

ಮಾತನಾಡಿದಷ್ಟು ಮನಸ್ಸಿನ ಸಂಯಮ ಸುಲಭವಲ್ಲ ಎಂಬುದರ ಅರಿವೂ ಎಲ್ಲರಿಗಿದೆ. ಹಾಗಿದ್ದರೂ ಮನಸ್ಸಿಗೆ ಸಂಬಂಧಪಟ್ಟಂತೆ ಅನೇಕ ವಿಚಾರಗಳನ್ನು ವಿಮಶಿಸಿ ಲೋಕದ ಒಳಿತಿಗಾಗಿ ಬೋಧಿಸಿದ ಕೀರ್ತಿ ಭಾರತೀಯ ಪರಂಪರೆಗೆ ಸಲ್ಲುತ್ತದೆ. ಆರೋಗ್ಯ, ನೆಮ್ಮದಿ ಸದಾ ಇರಬೇಕೆಂದರೆ ಯಾವೆಲ್ಲ ರೂಪದಲ್ಲಿ ಸ್ವಪ್ರಯತ್ನ ಬೇಕು ಎಂಬುದನ್ನು ತಿಳಿಹೇಳಿದ ಪರಿ ಅಚ್ಚರಿ ಮೂಡಿಸುತ್ತದೆ.
ಇದೀಗ ಗುರುಪೂರ್ಣಿಮೆಯಿಂದ ದೇಶದೆಲ್ಲೆಡೆ ಇರುವ ಯತಿವರೇಣ್ಯರು, ಸನ್ಯಾಸಿಗಳು ಚಾತುರ್ವಸ್ಯ ವ್ರತದೀಕ್ಷೆ ಕೈಗೊಂಡಿದ್ದಾರೆ. ಈ ಚಾತುರ್ವಸ್ಯ ವ್ರತ ಕೇವಲ ಸಂ ನ್ಯಾಸಿಗಳಿಗೆ ಸಂಬಂಧಿಸಿದ್ದು ಎಂದು ಅಂದುಕೊಳ್ಳುವುದಿದೆ. ಅವರಿಗಿದು ವಿಶೇಷ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಶಾಸ್ತ್ರಗಳ ಪ್ರಕಾರ ಚಾತುರ್ವಸ್ಯ ಎಂಬುದು ಜನರೆಲ್ಲರೂ ಆಚರಿಸಲೇಬೇಕಾದ ವ್ರತ! ಆಷಾಢ ಮಾಸದ ಶುಕ್ಲಪಕ್ಷದ ಏಕಾದಶಿ, ದ್ವಾದಶಿ ಅಥವಾ ಹುಣ್ಣಿಮೆಯಂದು ಪ್ರಾರಂಭಿಸಿ ಕಾರ್ತೀಕ ಶುದ್ಧ ದ್ವಾದಶಿ ಅಂದರೆ ಉತ್ಥಾನ ದ್ವಾದಶಿಯವರೆಗೆ ಆಚರಿಸಬೇಕಾದ ಪರ್ವ ಕಾಲವಿದು.
ಯತಿಗಳು ಗುರುಪೂರ್ಣಿಮೆಯಿಂದಲೇ ವ್ರತಾನುಷ್ಠಾನ ಮಾಡುವುದು ಸಂಪ್ರದಾಯ. ಮಳೆಗಾಲದ ನಾಲ್ಕು ತಿಂಗಳು ಇದರ ಆಚರಣೆ ಆಗಿದ್ದರೂ ಪಕ್ಷವನ್ನೇ ಮಾಸವೆಂದು ಪರಿಗಣಿಸಿ ಕೇವಲ ಎರಡು ತಿಂಗಳುಗಳ ಕಾಲ ಚಾತುರ್ವಸ್ಯ ನಡೆಸುವುದು ರೂಢಿಯಲ್ಲಿದೆ. ದೇಹದ ಸಂಯಮ, ಮನಸ್ಸಿನ ನಿಯಂತ್ರಣ ಇವುಗಳು ಸ್ವಾಸ್ಥ್ಯದ ಎರಡು ಕಣ್ಣುಗಳೆಂದರೆ ಉತ್ಪ್ರೇಕ್ಷೆ ಆಗಲಾರದು. ಇದು ಸಾಧ್ಯವಾಯಿತೆಂದರೆ ಬದುಕು ಸಲೀಸು ಆಯಿತೆಂದೇ ಅರ್ಥ. ಇಂತಹ ಸಾಧನೆಗೆ ಪೂರಕ ಮಾಗೋಪಾಯವಾಗಿ ಶಾಸ್ತ್ರ ಪುರಾಣಗಳು ಕಂಡುಕೊಂಡ ದಿವ್ಯಶ್ರೇಷ್ಠ ಉತ್ತರಗಳಲ್ಲಿ ಚಾತುರ್ವಸ್ಯವೂ ಒಂದು.
ಆಹಾರದ ನಿಯಮಗಳ ಪಾಲನೆ, ಆಹಾರ ಶಿಸ್ತು, ಮನಸ್ಸಿಗೆ ಅಂಕುಶ, ನಾಲಿಗೆಗೆ ಕಡಿವಾಣ, ಶರೀರದ ಅಂಗಾಂಗಗಳ ಸಂಯಮ ಎಲ್ಲವುಗಳ ಸಿದ್ಧಿ ಈ ವ್ರತಾಚರಣೆಯಿಂದ ಆಗುವುದೆಂಬುದೇ ಆರೋಗ್ಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಈ ಸಮಯದಲ್ಲಿ ಬೆಲ್ಲ, ತೈಲ, ಸಾಸಿವೆ ಎಣ್ಣೆ, ತಾಂಬೂಲ, ಘೃತ, ಹಣ್ಣುಗಳು, ತರಕಾರಿಗಳು, ಮೊಸರು, ಹಾಲುಗಳನ್ನು ವಿವಿಧ ಹಂತಗಳಲ್ಲಿ ತ್ಯಾಗಮಾಡಲು ಹೇಳಿರುವುದು ವಿಶೇಷವಾಗಿದೆ. ಇವುಗಳಲ್ಲಿ ಪ್ರತಿಯೊಂದನ್ನು ತ್ಯಜಿಸುವುದರಿಂದ ದೊರಕುವ ಫಲಶ್ರುತಿಯನ್ನೂ ಹೇಳಲಾಗಿದೆ. ಬೆಲ್ಲ ಸೇವನೆ ಬಿಡುವುದರಿಂದ ಮಧುರವಾದ ಕಂಠಧ್ವನಿ, ಎಣ್ಣೆಯನ್ನು ತ್ಯಜಿಸುವುದರಿಂದ ಸುಂದರ ಶರೀರ, ಸಾಸಿವೆ ಎಣ್ಣೆ ಬಿಟ್ಟರೆ ಶತ್ರುನಾಶ, ತಾಂಬೂಲ ವರ್ಜಿಸಿದರೆ ಸುಖಭೋಗ, ತುಪ್ಪವನ್ನು ತ್ಯಾಗ ಮಾಡಿದರೆ ಲಾವಣ್ಯ, ಹಣ್ಣು ಸೇವನೆ ಮಾಡದಿರುವುದರಿಂದ ಬುದ್ಧಿಶಕ್ತಿ, ತರಕಾರಿ ತ್ಯಜಿಸಿದರೆ ಬಹುಪುತ್ರ ಭಾಗ್ಯ, ಮೊಸರು ಬಿಡುವುದರಿಂದ ಪಕ್ವಾನ್ನ ಲಾಭ ಹಾಗೂ ಹಾಲನ್ನು ತ್ಯಜಿಸುವುದರಿಂದ ಗೋಲೋಕ ಪ್ರಾಪ್ತಿ ಎಂಬ ಫಲಗಳು ದೊರೆಯುತ್ತವೆ ಎಂಬ ವರ್ಣನೆಯಿದೆ.
ನಾಲ್ಕು ತಿಂಗಳುಗಳ ಕಾಲಾವಧಿಯಲ್ಲಿ ನಾಲ್ಕು ವ್ರತಗಳ ಪಾಲನೆಯ ಅಧಿಸೂಚನೆಯಿದೆ. ಮೊದಲ ತಿಂಗಳು ಶ್ರಾವಣಮಾಸದಲ್ಲಿ ತರಕಾರಿಗಳನ್ನು ಬಿಟ್ಟಿರುವ ಶಾಕವ್ರತ ಆಚರಣೆ. ಎರಡನೆಯ ಭಾದ್ರಪದ ತಿಂಗಳು ದಧಿವ್ರತದಲ್ಲಿ ಮೊಸರು ರ್ವ್ಯಜ. ಮೂರನೆಯ ಆಶ್ವಿಜ ಮಾಸದ ಕ್ಷೀರವ್ರತದಲ್ಲಿ ಹಾಲು ಸೇವನೆ ಇಲ್ಲ. ಕೊನೆಯ ಕಾರ್ತೀಕ ತಿಂಗಳಿನಲ್ಲಿ ಧಾನ್ಯವ್ರತ ಅಂದರೆ ದ್ವಿದಳ ಧಾನ್ಯಗಳನ್ನು ಉಪಯೋಗಿಸದೆ ಮಾಡಲಾಗುವ ಪರ್ವಾಚರಣೆ. ದ್ವಿದಳಧಾನ್ಯಗಳು, ಸೀಬೆಹಣ್ಣು ಹಾಗೂ ಬದನೆಕಾಯಿಗಳನ್ನು ಸಂಪೂರ್ಣವಾಗಿ ಬಿಡಬೇಕೆಂಬ ನಿರ್ದೇಶನವಿದೆ.
ಎಲಚಿಹಣ್ಣು, ನೆಲ್ಲಿಕಾಯಿ, ಬೂದಗುಂಬಳಕಾಯಿ, ಮೂಲಂಗಿ, ಕಬ್ಬು ಹಾಗೂ ಹುಣಸೆಹಣ್ಣುಗಳನ್ನು ಸೇವಿಸದಿರುವುದು ಉತ್ತಮ ಎಂಬ ಬೋಧೆಯಿದೆ. ಜೇನುತುಪ್ಪ, ಮಾಂಸ, ಉಪ್ಪು, ಸ್ತ್ರೀಸಂಗ, ಸುಖದಾಯಕ ಹಾಸಿಗೆ, ಮಂಚಗಳನ್ನು ನಾಲ್ಕು ತಿಂಗಳುಗಳಲ್ಲಿ ತ್ಯಜಿಸಿರಬೇಕು ಎಂದು ವಿಧಿಸಲಾಗಿದೆ. ಆಯುರ್ವೆದವು ಕಾಲಕ್ಕನುಗುಣವಾಗಿ ಹೇಗೆ ಜೀವಿಸಬೇಕೆಂಬುದನ್ನು ಋತುಚರ್ಯುಯಲ್ಲಿ ಸುದೀರ್ಘವಾಗಿ ವಿವರಿಸಿದೆ. ಅಲ್ಲಿಯೂ ಈ ನಾಲ್ಕು ತಿಂಗಳಲ್ಲಿ ಇದೇ ರೀತಿಯ ಆಹಾರ ವ್ರತಾಚರಣೆಯನ್ನು ಹೇಳಿಲ್ಲ. ಅದು ವ್ಯಕ್ತಿಯ ದೈಹಿಕ ಸ್ವಾಸ್ಥ್ಯವನ್ನು ಕೇಂದ್ರೀಕರಿಸಿ ನೀಡಲಾಗಿರುವ ಸಲಹೆ.
ಚಾತುರ್ವಸ್ಯದಲ್ಲಿ ಇಂದ್ರಿಯ ಸಂಯಮದ ದೃಷ್ಟಿಕೋನದಲ್ಲಿ ನೀಡಲಾದ ಮಾರ್ಗದರ್ಶನ. ಅಂತಿಮವಾಗಿ ಇದೂ ಕೂಡ ಸ್ವಾಸ್ಥ್ಯದಾಯಕವೇ. ಆರೋಗ್ಯ ದೃಷ್ಟಿಕೋನದ ಚಿಂತನೆಯ ಭದ್ರವಾದ ಅಡಿಪಾಯವು ಚಾತುರ್ವಸ್ಯ ವ್ರತಕ್ಕೆ ಇನ್ನಷ್ಟು ವೈಜ್ಞಾನಿಕ ಮೆರುಗನ್ನು ನೀಡುತ್ತದೆ. ಶಾಸ್ತ್ರ ಹಾಗೂ ಆಯುರ್ವೆದ ಒಂದಕ್ಕೊಂದು ಪೂರಕವಾದ ಚಿಂತನೆಯ ಜ್ಞಾನರಾಶಿಯನ್ನು ಹೊಂದಿರುವುದು ಅವುಗಳ ಅರ್ನ್ಯಘತೆಯತ್ತ ಬೆಳಕು ಬೀರುತ್ತದೆ.