆತ ನನ್ನನ್ನು ಪ್ರಶ್ನಿಸಿದಾಗ ಅವನಿಗೆ ನಡೆದ ವಿಷಯ ತಿಳಿಸಿದೆ. ನೀನು ಮೊಬೈಲ್ ಫೋನ್ ಕಳವು ಮಾಡಿದ ಕಾರಣಕ್ಕೇ ಸಿಕ್ಕಿಹಾಕಿಕೊಂಡೆ. ಏಕೆಂದರೆ ಅದರ ಲೊಕೇಷನ್ ಮೂಲಕ ನಮಗೆ ಅದೆಲ್ಲಿದೆ ಎಂದು ಗೊತ್ತಾಗುತ್ತದೆ. ನೀನು ಈ ಪ್ರಕರಣದಿಂದ ಬಿಡುಗಡೆಯಾದ ನಂತರ ನನ್ನ ಬಳಿಗೆ ಬಾ, ನಾನು

    ಸಹಾಯ ಮಾಡುತ್ತೇನೆ ಎಂದ. ಒಂದು ವರ್ಷದ ನಂತರ ಜೈಲಿನಿಂದ ಬಿಡುಗಡೆ ಹೊಂದಿ ಮಹದೇವನ ಮನೆಗೆ ಹೋದೆ. ಆಗ ತಾನು ರೈಲ್ವೆ ಪೊಲೀಸ್ ಕಾನ್ಸ್​ಟೇಬಲ್ ಆಗಿರುವುದಾಗಿ ತಿಳಿಸಿದ ಮಹದೇವ, ಬೀದಿಕಳ್ಳತನ ಮತ್ತು ಮನೆಗಳ್ಳತನಕ್ಕಿಂತ ರೈಲುಗಳಲ್ಲಿ ಕಳ್ಳತನ ಮಾಡುವುದು ಸುಲಭ. ಹೇಗೆ ಕಳ್ಳತನ ಮಾಡಬೇಕೆಂದು ನಿನಗೆ ಸೂಚಿಸುವೆ. ಆ ರೀತಿ ಮಾಡಿದರೆ ನೀನು ಸಿಕ್ಕಿಬೀಳುವುದಿಲ್ಲ ಎಂದ. ಆಗಲಿ, ನಾನೇನು ಮಾಡಬೇಕು ಎಂದು ಕೇಳಿದೆ. ನೀನು ಕದ್ದ ಹಣದಲ್ಲಿ ಅರ್ಧಪಾಲನ್ನು ನನಗೆ ಕೊಡಬೇಕು ಎಂಬ ಷರತ್ತನ್ನು ಹಾಕಿದ. ನಾನು ಒಪ್ಪಿದೆ.

    ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳಿಂದ ರಾಯಚೂರು ಜಿಲ್ಲೆಯ ಮೂಲಕ ಹಾದುಹೋಗುವ ರೈಲುಗಳು ಎರಡು ರಾಜ್ಯಗಳ ನಡುವೆ ಸಂಚರಿಸುತ್ತವೆ. ಅವೇ ಕರ್ನಾಟಕ ಮತ್ತು ಆಂಧ್ರ. ಹೀಗಾಗಿ ನೀನು ಆಂಧ್ರದಲ್ಲಿ ರೈಲನ್ನೇರಿ, ಮಾರ್ಗಮಧ್ಯೆ ಕಳವು ಮಾಡಿ ಕರ್ನಾಟಕದ ಸ್ಟೇಷನ್​ನಲ್ಲಿ ಇಳಿದರೆ ಸಿಕ್ಕಿಹಾಕಿಕೊಳ್ಳುವುದು ಕಷ್ಟ. ನಾನು ಇದೇ ರೂಟಿನಲ್ಲಿ ಬೀಟ್ ಡ್ಯೂಟಿ ಮಾಡುವುದರಿಂದ ನಾನು ಯಾವ ರೈಲಿನಲ್ಲಿರುವೆ ಎಂದು ನಿನಗೆ ಮೊದಲೇ ತಿಳಿಸುವೆ. ನೀನು ಆ ರೈಲನ್ನು ಹತ್ತಿ ನನಗೆ ಮಿಸ್ಡ್ ಕಾಲ್ ಕೊಡು. ನಾನು ನಿನ್ನನ್ನು ಭೇಟಿಯಾಗಿ ಯಾವ ಪ್ರಯಾಣಿಕರ ಬಳಿ ಬೆಲೆಬಾಳುವ ವಸ್ತುಗಳಿವೆ ಎಂದು ತಿಳಿಸಿ ಅವರನ್ನು ದೂರದಿಂದ ತೋರಿಸುವೆ. ನೀನು ಅವರನ್ನು ಗುರಿಮಾಡಿ ಅವರ ಬ್ಯಾಗ್ ಅಥವಾ ಸೂಟ್​ಕೇಸನ್ನು ಕಳವು ಮಾಡಿ ಇಳಿದುಬಿಡು ಎಂದ. ನಾನು ಒಪ್ಪಿದೆ.

    ಕಳೆದ ಎರಡು ವರ್ಷಗಳಿಂದ ಮಹದೇವನ ಸೂಚನೆ ಮೇರೆಗೇ ಕಳವು ಮಾಡುತ್ತಿರುವೆ. ಸಾಮಾನ್ಯವಾಗಿ ಮಧ್ಯರಾತ್ರಿ 2.30ರಿಂದ 3 ಗಂಟೆಯ ಮಧ್ಯೆ ಪ್ರಯಾಣಿಕರು ಗಾಢನಿದ್ರೆಯಲ್ಲಿರುತ್ತಾರೆ. ಆಗ ಅವರ ವಸ್ತುಗಳನ್ನು ದೋಚಬೇಕೆಂದು ನನಗೆ ಹೇಳಿದ ಮಹದೇವ ಯಾವುದೇ ಕಾರಣಕ್ಕೂ ಮೊಬೈಲ್, ಲ್ಯಾಪ್​ಟಾಪ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದಿಯಬಾರದು ಎಂದು ಸೂಚಿಸಿ, ಒಂದು ವೇಳೆ ಅವು ಬ್ಯಾಗ್​ಗಳಲ್ಲಿ ಸಿಕ್ಕರೆ ಅವನ್ನು ಕೂಡಲೇ ಎಸೆದು ಬಿಡಬೇಕೆಂದು ಸೂಚಿಸಿದ.

    ಸ್ಲೀಪರ್ ಕೋಚ್​ಗಳ ಬಾಗಿಲುಗಳ ಸಮೀಪದ ಬರ್ತ್​ಗಳಲ್ಲಿ ಮಲಗುತ್ತಿರುವವರನ್ನೇ ಗುರಿಮಾಡಬೇಕೆಂದು ಹೇಳಿದ ಮಹದೇವ ಅಂಥವರನ್ನು ತಾನೇ ಗುರುತಿಸುತ್ತಿದ್ದ. ನಾನು ರೈಲನ್ನೇರಿ ಮಿಸ್ಡ್ ಕಾಲ್ ಕೊಟ್ಟ ಕೂಡಲೇ ಆತ ನನಗೆ ದೋಚಬೇಕಾದ ಪ್ರಯಾಣಿಕರಿದ್ದ ಬೋಗಿ ನಂಬರ್ ಮತ್ತು ಬರ್ತ್ ನಂಬರ್ ಕೊಡುತ್ತಿದ್ದ. ಅಂತಹ ಬೋಗಿಗಳ ಬಾಗಿಲುಗಳನ್ನು ಆತನೇ ತೆರೆದಿರುತ್ತಿದ್ದ. ರೈಲು ಯಾವುದಾದರೂ ಸ್ಟೇಷನ್​ಗೆ ಆಗಮಿಸುವ ಕೆಲವೇ ನಿಮಿಷಗಳ ಮುಂಚೆ ನಾನು ಆ ಬೋಗಿಗೆ ಹೋಗಿ ಬ್ಯಾಗುಗಳನ್ನು ಕದ್ದು ಬೇಗಬೇಗನೇ ರೈಲಿನಿಂದ ಇಳಿದುಬಿಡುತ್ತಿದ್ದೆ. ನಂತರ ಕಳವು ಮಾಲನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಅರ್ಧಪಾಲನ್ನು ಮಹದೇವನಿಗೆ ಕೊಡುತ್ತಿದ್ದೆ. ಕಳೆದ ಎರಡು ವರ್ಷಗಳಲ್ಲಿ ಪ್ರತಿ ಎರಡು ತಿಂಗಳಿಗೆ ಮೂರರಂತೆ ಕಳ್ಳತನ ಮಾಡಿರುವೆ. ಸುಮಾರು ಐವತ್ತು ಅರವತ್ತು ಸಾವಿರ ರೂ.ಗಳನ್ನು ಅವನಿಗೆ ಕೊಟ್ಟಿರುವೆ’.

    ಬಸವರಾಜನ ಹೇಳಿಕೆಯ ಮೇರೆಗೆ ಸೀತಾಲಕ್ಷ್ಮಿ ಬ್ಯಾಗ್ ಕಳವಿನ ಪ್ರಕರಣದಲ್ಲಿ ಕಾನ್ಸ್​ಟೇಬಲ್ ಮಹದೇವನನ್ನು ಸಹ ಆರೋಪಿಯನ್ನಾಗಿ ಮಾಡಿ ಅವನನ್ನು ಬಂಧಿಸಲಾಯಿತು. ಅವನ ಮನೆಗೆ ಪೊಲೀಸರು ದಾಳಿ ಮಾಡಿದಾಗ ಅವನ ಮನೆಯಲ್ಲಿ ಇಟ್ಟಿದ್ದ ಐಷಾರಾಮಿ ವಸ್ತುಗಳನ್ನು ನೋಡಿ ದಂಗಾದರು. ವಿಚಾರಣೆಯಲ್ಲಿ ಮಹದೇವ ತನ್ನ ತಪ್ಪನ್ನು ಒಪ್ಪಿಕೊಂಡು ಬಸವರಾಜನಲ್ಲದೆ ಇನ್ನೊಬ್ಬ ಕಳ್ಳನಿಗೂ ತಾನು ಕಳ್ಳತನಕ್ಕಾಗಿ ಕುಮ್ಮಕ್ಕನ್ನು ನೀಡಿದ್ದಾಗಿ ಹೇಳಿದ. ಇಬ್ಬರೂ ಆರೋಪಿಗಳ ಹೇಳಿಕೆ ಮೇರೆಗೆ ಏಳು ಪ್ರಕರಣಗಳನ್ನು ಪತ್ತೆ ಮಾಡಲಾಯಿತು. ಮಹದೇವನ ವಿರುದ್ಧ ಇಲಾಖಾ ವಿಚಾರಣೆಯನ್ನು ಮಾಡಿ ಅವನನ್ನು ನೌಕರಿಯಿಂದ ವಜಾಗೊಳಿಸಲಾಯಿತು.

    ಕಳ್ಳತನದ ಏಳು ಪ್ರಕರಣಗಳಲ್ಲಿ ಮೂರರಲ್ಲಿ ಇಬ್ಬರೂ ಆರೋಪಿಗಳಿಗೆ ತಲಾ ಮೂರು ವರ್ಷಗಳ ಜೈಲುವಾಸವನ್ನು ವಿಧಿಸಲಾಗಿದೆ. ಉಳಿದವು ನ್ಯಾಯಾಲಯದಲ್ಲಿ ಬಾಕಿ ಇವೆ. ಮಾಜಿ ಕಾನ್ಸ್​ಟೇಬಲ್ ಮಹದೇವ ಮತ್ತು ಬಸವರಾಜ್ ಜೈಲಿನ ಒಂದೇ ಬ್ಯಾರಕ್​ನಲ್ಲಿದ್ದಾರೆ. ಎಲ್ಲರನ್ನು ರಕ್ಷಿಸಬೇಕಾದ ಪೊಲೀಸನೇ ಈ ರೀತಿ ಕಳ್ಳನ ಜೊತೆ ಸೇರಿಕೊಂಡಿದ್ದು ಇಡೀ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಂತೆ ಆಯಿತು. ‘ಉತ್ತರೆಯು ಬರತರೆ ಹೆತ್ತ ತಾಯ್ ತೊರೆದರೆ ಸತ್ಯರು ತಪ್ಪಿ ನಡೆದರೆ ಲೋಕ ವಿನ್ನೆತ್ತ ಸಾಗುವುದು ಸರ್ವಜ್ಞ’ ಎನ್ನುವಂತೆ ಕಳ್ಳರನ್ನು ಹಿಡಿಯಬೇಕಾದವನೇ ಕಳ್ಳನಾದಾಗ ಸಾರ್ವಜನಿಕರಿಗೆ ಇಲಾಖೆಯ ಬಗ್ಗೆ ನಂಬಿಕೆ ಹುಟ್ಟಿಸಲು ಮಹದೇವನಂತಹ ಪೊಲೀಸರಿಗೆ ಕಠಿಣ ಶಿಕ್ಷೆ ಆಗಲೇಬೇಕು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಐಟಿ ಭರ್ಜರಿ ಬೇಟೆ, 3 ದಿನ ಕಳೆದ್ರೂ ಮುಗಿದಿಲ್ಲ ನೋಟು ಎಣಿಕೆ! 290 ಅಲ್ಲ 500 ಕೋಟಿ ರೂ. ದಾಟಲಿದೆಯಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts