More

    ನಗರದಲ್ಲಿ ಶಂಕಿತ ಉಗ್ರನ ವಶ: ಬಂಧಿತ ಅರಾಫತ್ ಅಲಿ ಹೇಳಿಕೆ ಆಧರಿಸಿ ಸೆರೆ

    ಬೆಂಗಳೂರು: ಐಸಿಸ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ನಗರದ ಫ್ರೆಜರ್‌ಟೌನ್‌ನಲ್ಲಿ ದಾಳಿ ನಡೆಸಿ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ.
    ಫ್ರೆಜರ್‌ಟೌನ್ ನಿವಾಸಿ ಅಲಿ ಅಬ್ಬಾಸ್ ಪಟೀವಾಲ ಅಲಿಯಾಸ್ ಅಲಿ ಹಫೀಜ್ (೩೪).


    ಐಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಹಿಂದೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ಹೇಳಿಕೆಯನ್ನು ಆಧರಿಸಿ ಮುಂಬೈ ಎನ್‌ಐಎ ಅಧಿಕಾರಿಗಳ ವಿಶೇಷ ಕಾರ್ಯಾಚರಣೆಯಲ್ಲಿ ಅಲಿ ಅಬ್ಬಾಸ್‌ನನ್ನು ಬಂಧಿಸಲಾಗಿದೆ. ಆತನಿಂದ ಲ್ಯಾಪ್‌ಟಾಪ್, ಐಫೋನ್, ಒಂದು ಶಸ್ತ್ರಾಸ್ತ್ರ, ೧೫ ಲಕ್ಷ ರೂ. ನಗದು ಹಾಗೂ ಡಿಜಿಟಲ್ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.


    ಪತ್ನಿಯ ವಿಚಾರಣೆ:
    ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ಪತ್ನಿ, ವೈದ್ಯೆಯಾದ ಸುಮಯ್ಯ ಪಟೀವಾಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುಂಬೈ ಮೂಲದ ಅಬ್ಬಾಸ್ ಅಲಿ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಪತ್ನಿ, ಮೂವರು ಮಕ್ಕಳು ಹಾಗೂ ತಂದೆಯೊಂದಿಗೆ ಫ್ರೆಜರ್‌ಟೌನ್‌ನ ಮೋರ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಮೂರನೇ ಮಹಡಿಯಲ್ಲಿರುವ ಫ್ಲಾೃಟ್‌ನಲ್ಲಿ ವಾಸವಾಗಿದ್ದ. ಅಬ್ಬಾಸ್ ಅಲಿ ಡೇಟಾ ಸೈನ್ಸ್ ಕನ್ಸಲ್‌ಟೆಂಟ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ.

    ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ:
    ಅಬ್ಬಾಸ್ ಅಲಿ, ಮೃಧುಸ್ವಭಾವದ ವ್ಯಕ್ತಿಯಾಗಿದ್ದು, ಸ್ಥಳೀಯವಾಗಿ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಈತನ ಪತ್ನಿ ಸುಮಯ್ಯ ಪಟೀವಾಲ ವೈದ್ಯೆ ಹಾಗೂ ಪೋಷಕಾಂಶ ತಜ್ಞೆಯಾಗಿದ್ದು, ಮನೆ ಸಮೀಪದಲ್ಲೇ ಸುಮಯ್ಯ ನ್ಯೂಟ್ರಿಕೇರ್ ಎಂಬ ಕ್ಲಿನಿಕ್ ನಡೆಸುತ್ತಿದ್ದರು. ಮೂವರು ಮಕ್ಕಳು ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಮನೆಯಲ್ಲೇ ಇರುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

    ಐಸಿಸ್ ಪರವಾಗಿ ಪೋಸ್ಟ್ ಹಾಕುತ್ತಿದ್ದ:
    ರಿಯಲ್ ಎಸ್ಟೇಟ್ ವ್ಯವಹಾರದ ಜತೆಗೆ ಟೆಲಿಗ್ರಾಂ, ವೈರ್, ವಾಟ್ಸ್‌ಆ್ಯಪ್‌ಗಳಲ್ಲಿ ಪ್ರತ್ಯೇಕ ಗ್ರೂಪ್‌ಗಳನ್ನು ಮಾಡಿಕೊಂಡಿದ್ದ. ಈ ಮೂಲಕ ಮಹಾರಾಷ್ಟ್ರ, ಪುಣೆ, ಥಾಣಿಯ ಕೆಲವರನ್ನು ಸೇರಿಸಿಕೊಂಡು ಐಸಿಸ್ ಸಂಘಟನೆ ಪರವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಅದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದ ವ್ಯಕ್ತಿಗಳಿಗಾಗಿಯೇ ಟೆಲಿಗ್ರಾಂ ಮತ್ತು ವೈರ್ ಆ್ಯಪ್‌ಗಳಲ್ಲಿ ಪ್ರತ್ಯೇಕ ಗ್ರೂಪ್ ರಚಿಸಿಕೊಳ್ಳುತ್ತಿದ್ದ. ಒಂದು ವೇಳೆ ಈ ರೀತಿಯ ಪೋಸ್ಟ್‌ಗಳನ್ನು ಹಾಕದಂತೆ ಎಚ್ಚರಿಸುತ್ತಿದ್ದ ವ್ಯಕ್ತಿಗಳಿಗೆ, ಅನಿರೀಕ್ಷಿತವಾಗಿ ಬಂದ ಪೋಸ್ಟ್ ಇದಾಗಿದ್ದು, ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಮಜಾಯಿಸಿ ನೀಡುತ್ತಿದ್ದ ಎಂಬುದು ಗೊತ್ತಾಗಿದೆ. ಈ ರೀತಿಯ ಪೋಸ್ಟ್‌ಗಳಿಂದಲೇ ಐಸಿಸ್‌ನ ವಿದೇಶಿ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿ, ಅವರ ಸೂಚನೆ ಮೇರೆಗೆ ದೇಶ ಹಾಗೂ ವಿದೇಶಗಳಿಗೆ ಸಂಚರಿಸಿ, ಸಂಘಟನೆ ಪರವಾಗಿ ಕೆಲಸ ಮಾಡಿದ್ದಾನೆ. ಪ್ರಮುಖವಾಗಿ ಪುಣೆಯ ಪಾದ್ಘಾ-ಬೊರಿವಿಲಿಯಲ್ಲಿದ್ದ ಉಗ್ರ ಸಂಘಟನೆ ಕಚೇರಿಗೆ ಭೇಟಿ ನೀಡಿದ್ದ. ಈ ವೇಳೆಯೇ ಐಇಡಿ ತಯಾರಿಸುವ ಬಗ್ಗೆಯೂ ತರಬೇತಿ ಪಡೆದುಕೊಂಡಿದ್ದ. ಆದರೆ, ಬೆಂಗಳೂರನಲ್ಲಿ ಆ ರೀತಿಯ ಯಾವುದೇ ಪ್ರಯೋಗ ನಡೆದಿಲ್ಲ ಎಂದು ಎಂದು ಮೂಲಗಳು ತಿಳಿಸಿವೆ.

    ಶಂಕಿತರ ಜತೆ ಸಂಪರ್ಕ:
    ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆದ ಪ್ರಯೋಗಿಕ ಐಇಡಿ ಸ್ಫೋಟ ಪ್ರಕರಣದ ಆರೋಪಿಗಳ ಜತೆ ಅಲಿ ಅಬ್ಬಾಸ್ ಸಂಪರ್ಕ ಹೊಂದಿದ್ದು, ೨೦೨೦ರ ಮಂಗಳೂರಿನ ಗೋಡೆ ಬರಹ ಪ್ರಕರಣದ ಆರೋಪಿ ಅರಾಫತ್ ಅಲಿ ಹಾಗೂ ಕಳೆದ ವರ್ಷ ನಡೆದ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಜತೆಯೂ ಆನ್‌ಲೈನ್ ಮೂಲಕ ಸಂಪರ್ಕ ಹೊಂದಿದ್ದ ಎಂಬ ಮಾಹಿತಿಯಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಉರ್ದು ಶಾಲೆಗಳಿಗೆ ಆರ್ಥಿಕ ನೆರವು:
    ಐಸಿಸ್ ಸಂಘಟನೆಗೆ ಅನ್ಯ ಕೋವಿನ ಯುವಕರ ಸೆಳೆಯುತ್ತಿದ್ದ ಅಲಿ ಅಬ್ಬಾಸ್, ಸಂಘಟನೆಯ ಪ್ರಮುಖರ ಸೂಚನೆ ಮೇರೆಗೆ ಫ್ರೆಜರ್‌ಟೌನ್‌ನಲ್ಲಿರುವ ಉರ್ದು ಶಾಲೆಯೊಂದನ್ನು ನಡೆಸುತ್ತಿದ್ದ ಎಂಬುದು ಗೊತ್ತಾಗಿದೆ. ಅಲ್ಲದೆ, ನಗರದ ಕೆಲ ಉರ್ದು ಶಾಲೆಗಳಿಗೆ ಆರ್ಥಿಕ ನೆರವು ನೀಡುತ್ತಿರುವುದು ಕಂಡು ಬಂದಿದೆ. ಈ ಮೂಲಕ ಶಿಕ್ಷಣದ ಜತೆಗೆ ಪರೋಕ್ಷವಾಗಿ ಉಗ್ರ ಸಂಘಟನೆಗೆ ಮಕ್ಕಳನ್ನು ಪ್ರಚೋದಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts