ಪಕ್ಷಿ ವಿಶೇಷ; ಹಾರುವ ಆಭರಣ ಹಮ್ಮಿಂಗ್ ಬರ್ಡ್

Humming Bird
Published on
ನವೀನ. ಪ್ಯಾಟಿಮನಿ

ಸ್ನೇಹಿತರೇ, ಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ ಕೊರಳ ಝೇಂಕಾರದ ಹಕ್ಕಿ (ಹಮ್ಮಿಂಗ್ ಬರ್ಡ್) ಅತ್ಯಂತ ಚಿಕ್ಕದಾಗಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ 343 ವಿವಿಧ ಹಮ್ಮಿಂಗ್ ಬರ್ಡ್ ಜಾತಿಗಳನ್ನು ಕಾಣಬಹುದು. ವಿನಾಶ ಮತ್ತು ಆವಾಸಸ್ಥಾನದ ನಷ್ಟವು ಕಾಡಿನಲ್ಲಿರುವ ಹಮ್ಮಿಂಗ್ ಬರ್ಡ್​ಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಗ್ಲೋಬಲ್ ವಾರ್ವಿುಗ್ (ಹವಾಮಾನ ಬದಲಾವಣೆಗಳು) ಅವುಗಳ ವಲಸೆಯ ನಮೂನೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಝೇಂಕರಿಸುವ ಹಕ್ಕಿಗಳ ಸಾಮಾನ್ಯ ನಡವಳಿಕೆಯನ್ನು ಬದಲಾಯಿಸುತ್ತದೆ.

ಹಮ್ಮಿಂಗ್ ಬರ್ಡ್ ಹಕ್ಕಿಗಳು 3.3-8 ಇಂಚುಗಳಷ್ಟು ಉದ್ದವನ್ನು ತಲುಪುತ್ತವೆ ಮತ್ತು 2 ಗ್ರಾಂ ನಿಂದ 20 ಗ್ರಾಂ ತೂಕ ಹೊಂದಿರುತ್ತವೆ. ಇವುಗಳನ್ನು ‘ಹಾರುವ ಆಭರಣಗಳು’ ಎಂದು ಕರೆಯಲಾಗುತ್ತದೆ, ಏಕೆಂದರೆ ಇವುಗಳು ಹಾರುವಾಗ ಗರಿಗಳ ಬಣ್ಣವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ಈ ವಿಶಿಷ್ಟ ಲಕ್ಷಣವು ಗರಿಗಳ ವರ್ಣವೈವಿಧ್ಯದ ಬಣ್ಣ ಮತ್ತು ಬೆಳಕು, ತೇವಾಂಶ ಮತ್ತು ಇತರ ಅಂಶಗಳ ಪ್ರಭಾವದ ಪರಿಣಾಮವಾಗಿದೆ.

ಹಾರಾಟದ ಸಮಯದಲ್ಲಿ ರೆಕ್ಕೆಗಳಿಂದ ಉತ್ಪತ್ತಿಯಾಗುವ ಝೇಂಕರಿಸುವ ಶಬ್ದದ ಪರಿಣಾಮವಾಗಿ ಇವುಗಳನ್ನು ಹಮ್ಮಿಂಗ್ ಬರ್ಡ್ಸ್ ಎಂದು ಹೆಸರಿಸಲಾಗಿದೆ. ಇವು ಬಹಳ ಬುದ್ಧಿವಂತ ಪಕ್ಷಿಗಳಾಗಿವೆ. ಇವು ಇತರ ಪಕ್ಷಿಗಳಿಗಿಂತ ದೊಡ್ಡ ಮೆದುಳಿನ ಗಾತ್ರವನ್ನು ಹೊಂದಿವೆ. ಇವುಗಳ ಮೆದುಳು ಒಟ್ಟು ದೇಹದ ತೂಕದ 4.2% ತೂಕವನ್ನು ಹೊಂದಿದೆ.
ಹಮ್ಮಿಂಗ್ ಬರ್ಡ್ಸ್​ಗಳು ಈಗಾಗಲೇ ಯಾವ ಹೂವನ್ನು ಭೇಟಿ ಮಾಡಿದ್ದವು ಎಂಬುದನ್ನು ನೆನಪಿಸಿಕೊಳ್ಳಬಹುದು ಮತ್ತು ಮಕರಂದವನ್ನು ಮರುಪೂರಣಗೊಳಿಸಲು ಪ್ರತಿ ಹೂವು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅವುಗಳಿಗೆ ತಿಳಿದಿರುತ್ತದೆ. ಇವು ನೇರಳಾತೀತ ಬೆಳಕನ್ನು ಸಹ ಪತ್ತೆ ಮಾಡಬಹುದು. ಇವುಗಳಿಗೆ ವಾಸನೆಯನ್ನು ಗ್ರಹಿಸುವ ಪ್ರಜ್ಞೆ ಇರುವುದಿಲ್ಲ. ಹಮ್ಮಿಂಗ್ ಬರ್ಡ್ಸ್ ಹೂವುಗಳನ್ನು ಪತ್ತೆಹಚ್ಚಲು ದೃಷ್ಟಿಯನ್ನು ಬಳಸುತ್ತವೆ. ಇವು ಕೊಳವೆಯಾಕಾರದ ಆಕಾರ ಹೊಂದಿರುವ ಕೆಂಪು ಹೂವುಗಳನ್ನು ಇಷ್ಟಪಡುತ್ತವೆ. ಝೇಂಕರಿಸುವ ಹಕ್ಕಿಗಳು ಉದ್ದವಾದ ಕೊಕ್ಕನ್ನು ಹೊಂದಿದ್ದು ಇದು ಹೂವಿನ ಕೆಳಭಾಗವನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಅದರೊಳಗಿನ ಮಕರಂದವನ್ನು ನೆಕ್ಕಲು ಬಳಸಲಾಗುವ ಕವಲೊಡೆಯುವ

ನಾಲಿಗೆಗೆ ಸಹಾಯ ಮಾಡುತ್ತದೆ. ಇವು ಒಂದೇ ಸೆಕೆಂಡಿನಲ್ಲಿ 70 ಬಾರಿ ರೆಕ್ಕೆಗಳನ್ನು ಚಲಿಸಬಲ್ಲವು. ಇತರ ಪಕ್ಷಿಗಳಿಗಿಂತ ಭಿನ್ನವಾಗಿ ಹಿಂದಕ್ಕೆ ಹಾರುವ ಸಾಮರ್ಥ್ಯ ಹೊಂದಿವೆ, ಇವು ರೆಕ್ಕೆಗಳನ್ನು ಚಲಿಸುವ ಮೂಲಕ ಪೂರ್ಣ ವೃತ್ತವನ್ನು ಮಾಡುತ್ತವೆ. ಈ ರೀತಿಯ ಹಾರಾಟಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ ಮತ್ತು ಇವು ಪ್ರತಿದಿನ ಸಾಕಷ್ಟು ಆಹಾರವನ್ನು ಸೇವಿಸುತ್ತವೆ. ಹಮ್ಮಿಂಗ್​ಬರ್ಡ್​ಗಳು ಕಾಬೋಹೈಡ್ರೇಟ್​ಗಳನ್ನು (ಸಕ್ಕರೆಗಳನ್ನು) ಹಾರಾಟಕ್ಕೆ ಶಕ್ತಿಯ ಮುಖ್ಯ ಮೂಲವಾಗಿ ಬಳಸುತ್ತವೆ. ಹೂವುಗಳಿಂದ ಮಕರಂದವು ಸಕ್ಕರೆಯ ಅತ್ಯುತ್ತಮ ಮೂಲವಾಗಿದೆ ಮತ್ತು ಹಮ್ಮಿಂಗ್

ಬರ್ಡ್ಸ್ ಪ್ರತಿ ಗಂಟೆಗೆ 5 ರಿಂದ 8 ಬಾರಿ ಕುಡಿಯುತ್ತವೆ. ಇವು ಆಹಾರವನ್ನು 30 ರಿಂದ 60 ಸೆಕೆಂಡುಗಳಲ್ಲಿ ತೆಗೆದುಕೊಳ್ಳುತ್ತವೆ. ಒಂದು ಹಮ್ಮಿಂಗ್ ಬರ್ಡ್ ಸಾಮಾನ್ಯವಾಗಿ ದಿನಕ್ಕೆ 1000 ಹೂವುಗಳನ್ನು ಭೇಟಿ ಮಾಡುತ್ತದೆ. ಹಮ್ಮಿಂಗ್ ಬರ್ಡ್​ಗಳು ಕೀಟಗಳನ್ನು ತಿನ್ನುತ್ತವೆ, ಕೀಟಗಳು ಸಾಕಷ್ಟು ಪ್ರೋಟೀನ್​ಗಳನ್ನು ಒದಗಿಸುತ್ತವೆ. ಹಮ್ಮಿಂಗ್​ಬರ್ಡ್ ನಂಬಲಾಗದಷ್ಟು ಹೆಚ್ಚಿನ ಹೃದಯ ಬಡಿತವನ್ನು ಹೊಂದಿದೆ. ಹಾರಾಟದ ಸಮಯದಲ್ಲಿ ಸರಾಸರಿ ಹೃದಯ ಬಡಿತ ನಿಮಿಷಕ್ಕೆ 1200 ಬೀಟ್ಸ್ ಆಗಿದೆ. ವಿಶ್ರಮಿಸುವಾಗ, ಹೃದಯ ಬಡಿತವು ಪ್ರತಿ ನಿಮಿಷಕ್ಕೆ 250 ಬಡಿತಗಳನ್ನು ತಲುಪುತ್ತದೆ.

ಪ್ರತಿ ರಾತ್ರಿ ಹಮ್ಮಿಂಗ್ ಬರ್ಡ್ಸ್ ಗಳು ಟಾಪೋರ್ ಎಂಬ ಹೈಬರ್ನೆಶನ್ ತರಹದ ಸ್ಥಿತಿಯನ್ನು ಪ್ರವೇಶಿಸುತ್ತವೆ, ಇದು ಶಕ್ತಿಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಹೃದಯ ಬಡಿತವು ನಿಧಾನಗೊಳ್ಳುತ್ತದೆ, ತಾಪಮಾನವು ಕಡಿಮೆಯಾಗುತ್ತದೆ ಮತ್ತು ಅವುಗಳ ಚಯಾಪಚಯ ಕ್ರೀಯೆಯು ಸಾಮಾನ್ಯವಾಗಿ 1/15 ಕ್ಕೆ ಕಡಿಮೆಯಾಗುತ್ತದೆ. ಇವು ಸಾಮಾನ್ಯವಾಗಿ ಈ ಹಂತದಲ್ಲಿ ಮರದಲ್ಲಿ ತಲೆಕೆಳಗಾಗಿಸಿ ನೇತಾಡುತ್ತವೆ. ಹೆಣ್ಣು ಸಾಮಾನ್ಯವಾಗಿ 2 ಮೊಟ್ಟೆಗಳನ್ನು ಇಡುತ್ತದೆ, ಮೊಟ್ಟೆಗಳು ತುಂಬಾ ಚಿಕ್ಕದಾಗಿರುತ್ತವೆ. ಮೊಟ್ಟೆಗಳು ತಾಯಿಯ ತೂಕದ 10 ಪ್ರತಿಶತವನ್ನು ಪ್ರತಿನಿಧಿಸುತ್ತವೆ. ಮಗುವಿಗೆ ಹಾರಲು ಸಾಧ್ಯವಿಲ್ಲ ಮತ್ತು ಇದು ಜೀವನದ ಮೊದಲ ಮೂರು ವಾರಗಳನ್ನು ಗೂಡಿನಲ್ಲಿಯೇ ಕಳೆಯುತ್ತದೆ. ಹೆಚ್ಚಿನ ಹಮ್ಮಿಂಗ್ ಬರ್ಡ್ಸ್ ತಮ್ಮ ಜೀವನದ ಮೊದಲ ವರ್ಷದಲ್ಲಿ ಸಾಯುತ್ತವೆ. ಬದುಕುಳಿದವುಗಳು, ಕಾಡಿನಲ್ಲಿ ಸರಾಸರಿ 5 ವರ್ಷಗಳು ಮತ್ತು ಸೆರೆಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿರುತ್ತವೆ.

(ಲೇಖಕರು ಚರ್ಮ ಪ್ರಸಾಧನ ಕಲಾ ತಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net