More

    ಹಳವ ತರ್ಲಘಟ್ಟದಲ್ಲಿ ಮತದಾನ ಬಹಿಷ್ಕಾರ

    ಶಿಗ್ಗಾಂವಿ: ಮೂಲಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ತಾಲೂಕಿನ ಹಳವ ತರ್ಲಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಮಾಳೊಜಿನವರ ಎಂಬುವರು ಸೋಮವಾರ ತಹಸೀಲ್ದಾರರಿಗೆ ಕರೆ ಮಾಡಿ, ಮಂಗಳವಾರ ನಡೆಯುವ ಮತದಾನ ಬಹಿಷ್ಕಾರ ಮಾಡುವುದಾಗಿ ಮಾಹಿತಿ ನೀಡಿದ್ದರು. ಸೋಮವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಿಗ್ಗಾಂವಿ ತಹಸೀಲ್ದಾರ್ ಸಂತೋಷ ಹಿರೇಮಠ ಗ್ರಾಮಸ್ಥರ ಸಭೆ ನಡೆಸಿ ಸಮಸ್ಯೆ ಆಲಿಸಿದ್ದರು.

    ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲಾಗುವುದು. ಆದರೆ, ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಜಮೀನನ್ನು ಮರಳಿ ಕೊಡಿಸುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ತಹಸೀಲ್ದಾರ್ ಅವರು ತಿಳಿವಳಿಕೆ ಹೇಳಿದ ನಂತರ ಗ್ರಾಮಸ್ಥರು ಮತದಾನಕ್ಕೆ ಒಪ್ಪಿಕೊಂಡಿದ್ದರು. ಆದರೆ, ಇಂದು ಮತದಾನ ಆರಂಭವಾಗಿ ಸುಮಾರು ಐದಾರು ಗಂಟೆಯಾದರೂ ಯಾರೊಬ್ಬರು ಮತದಾನಕ್ಕೆ ಮುಂದಾಗಲಿಲ್ಲ.

    ಶಿಗ್ಗಾಂವಿ ತಾಲೂಕಿನ ಕೊನೆಯಲ್ಲಿರುವ ಹಳವ ತರ್ಲಘಟ್ಟ ಗ್ರಾಮ ತಾಲೂಕು ಕೇಂದ್ರದಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ. 54 ಮನೆಗಳಿರುವ ಗ್ರಾಮದಲ್ಲಿ 335 ಜನಸಂಖ್ಯೆ ಇದ್ದು, 231 ಮತದಾರರು ಇದ್ದಾರೆ. ಮೂಲಸೌಲಭ್ಯದಿಂದ ವಂಚಿತವಾಗಿರುವ ಈ ಗ್ರಾಮಕ್ಕೆ ಇಲ್ಲಿಯವರೆಗೂ ಬಸ್ ಸೌಲಭ್ಯ ಇರುವುದಿಲ್ಲ. ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಒಂದರಿಂದ ಐದನೇ ತರಗತಿಯ ವರೆಗೆ ಮಾತ್ರ ಶಿಕ್ಷಣದ ಸೌಲಭ್ಯವಿದೆ. ಬಸ್ ಸೌಲಭ್ಯ ಇಲ್ಲದ ಕಾರಣ ಇಲ್ಲಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ.

    ಗ್ರಾಮಸ್ಥರು ಉಳುಮೆ ಮಾಡುತ್ತಿದ್ದ ಜಮೀನು ತನಗೆ ಸೇರಿದ್ದು ಎಂದು ಅರಣ್ಯ ಇಲಾಖೆ ಜಮೀನನ್ನು ವಶಕ್ಕೆ ಪಡೆದಿದೆ.ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಜಮೀನು ವಾಪಸ್ ಸೇರಿದಂತೆ ಮೂಲಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts