More

    ಶಿವಮೊಗ್ಗ ಕ್ಷೇತ್ರದಲ್ಲಿ ದಾಖಲೆಯ ಮತದಾನ

    ಶಿವಮೊಗ್ಗ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಹೊಸ ದಾಖಲೆ ನಿರ್ಮಿಸಿದೆ. 1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಶೇ 75.13 ಮತ ಚಲಾವಣೆಯಾಗಿತ್ತು. 2019ರಲ್ಲಿ ಶೇ 76.40 ಮತದಾನವಾಗಿತ್ತು. ಆದರೆ ಈ ಚುನಾವಣೆಯಲ್ಲಿ ಶೇ.78.33 ಮತದಾನವಾಗಿದೆ. ಇದರೊಂದಿಗೆ ಕಳೆದ ಚುನಾವಣೆಯ ದಾಖಲೆ ಉಡೀಸ್ ಆಗಿದೆ.

    ಶಿವಮೊಗ್ಗ ಗ್ರಾಮಾಂತರದಲ್ಲಿ ಅತಿ ಹೆಚ್ಚು ಶೇ.83.65 ಮತ ಚಲಾವಣೆಯಾದರೆ, ಶಿವಮೊಗ್ಗ ನಗರದಲ್ಲಿ ಅತಿ ಕಡಿಮೆ ಶೇ.70.20 ಮತದಾನವಾಗಿದೆ. ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಈ ಭಾಗದಲ್ಲಿ ಹೆಚ್ಚು ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕೆಂಬ ಅಧಿಕಾರಿಗಳ ಆಸೆ ನೆರವೇರಿಲ್ಲ.
    ಈ ಚುನಾವಣೆಯಲ್ಲೂ ಶಿವಮೊಗ್ಗ ಹಾಗೂ ಭದ್ರಾವತಿ ಮತದಾರರು ನಿರಾಸಕ್ತಿ ತೋರಿದ್ದಾರೆ. ಶಿವಮೊಗ್ಗ ಕೆಲವು ಬೂತ್‌ಗಳಲ್ಲಿ ಮತದಾರರು ಉತ್ಸಾಹದಿಂದ ಆಗಮಿಸಿದ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆಗೆ ಕಾಯುತ್ತಿದ್ದುದನ್ನು ಗಮನಿಸಿದರೆ ಉತ್ತಮ ಮತದಾನವಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲೇ ಅತ್ಯಂತ ಕಡಿಮೆ ಮತದಾನ ಆಗಿರುವುದು ವಿಪರ್ಯಾಸ.
    ಮಹಿಳೆಯರೇ ಮುಂದು: ಲೋಕಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಮತಚಲಾವಣೆಯಲ್ಲೂ ಮಹಿಳೆಯೇ ಮೇಲುಗೈ ಸಾಧಿಸಿದ್ದಾರೆ. 8,62,789 ಪುರುಷ ಮತದಾರರ ಪೈಕಿ ಮತ ಚಲಾಯಿಸಿದವರು 6,80,534. ಒಟ್ಟು 8,90,061 ಮಹಿಳಾ ಮತದಾರರ ಪೈಕಿ 6,92,402 ಮಹಿಳೆಯರು ಹಕ್ಕು ಚಲಾಯಿಸಿದರು. ಒಟ್ಟು 35 ತೃತೀಯ ಲಿಂಗಿಗಳ ಪೈಕಿ 13 ಜನರು ಮಾತ್ರ ಮತದಾನ ಮಾಡಿದರು.
    ಸ್ಟ್ರಾಂಗ್ ರೂಂ ಸೇರಿದ ಇವಿಎಂ: ಲೋಕಸಭೆ ಚುನಾವಣೆಯ ಮತದಾನದ ನಂತರ ಜನರ ಗುಪ್ತ ನಿರ್ಧಾರವನ್ನು ಒಡಲಲ್ಲಿ ಅಡಗಿಸಿಕೊಂಡ ಮತಯಂತ್ರಗಳು ಸ್ಟ್ರಾಂಗ್ ರೂಂ ಸೇರಿವೆ. ಮಂಗಳವಾರ ರಾತ್ರಿ 10.30ರಿಂದ ಮತಯಂತ್ರಗಳನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗೆ ತರುವ ಕಾರ್ಯ ಆರಂಭವಾಯಿತು. ಅಂತಿಮವಾಗಿ ಬುಧವಾರ ಮಧ್ಯಾಹ್ನ 12ರ ವೇಳೆಗೆ ಎಂಟೂ ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳನ್ನು ಸ್ಟ್ರಾಂಗ್ ರೂಂಗೆ ತಂದು ಜೋಡಿಸುವ ಕೆಲಸ ಮುಕ್ತಾಯವಾಯಿತು. ಇಡೀ ಪ್ರಕ್ರಿಯೆಯನ್ನು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts