More

    ಉಗ್ರ ಕೃತ್ಯಕ್ಕೆ ಐಸಿಸ್ ಸಂಚು: ಮಹಾರಾಷ್ಟ್ರದ ವಿವಿಧೆಡೆ 15 ಶಂಕಿತ ಉಗ್ರರ ಬಂಧನ, ಬೆಂಗಳೂರಲ್ಲಿ ಸಹಚರ ವಶಕ್ಕೆ

    ಬೆಂಗಳೂರು: ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಮುಖಾಂತರ ದೇಶದಲ್ಲಿ ಶಾಂತಿ ಕದಡಲು ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಸಂಚು ರೂಪಿಸಿ, ಉಗ್ರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ 15 ಐಸಿಸ್ ಶಂಕಿತ ಉಗ್ರರನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಂಧಿಸಿದೆ. ಶಂಕಿತರೊಂದಿಗೆ ನಂಟು ಹೊಂದಿದ್ದ ರಾಜಧಾನಿಯ ಟೆಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಭಾರತದ ಮೇಲೆ ಐಸಿಸ್ ಕಣ್ಣಿಟ್ಟಿರುವ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ.

    ಬೆಂಗಳೂರು ಹಾಗೂ ಮಹಾರಾಷ್ಟ್ರದ 44 ಸ್ಥಳಗಳ ಮೇಲೆ ಶನಿವಾರ ಎನ್​ಐಎ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ. ಯುವಕರ ಬ್ರೖೆನ್ ವಾಶ್ ಮಾಡಿ ಐಸಿಸ್ ಸಂಘಟನೆಗೆ ನೇಮಿಸುವ ಜವಾಬ್ದಾರಿ ಹೊತ್ತಿದ್ದ ಮುಖ್ಯಸ್ಥ ಸಾಕಿಬ್ ನಾಚನ್ ಸೇರಿ 15 ಶಂಕಿತರನ್ನು ಬಂಧಿಸಲಾಗಿದೆ. ಬೆಂಗಳೂರಿನ ಪುಲಕೇಶಿನಗರದಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಶಂಕಿತನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಈತನ ಪತ್ನಿ ವೈದ್ಯೆಯಾಗಿದ್ದು, ಮೂವರು ಮಕ್ಕಳ ಜತೆ ದಂಪತಿ ವಾಸವಿದ್ದರು. ಮಹಾರಾಷ್ಟ್ರದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ಜತೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರು ವಿದೇಶದಲ್ಲಿರುವ ಉಗ್ರ ಮುಖಂಡರ ಅಣತಿಯಂತೆ ಭಾರತದಲ್ಲಿ ಕೆಲಸ ಮಾಡುತ್ತಿದ್ದರು. ದೇಶದಲ್ಲಿ ಐಸಿಸ್​ನ ವಿನಾಶಕಾರಿ ಅಜೆಂಡಾ ಹರಡುವುದು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಎಸಗುವಂತೆ ಪ್ರಚೋದಿಸುವುದು ಹಾಗೂ ಸುಧಾರಿತ ಸ್ಪೋಟಕ ಸಾಧನ (ಐಇಡಿ) ತಯಾರಿಕೆ ಸೇರಿ ವಿವಿಧ ರೀತಿಯ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

    ಐಸಿಸ್ ಮಹಾರಾಷ್ಟ್ರ ಮಾಡ್ಯೂಲ್​ನ ಎಲ್ಲ ಸದಸ್ಯರು, ಪಾದ್ಘಾ-ಬೋರಿವಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಮತ್ತು ದೇಶಾದ್ಯಂತ ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದರು. ಉಗ್ರಕೃತ್ಯಗಳನ್ನು ಎಸಗಲು ಜಿಹಾದ್, ಖಿಲಾಫತ್ ಮತ್ತು ಐಸಿಸ್ ಸೇರಿ ಇನ್ನಿತರ ಮಾರ್ಗಗಳನ್ನು ಅನುಸರಿಸಿ ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮೂಲಕ ಭಾರತದ ವಿರುದ್ಧ ಯುದ್ಧ ಸಾರುವ ಗುರಿಯನ್ನು ಹೊಂದಿದ್ದರೆಂದು ಎನ್​ಐಎ ಪತ್ತೆ ಮಾಡಿದೆ.

    ಎನ್​ಐಎ ಇತ್ತೀಚೆಗೆ ಐಸಿಸ್ ಸಂಘಟನೆಯ ಹೇಯ ಮತ್ತು ಹಿಂಸಾತ್ಮಕ ಭಾರತ-ವಿರೋಧಿ ಕಾರ್ಯಸೂಚಿಯನ್ನು ನಾಶಮಾಡುವ ಪ್ರಯತ್ನದಲ್ಲಿ ಐಸಿಸ್ ಭಯೋತ್ಪಾದನೆಯ ಸಂಚು ಪ್ರಕರಣದಲ್ಲಿ ಹಲವು ಉಗ್ರರನ್ನು ಬಂಧಿಸುವ ಮೂಲಕ ಸಂಭಾವ್ಯ ಭಾರಿ ಅನಾಹುತಗಳನ್ನು ತಡೆದಿದೆ. ಜತೆಗೆ ವಿವಿಧ ಐಸಿಸ್ ಮಾಡ್ಯೂಲ್​ಗಳನ್ನು ಭೇದಿಸಿದೆ. ಆ ನಿಟ್ಟಿನಲ್ಲಿ ತನ್ನ ಪ್ರಯತ್ನಗಳ ಭಾಗವಾಗಿ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಐಸಿಸ್ ಮಹಾರಾಷ್ಟ್ರ ಮಾಡ್ಯೂಲ್ ವಿರುದ್ಧ ಪ್ರಕರಣವನ್ನು ದಾಖಲಿಸಿದೆ ಮತ್ತು ಅಂದಿನಿಂದ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿವಿಧ ಐಸಿಸ್ ಮಾಡ್ಯೂಲ್​ಗಳು ಮತ್ತು ಅದರ ನೆಟ್​ವರ್ಕ್​ಗಳ ನಾಶದಲ್ಲಿ ನಿರತವಾಗಿದೆ.

    ಏನಿದು ಐಸಿಸ್?
    ಐಸಿಸ್ ಒಂದು ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿದ್ದು, ಇದನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್)/ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ (ಐಎಸ್​ಐಎಲ್)/ ದೈಶ್/ ಖೊರಾಸನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್​ಕೆಪಿ)/ ಐಎಸ್​ಐಎಸ್ ವಿಲಾಯತ್ ಖೊರಾಸನ್/ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಶಾಮ್ ಖೊರಾಸನ್ (ಐಎಸ್​ಐಎಸ್-ಕೆ) ಎಂದು ಗುರುತಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಐಸಿಸ್ ಮಾಡ್ಯೂಲ್​ಗಳು ಮತ್ತು ಸೆಲ್​ಗಳನ್ನು ಸ್ಥಾಪಿಸುವ ಮೂಲಕ ಈ ಸಂಘಟನೆಯು ಭಾರತದಲ್ಲಿ ತನ್ನ ಭಯೋತ್ಪಾದಕ ಜಾಲವನ್ನು ಹರಡುತ್ತಿದೆ.

    ಬಯಾತ್ ಬೋಧಿಸುತ್ತಿದ್ದ ಸಾಕಿಬ್!
    ಎನ್​ಐಎ ಬಲೆಗೆ ಬಿದ್ದಿರುವ ಪ್ರಮುಖ ಶಂಕಿತ ಉಗ್ರ ಹಾಗೂ ಮಹಾರಾಷ್ಟ್ರ ಐಸಿಸ್ ಮಾಡ್ಯೂಲ್ ನಾಯಕ ಸಾಕಿಬ್ ನಾಚನ್ ಐಸಿಸ್ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ. ಟೆಲಿಗ್ರಾಂ, ವಾಟ್ಸ್ ಆಪ್ ಗ್ರೂಪ್ ರಚಿಸಿ ಉಗ್ರವಾದವನ್ನು ಹರಿಬಿಡುತ್ತಿದ್ದ. ಐಸಿಸ್ ಸಿದ್ಧಾಂತದ ಬಗ್ಗೆ ಒಲವು ತೋರುವವರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದ. ನಿಷೇಧಿತ ಉಗ್ರ ಸಂಘಟನೆಗೆ ಸೇರುವಂತಹ ಯುವಕರಿಗೆ ಬಯಾತ್ ಬೋಧಿಸುತ್ತಿದ್ದ. ಬಯಾತ್ ಎಂದರೆ ಐಸಿಸ್ ಖಲೀಫಾಗೆ ನಿಷ್ಠರಾಗಿರುವ ಪ್ರಮಾಣ ಎಂದು ಎನ್​ಐಎ ತಿಳಿಸಿದೆ.

    ಗ್ರಾಮವನ್ನು ಸಿರಿಯಾ ಎಂದು ಘೋಷಣೆ!
    ಮಹಾರಾಷ್ಟ್ರದ ಥಾಣೆ ಗ್ರಾಮಾಂತರದಲ್ಲಿರುವ ಪಾದ್ಘಾ ಗ್ರಾಮವನ್ನು ವಿಮೋಚನಾ ವಲಯ ಎಂದು ಬಂಧಿತ ಶಂಕಿತ ಉಗ್ರರೇ ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಅಲ್ಲದೆ ಆ ಗ್ರಾಮವನ್ನು ‘ಅಲ್ ಶಮ್ ಕರೆದುಕೊಂಡಿದ್ದರು. ಅಲ್ ಶಮ್ ಎಂದರೆ ಸಿರಿಯಾ, ಗ್ರೇಟರ್ ಸಿರಿಯಾ ಎಂದರ್ಥ. ಹೀಗಾಗಿಯೇ ಪಾದ್ಘಾ ಗ್ರಾಮವನ್ನು ಬಲಪಡಿಸುವ ಉದ್ದೇಶದಿಂದ ಮುಸ್ಲಿಂ ಯುವಕರನ್ನು ತಾವಿರುವ ವಾಸಸ್ಥಳದಿಂದ ಅಲ್ ಶಮ್ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಪ್ರೇರೆಪಿಸುತ್ತಿದ್ದರೆಂಬುದು ಗೊತ್ತಾಗಿದೆ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಾರಾಷ್ಟ್ರ, ಕರ್ನಾಟಕ ಹೆಸರಲ್ಲಿ ಗ್ರೂಪ್!
    ಬಂಧಿತ ಬೆಂಗಳೂರಿನ ಪುಲಕೇಶಿನಗರದ ಶಂಕಿತನ ಬಳಿ 15 ಲಕ್ಷ ನಗದು ಸಿಕ್ಕಿದೆ. ಈತ ಡೇಟಾ ಕನ್ಸಲ್​ಟೆಂಟ್ ಆಗಿಯೂ ಈ ಹಿಂದೆ ಕೆಲಸ ಮಾಡುತ್ತಿದ್ದ. ಮುಂಬೈ ಮೂಲದ ಈತ, ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. 2018ರಲ್ಲಿ ಫ್ಲ್ಯಾಟ್ ಖರೀದಿಸಿದ್ದ. ವೈದ್ಯೆಯಾಗಿರುವ ಪತ್ನಿ ಮತ್ತು ಮೂವರು ಮಕ್ಕಳ ಜತೆ ವಾಸವಿದ್ದ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಂಧನವಾಗಿದ್ದ ಶಂಕಿತನ ಜತೆಗೆ ಸಂಪರ್ಕದಲ್ಲಿದ್ದ. ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದ. ಟೆಲಿಗ್ರಾಂ, ವೈರ್, ವಾಟ್ಸ್​ಆಪ್​ಗಳಲ್ಲಿ ಪ್ರತ್ಯೇಕ ಗ್ರೂಪ್​ಗಳನ್ನು ರಚಿಸಿದ್ದ. ಈ ಮೂಲಕ ಮಹಾರಾಷ್ಟ್ರ, ಪುಣೆ, ಥಾಣೆಯ ಕೆಲವರನ್ನು ಸೇರಿಸಿಕೊಂಡು ಐಸಿಸ್ ಸಂಘಟನೆ ಪರವಾಗಿ ಪೋಸ್ಟ್​ಗಳನ್ನು ಹಾಕುತ್ತಿದ್ದ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದ ವ್ಯಕ್ತಿಗಳಿಗಾಗಿಯೇ ಟೆಲಿಗ್ರಾಂ ಮತ್ತು ವೈರ್ ಆಪ್​ಗಳಲ್ಲಿ ಪ್ರತ್ಯೇಕ ಗ್ರೂಪ್ ರಚಿಸಿದ್ದ. ಒಂದು ವೇಳೆ ಈ ರೀತಿಯ ಪೋಸ್ಟ್​ಗಳನ್ನು ಹಾಕದಂತೆ ಎಚ್ಚರಿಸುತ್ತಿದ್ದ ವ್ಯಕ್ತಿಗಳಿಗೆ, ಅನಿರೀಕ್ಷಿತವಾಗಿ ಬಂದ ಪೋಸ್ಟ್ ಇದಾಗಿದ್ದು, ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದ. ಈ ರೀತಿಯ ಪೋಸ್ಟ್ ಗಳಿಂದಲೇ ಐಸಿಸ್​ನ ವಿದೇಶಿ ಹ್ಯಾಂಡ್ಲರ್​ಗಳನ್ನು ಸಂರ್ಪಸಿ, ಅವರ ಸೂಚನೆ ಮೇರೆಗೆ ದೇಶ ಹಾಗೂ ವಿದೇಶಗಳಿಗೆ ಸಂಚರಿಸಿ, ಸಂಘಟನೆ ಪರವಾಗಿ ಕೆಲಸ ಮಾಡಿದ್ದ. ಪ್ರಮುಖವಾಗಿ ಪುಣೆಯ ಪಾದ್ಘಾ-ಬೊರಿವಿಲಿಯಲ್ಲಿದ್ದ ಉಗ್ರ ಸಂಘಟನೆ ಕಚೇರಿಗೆ ಭೇಟಿ ನೀಡಿದ್ದ. ಈ ವೇಳೆಯೇ ಐಇಡಿ ತಯಾರಿಸುವ ಬಗ್ಗೆಯೂ ತರಬೇತಿ ಪಡೆದಿದ್ದ. ಆದರೆ, ಬೆಂಗಳೂರಿನಲ್ಲಿ ಆ ರೀತಿಯ ಯಾವುದೇ ಪ್ರಯೋಗ ನಡೆದಿಲ್ಲ ಎಂದು ಎಂದು ಎನ್​ಐಎ ಮೂಲಗಳು ತಿಳಿಸಿವೆ.

    ಎಲ್ಲೆಲ್ಲಿ ದಾಳಿ?
    ಬೆಂಗಳೂರು, ಮಹಾರಾಷ್ಟ್ರದ ಥಾಣೆ, ಪಾದ್ಘಾ-ಬೋರಿವಲಿ, ಮಿರಾ ರಸ್ತೆ ಮತ್ತು ಪುಣೆಯ ಒಟ್ಟು 44 ಸ್ಥಳಗಳ ಮೇಲೆ ದಾಳಿ.

    ಏನೆಲ್ಲ ಸಿಕ್ತು?
    ಶಸ್ತ್ರಾಸ್ತ್ರಗಳು, ಪಿಸ್ತೂಲ್, ಎರಡು ಏರ್ ಗನ್ , 38 ಮೊಬೈಲ್, 2 ಲ್ಯಾಪ್​ಟಾಪ್, 51 ಹಮಾಸ್ ಧ್ವಜಗಳು, ಪ್ರಚೋದನಕಾರಿ ಬರಹ ಗಳು ಜಪ್ತಿ. 68 ಲಕ್ಷ ನಗದು ಪತ್ತೆ.

    ನಗರದಲ್ಲಿ ಶಂಕಿತ ಉಗ್ರನ ವಶ: ಬಂಧಿತ ಅರಾಫತ್ ಅಲಿ ಹೇಳಿಕೆ ಆಧರಿಸಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts