

ತುಮಕೂರು: ಕಳೆದ ತಿಂಗಳಲ್ಲಿ ಮೇಲಿಂದ ಮೇಲೆ ಅಪಘಾತ ಸಂಭವಿಸಿ ಸಾವು-ನೋವುಗಳು ಸಂಭವಿಸಿದ್ದ ತುಮಕೂರು ಜಿಲ್ಲೆಯಲ್ಲಿ ಇದೀಗ 24 ಗಂಟೆಗಳಲ್ಲಿ ನಾಲ್ಕು ಅಪಘಾತಗಳು ಸಂಭವಿಸಿ, ಒಟ್ಟು ನಾಲ್ವರು ಸಾವಿಗೀಡಾಗಿದ್ದಾರೆ.
ತಿಪಟೂರು ತಾಲೂಕಿನ ಕರಡಾಳು ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಶಾಂತನಹಳ್ಳಿ ಗ್ರಾಮದ ಸದಾಶಿವಯ್ಯ (62) ಸ್ಥಳದಲ್ಲೇ ಸಾವಿಗೀಡಾದರು. ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯ ಬಳಿ ಸಂಭವಿಸಿ ಮತ್ತೊಂದು ಅಪಘಾತದಲ್ಲಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಾಸನದ ಚೌಡನಕುಪ್ಪೆ ಗ್ರಾಮದ ಯುವಕ ಅಭಿಷೇಕ್ (23) ಮೃತಪಟ್ಟಿದ್ದಾನೆ.
ಇನ್ನೊಂದು ಅಪಘಾತದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಟಾಟಾ ಶೋ ರೂಂ ಮುಂಭಾಗ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಪುನೀತ್ ಕುಮಾರ್ (28) ಮೃತಪಟ್ಟಿದ್ದಾನೆ. ಮಗದೊಂದು ಅಪಘಾತದಲ್ಲಿ ಹಸುವಿಗೆ ಡಿಕ್ಕಿ ಹೊಡೆದು ಬಿದ್ದ ಬೈಕ್ ಸವಾರ ಸಾವಿಗೀಡಾಗಿದ್ದಾನೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಣ್ಣೇನಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಕಿಶೋರ್ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.