ಪ್ರತಿಭೆ ಅನಾವರಣಕ್ಕೆ ಅಗತ್ಯ ಸೂಕ್ತ ವೇದಿಕೆ: ಗೋಪಾಲ್ ಕಲ್ಲುಗುಡ್ಡೆ

camp
ಕಡಬ ಉಪ ತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಚಿಣ್ಣರ ಚಿತ್ತಾರ ಬೇಸಿಗೆ ಶಿಬಿರ ಉದ್ಘಾಟಿಸಿದರು.
Published on

ಕಡಬ: ಪ್ರತಿಯೊಂದು ಮಗುವಿನಲ್ಲಿಯೂ ಅದರದೇ ಆದ ಪ್ರತಿಭೆ ಹುದುಗಿರುತ್ತದೆ. ಅದನ್ನು ಹೊರತರಲು ಸೂಕ್ತ ವೇದಿಕೆ ಅಗತ್ಯ. ಬೇಸಗೆ ಶಿಬಿರಗಳು ಮಕ್ಕಳ ಸೃಜನಶೀಲತೆ ಒರೆಗೆ ಹಚ್ಚುವ ಕೆಲಸ ಮಾಡುತ್ತವೆ ಎಂದು ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಹೇಳಿದರು.

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಮಹಾಲಕ್ಷ್ಮಿ ಸ್ಪೋರ್ಟ್ಸ್ ಆ್ಯಂಡ್ ಸೈನ್ಸ್ ನೇತೃತ್ವದಲ್ಲಿ ಜೇಸಿಐ ಕಡಬ ಕದಂಬದ ಸಹಯೋಗದೊಂದಿಗೆ ಸುಳ್ಯದ ಫ್ಯೂಷನ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಸಂಸ್ಥೆ ನಡೆಸಿಕೊಡುವ ಒಂದು ವಾರದ ಚಿಣ್ಣರ ಚಿತ್ತಾರ-2024 ಬೇಸಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜೇಸಿಐ ಭಾರತದ ಸ್ಕಾಲರ್‌ಷಿಪ್ ವಿಭಾಗದ ಸಂಯೋಜಕ ಕಾಶೀನಾಥ್ ಗೋಗಟೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ತಿಳುವಳಿಕೆ ಹೊಂದಿರಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ಹೊಂದಿರಬೇಕು. ಅಂತೆಯೇ ಸರ್ಕಾರವೂ ಕೂಡ ಮಕ್ಕಳ ಆಸಕ್ತಿಗೆ ಪೂರಕವಾದ ಚಟುವಟಿಕೆ ಅನುಷ್ಠಾನಗೊಳಿಸುತ್ತಿದೆ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಗುರುತಿಸಲು ವೇದಿಕೆಯಾಗಿರುವ ಈ ರೀತಿಯ ಶಿಬಿರಗಳು ಎಲ್ಲೆಡೆ ನಡೆಯಬೇಕು ಎಂದರು.

ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಸುಳ್ಯದ ಫ್ಯೂಷನ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಸಂಸ್ಥೆ ನಿರ್ದೇಶಕ ವಸಂತ ಆಚಾರ್ಯ ಕಾಯರ್ತೋಡಿ, ಚಲನಚಿತ್ರ ನಿರ್ದೇಶಕ ಕುಮಾರ್ ಬೆಂಗಳೂರು, ಕಲಾ ನಿರ್ದೇಶಕ ಮಹೇಶ್ ಎಣ್ಮೂರು, ರಾಜ್‌ಮುಖೇಶ್ ಸುಳ್ಯ, ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.

ಜೇಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್ ಮಹ್ಮದ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಧನುಷ್ ಎಣ್ಮೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net