

ಬೀದರ್: ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಕಾನ್ಸ್ಟೆಬಲ್ ಚೇತನ್ ಸಿಂಗ್ ಎಂಬಾತ ಆರ್ಪಿಎಫ್ ಎಸ್ಐ ಮಾತ್ರವಲ್ಲದೆ ಇತರ ಮೂವರನ್ನು ನಿನ್ನೆ ರೈಲೊಳಗೇ ಗುಂಡಿಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಷನ್ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲೊಳಗೇ ಈ ಘಟನೆ ನಡೆದಿದ್ದು, ಕೊಲೆಗೀಡಾದ ಮೂವರು ಪ್ರಯಾಣಿಕರ ಪೈಕಿ ಒಬ್ಬರು ಕರ್ನಾಟಕದವರು. ಚೇತನ್ ಸಿಂಗ್ (34) ತನ್ನ ಹಿರಿಯ ಸಹೋದ್ಯೋಗಿ, ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಟಿಕಾರಾಮ್ ಮೀನಾ ಮಾತ್ರವಲ್ಲದೆ ಮೂವರು ಪ್ರಯಾಣಿಕರನ್ನೂ ಗುಂಡಿಟ್ಟು ಕೊಂದಿದ್ದ. ಆ ಮೂವರು ಪ್ರಯಾಣಿಕರ ಪೈಕಿ ಒಬ್ಬರು ಕರ್ನಾಟಕದ ಬೀದರ್ನ ಹಮೀಲಾಪುರ ನಿವಾಸಿ ಸೈಯದ್ ಸೈಫುದ್ದೀನ್ ಮುನಿರುದ್ದೀನ್ ಎಂಬುದು ಖಚಿತಪಟ್ಟಿದೆ.
ಸೈಫುದ್ದೀನ್ ಕಳೆದ ಹಲವು ವರ್ಷಗಳಿಂದ ಹೈದರಾಬಾದ್ನ ರಿಂಗ್ ಕೋಟಿ ಪ್ರದೇಶದ ಮೊಬೈಲ್ಫೋನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯ ಮಾಲೀಕರ ಜತೆ ರಾಜಸ್ಥಾನದ ಅಜ್ಮೇರ್ಗೆ ಹೋಗಿ ರೈಲಿನಲ್ಲಿ ಮರಳುವಾಗ ಈ ಘಟನೆ ಸಂಭವಿಸಿದೆ. ಸೈಫುದ್ದೀನ್ ಪತ್ನಿ ಹಾಗೂ ಮೂವರು ಪುತ್ರಿಯರು ಹಮೀಲಾಪುರದಲ್ಲಿ ವಾಸವಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತದೇಹ ಬುಧವಾರ ಬರಲಿದೆ ಎಂದು ಮೂಲಗಳು ತಿಳಿಸಿವೆ.