More

    ಮಾನವ ಹಕ್ಕುಗಳ ರಕ್ಷಣೆ ಹೆಸರಲ್ಲಿ ಸುಲಿಗೆ!

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಮಾನವ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್​ಎಚ್​ಆರ್​ಸಿ) ಹಾಗೂ ರಾಜ್ಯಮಟ್ಟದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್​ಎಚ್​ಆರ್​ಸಿ) ಜಾರಿಯಲ್ಲಿವೆ. ಆದರೆ, ಇದೇ ಆಯೋಗಗಳಿಗೆ ಹೋಲುವಂತೆ ನಕಲಿ ಲಾಂಛನ ಹಾಗೂ ನಕಲಿ ಪ್ರಮಾಣಪತ್ರ ಸೃಷ್ಟಿಸಿಕೊಂಡು, ಮಾನವ ಹಕ್ಕುಗಳ ಉಲ್ಲಂಘನೆ ಕೇಸ್ ದಾಖಲಿಸುವುದಾಗಿ ಬೆದರಿಸಿ ಅಮಾಯಕರಿಂದ ಸುಲಿಗೆ ಮಾಡುವ ಹಾವಳಿ ದೇಶಾದ್ಯಂತ ಮಿತಿಮೀರಿದೆ.

    ಎನ್​ಎಚ್​ಆರ್​ಸಿ ಹಾಗೂ ಎಸ್​ಎಚ್​ಆರ್​ಸಿಗೆ ಹೋಲುವ ಹೆಸರಿನಲ್ಲೇ ಸರ್ಕಾರೇತರ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಜನರನ್ನು ಬೆದರಿಸಿ ವಸೂಲಿ ಮಾಡುವ ದಂಧೆ ದೇಶದಲ್ಲಿ ಜಾಸ್ತಿಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2018ರ ಜೂನ್​ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ವಸೂಲಿ ಸಂಘ-ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿತ್ತು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಹೇಳಿತ್ತು. ಆದಾಗ್ಯೂ ನಕಲಿ ಸಂಘ-ಸಂಸ್ಥೆಗಳ ಹಾವಳಿ ನಿಂತಿಲ್ಲ. ಇಂತಹ ಕಾನೂನು ಬಾಹಿರ ಸಂಘ-ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದರ ನಡುವೆ ಮಾನವ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಕೆಲಸ ಮಾಡುತ್ತಿರುವುದು ಆಶಾಭಾವನೆ.

    1993ರಲ್ಲಿ ಅಧಿನಿಯಮ ಜಾರಿ: ಭೂಮಿಯ ಮೇಲೆ ಹುಟ್ಟಿದ ದಿನದಿಂದಲೇ ಪ್ರತಿಯೊಬ್ಬರಿಗೂ ಸಿಗುವ ಹಕ್ಕು ಎಂದರೇ ‘ಮಾನವ ಹಕ್ಕು’. ಜಾತಿ, ಪಂಗಡ, ಧರ್ಮ, ಲಿಂಗ, ಸಾಮಾಜಿಕ, ಆರ್ಥಿಕ ಸ್ಥಾನಮಾನ, ಅಂಗವಿಕಲತೆ, ವಯಸ್ಸು, ಹುಟ್ಟಿದ ಸ್ಥಳ ಇದ್ಯಾವುದು ಅಡ್ಡಿ ಇಲ್ಲದೆ ಸಿಗುವುದು ‘ಮಾನವ ಹಕ್ಕು’ಗಳ ವಿಶೇಷವಾಗಿದೆ. ವಿಶ್ವವ್ಯಾಪಿ ಅನ್ವಯ ಆಗುವುದು ಮತ್ತೊಂದು ವಿಶೇಷ. ಧರ್ಮಗಳು, ನಂಬುಗೆಗಳು, ನೀತಿಸಂಹಿತೆಗಳು ಮತ್ತು ರಾಷ್ಟ್ರಗಳು ನಡುವೆ, ಸಾಂಸ್ಕೃತಿಕ ಚೌಕಟ್ಟುಗಳು ಎಲ್ಲದರಲ್ಲೂ ಒಂದೇ ಆಗಿರುತ್ತದೆ. 2ನೇ ಮಹಾಯುದ್ಧದ ಬಳಿಕ ‘ಮಾನವ ಹಕ್ಕುಗಳು’ ಪರಿಕಲ್ಪನೆಗೆ ಬಂದಿದೆ. ಭಾರತದಲ್ಲಿ 1993ರಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದು ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ರಚಿಸಲಾಯಿತು.

    ದುರ್ಬಳಕೆ ಹೇಗೆ?: ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮೀಷನ್ ಹಾಗೂ ಸ್ಟೇಟ್ ಹ್ಯೂಮನ್ ರೈಟ್ಸ್ ಕಮೀಷನ್ ಹೆಸರಿಗೆ ಹೋಲುವಂತೆ ಸಂಸ್ಥೆ, ಲಾಂಛನವನ್ನು ಸೃಷ್ಟಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೆಸರಿನಿಂದ ಸಾರ್ವಜನಿಕರು ಗೊಂದಲಗೊಳ್ಳುವುದರಿಂದ ಸುಲಭವಾಗಿ ಬ್ಲಾ್ಯಕ್​ವೆುೕಲ್ ಮಾಡುತ್ತಾರೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು. ಸರ್ಕಾರಿ ಸಂಸ್ಥೆ ಹೆಸರು ಹಾಗೂ ಲಾಂಛನ (ದುರ್ಬಳಕೆ ತಡೆ) ಕಾಯ್ದೆ 1950 ಪ್ರಕಾರ ಶಿಕ್ಷಾರ್ಹ ಅಪರಾಧ.

    ಬ್ಲ್ಯಾಕ್​ಮೇಲ್​ ಹೇಗೆ?

    · ಆನ್​ಲೈನ್ ಮೂಲಕ ಎನ್​ಎಚ್​ಆರ್​ಸಿ ಪ್ರಮಾಣಪತ್ರ ಡೌನ್​ಲೋಡ್.

    · ಈ ಪ್ರಮಾಣಪತ್ರ ತೋರಿಸಿ ತಾವು ಆಯೋಗದ ಸದಸ್ಯರು ಎಂದು ತೋರಿಕೆ.

    · ಆಯೋಗದ ಸದಸ್ಯರಂತೆ ಖಾಸಗಿ ಕಂಪನಿ, ಕಾರ್ಖಾನೆಗಳಿಗೆ ಭೇಟಿ, ಪರಿಶೀಲನೆ.

    · ಮಾನವ ಹಕ್ಕುಗಳ ನಿಯಮ ಉಲ್ಲಂಘನೆ ಎಂದು ಕೇಸ್ ದಾಖಲಿಸುವ ಬೆದರಿಕೆ.

    · ಇಂತಿಷ್ಟು ಹಣ ಕೊಟ್ಟರೆ ಪ್ರಕರಣ ದಾಖಲಿಸುವುದಿಲ್ಲ ಎಂದು ಸಂಧಾನದ ಮಾತು.

    · ದಂಡ ಕಟ್ಟುವ, ಕೋರ್ಟಿಗೆ ಅಲೆಯುವ ಭಯದಿಂದ ಹಣ ಕೊಡುವ ಮಾಲೀಕರು.

    ಆಯೋಗದಿಂದ ಯಾವೆಲ್ಲ ಕೇಸ್ ತನಿಖೆ?

    · ಜೈಲಿನಲ್ಲಿ ಕೈದಿ ಸಾವು, ಪೊಲೀಸ್ ವಶದಲ್ಲಿ ಸಾವು, ಚಿತ್ರಹಿಂಸೆ, ಅತ್ಯಾಚಾರ ನಡೆದಾಗ ಪ್ರಕರಣ ದಾಖಲಾಗುತ್ತದೆ.

    · ಪೊಲೀಸ್ ಎನ್​ಕೌಂಟರ್, ಅಕ್ರಮ ಬಂಧನ, ಜೈಲು ಸ್ಥಿತಿಗತಿ, ಕೈದಿಗಳ ಹಕ್ಕುಗಳ ಉಲ್ಲಂಘನೆ, ವರದಕ್ಷಿಣೆ, ಚಿತ್ರಹಿಂಸೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಬುದ್ಧಿಮಾಂದ್ಯ ಮಕ್ಕಳ ಹಕ್ಕುಗಳ ಉಲ್ಲಂಘನೆ, ಅಂಗವಿಕಲರ ಹಕ್ಕುಗಳ ಉಲ್ಲಂಘನೆ, ರಾಜ್ಯ ಸರ್ಕಾರದ ಇಲಾಖೆಗಳು, ಸ್ಥಳೀಯ ಅಧಿಕಾರಿಗಳು, ಸರ್ಕಾರದ ಪ್ರಾಧಿಕಾರಗಳ ವಿರುದ್ಧ ದೂರು.

    · ಶಿಕ್ಷಣ, ಆರೋಗ್ಯದ ಹಕ್ಕಿನ ಉಲ್ಲಂಘನೆ, ವಿದ್ಯುತ್ ಪ್ರವಹಿಸಿ ಸಾವು, ಪಿಂಚಣಿ, ನೈಸರ್ಗಿಕ ವಿಪತ್ತು ವೇಳೆ ಪರಿಹಾರ ಶಿಬಿರ, ಪರಿಸರ ಅವನತಿ, ರ್ಯಾಗಿಂಗ್, ಮಾನವ ಅಂಗಾಂಗ ಮಾರಾಟ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಬಾಲ್ಯವಿವಾಹ, ಬಾಲಕಾರ್ವಿುಕ ಪದ್ಧತಿಗೆ ಸಂಬಂಧಿಸಿದ ಸಮಸ್ಯೆಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಕೋಮುನಿಂದನೆ ಕುರಿತು ಆಯೋಗಕ್ಕೆ ದೂರು ಕೊಡಬಹುದು.

    Manava Hakku

    ಅಮೃತ ಸಂಭ್ರಮ
    1948ರಲ್ಲಿ ಮಾನವ ಹಕ್ಕುಗಳು ಘೊಷಣೆಯಾದ ಸ್ಮರಣಾರ್ಥವಾಗಿ ಡಿಸೆಂಬರ್ 10ಕ್ಕೆ ವಿಶ್ವಾದ್ಯಂತ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಜಾಗತಿಕ ಮಾನ ದಂಡವಾಗಿ ಅಂಗೀಕರಿಸಿತ್ತು. ಇಂದಿಗೆ 75 ವರ್ಷಗಳು ತುಂಬಿದ್ದು, ಅಮೃತ ಸಂಭ್ರಮದಲ್ಲಿದೆ.

    2007ರಲ್ಲಿ ಎಸ್​ಎಚ್​ಆರ್​ಸಿ ಅಸ್ತಿತ್ವಕ್ಕೆ
    ‘ರಾಜ್ಯ ಮಾನವ ಹಕ್ಕುಗಳ ಆಯೋಗ’ 2007ರ ಜುಲೈ 25ರಂದು ಅಸ್ತಿತ್ವಕ್ಕೆ ಬಂದಿದೆ. ನ್ಯಾಯಾಧೀಶ ಎಸ್.ಆರ್. ನಾಯಕ್ ಮೊದಲ ಅಧ್ಯಕ್ಷರು. ಪ್ರಸ್ತುತ ಹಿಮಾಚಲ ಪ್ರದೇಶದ ನಿವೃತ್ತ ಮುಖ್ಯ ನ್ಯಾಯಾಧೀಶ ರಾದ ಎಲ್. ನಾರಾಯಣಸ್ವಾಮಿ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ನಿವೃತ್ತ ನ್ಯಾಯಧೀಶ ಎಸ್.ಕೆ.ವಂಟಿಗೋಡಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಟಿ. ಶ್ಯಾಮ್ ಭಟ್ ಸದಸ್ಯರಾಗಿದ್ದಾರೆ. ಮಾನವ ಹಕ್ಕುಗಳ ರಕ್ಷಣೆಗೆ ಆಯೋಗ ಶ್ರಮಿಸುತ್ತಿದೆ. ಜನರಲ್ಲಿ ಜಾಗೃತಿ, ಸಾರ್ವಜನಿಕರಿಗೆ ರಕ್ಷಣೆ ನೀಡುವುದು, ಮಾನವ ಹಕ್ಕುಗಳ ಉಲ್ಲಂಘನೆಗೆ ತುತ್ತಾದವರಿಗೆ ಪರಿಹಾರ ನೀಡುತ್ತಿದೆ. ಉಲ್ಲಂಘನೆ ಆಗುವುದನ್ನು ತಡೆಯುವಲ್ಲಿ ಉದಾಸೀನ ತೋರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸ್ಸು ಮಾಡಿ ಜನತೆಗೆ ನ್ಯಾಯ ಒದಗಿಸುವಲ್ಲಿ ಆಯೋಗ ಶ್ರಮಿಸುತ್ತಿದೆ.

    ಕೆಸಿಆರ್​​ ಹಿಪ್ ರಿಪ್ಲೇಸ್ಮೆಂಟ್​​ ಶಸ್ತ್ರಚಿಕಿತ್ಸೆ ಯಶಸ್ವಿ: ಎರಡ್ಮೂರು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts